ಕರ್ನಾಟಕ

ನಕಲಿ ನೇಮಕಾತಿ ಆದೇಶ ಪ್ರತಿ ಹಿಡಿದು ಸೇನೆ ಸೇರಲು ಬಂದವರು ಜೈಲು ಪಾಲು!

Pinterest LinkedIn Tumblr

arrest

ದೇಬಬ್ರತ ರಾವತ್‌

ಬೆಂಗಳೂರು: ನಕಲಿ ನೇಮಕಾತಿ ಆದೇಶ ಪ್ರತಿ ಹಿಡಿದು ಸೇನೆ ಸೇರಲು ಬಂದಿದ್ದ ಎಂಟು ಯುವಕರು ಜೈಲು ಪಾಲಾಗಿದ್ದಾರೆ. ‘ಹರಿಯಾಣದ ಸಂದೀಪ್‌, ಪ್ರೀತಂ, ಮಂಜೀತ್‌, ಪವನ್‌ ಹಾಗೂ ಅವರ ನಾಲ್ವರು ಸ್ನೇಹಿತರನ್ನು ಬಂಧಿಸಲಾಗಿದೆ. ಅವರಿಂದ ಎಂಟು ನಕಲಿ ನೇಮಕಾತಿ ಆದೇಶಗಳನ್ನು ಜಪ್ತಿ ಮಾಡಲಾಗಿದೆ’ ಎಂದು ವಿವೇಕನಗರ ಪೊಲೀಸರು ತಿಳಿಸಿದರು.

‘ಜೂನ್‌ 25ರಂದು ನಗರಕ್ಕೆ ಬಂದಿದ್ದ ಯುವಕರು, ಇಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು.  ನೇಮಕಾತಿ ಆದೇಶದ ಪ್ರತಿಯೊಂದಿಗೆ ಸೇನೆಯ ತರಬೇತಿಗೆ ಹಾಜರಾಗಲು ಆರ್ಮಿ ಸಪ್ಲೈ ಕೋರ್‌ (ಎಎಸ್‌ಸಿ) ಮಂಗಳವಾರ (ಜುಲೈ 12) ಬಂದಿದ್ದರು. ಸೇನಾಧಿಕಾರಿಗಳು ಅವರ ದಾಖಲೆ ಪರಿಶೀಲನೆ ನಡೆಸಿದಾಗ ನೇಮಕಾತಿ ಆದೇಶವು ನಕಲಿ ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ವಿವರಿಸಿದರು. ‘ಸೇನಾಧಿಕಾರಿಯ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಯುವಕರನ್ನು ಬಂಧಿಸಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಅವರು ತಿಳಿಸಿದರು.

₹5 ಲಕ್ಷ ನೀಡಿ ಆದೇಶ ಪಡೆದಿದ್ದರು: ‘ಸೇನೆ ಸೇರುವ ಆಸೆಯೊಂದಿಗೆ ದೆಹಲಿಯಲ್ಲಿ ನಡೆದಿದ್ದ ದೇಹದಾರ್ಢ್ಯತೆ ಪರೀಕ್ಷೆಗೆ ಹಾಜರಾಗಿದ್ದೆವು. ಈ ವೇಳೆ ಸೇನಾಧಿಕಾರಿ ಎಂದು ಹೇಳಿಕೊಂಡಿದ್ದ ರೇಶಮ್‌ ಎಂಬಾತ ಪರಿಚಯವಾಗಿದ್ದ. ಆತನೇ ಈ ನೇಮಕಾತಿ ಆದೇಶ ಕೊಟ್ಟಿರುವುದಾಗಿ ಯುವಕರು ಹೇಳುತ್ತಿದ್ದಾರೆ’ ಎಂದು ತನಿಖಾಧಿಕಾರಿ ತಿಳಿಸಿದರು.

‘ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ನಾವು ವಾಪಸ್‌ ಊರಿಗೆ ಹೋಗಲು ಸಿದ್ಧರಾಗಿದ್ದೆವು. ಆಗ ನಮ್ಮ ಬಳಿ ಬಂದಿದ್ದ  ರೇಶಮ್‌, ತನಗೆ ಹಿರಿಯ ಅಧಿಕಾರಿಗಳ ಪರಿಚಯವಿದೆ. ಹಣ ಕೊಟ್ಟರೆ ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಅದನ್ನು ನಂಬಿ ಪ್ರತಿಯೊಬ್ಬರು ತಲಾ ₹5 ಲಕ್ಷ ಕೊಟ್ಟಿದ್ದೇವು’.

‘ಕಳೆದ ತಿಂಗಳು ಅಂಚೆ ಮೂಲಕ ನೇಮಕಾತಿ ಆದೇಶ ಕಳುಹಿಸಿದ್ದ ರೇಶಮ್‌, ಬೆಂಗಳೂರಿನ ಎಎಸ್‌ಸಿಯಲ್ಲಿ ತರಬೇತಿಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಬಂದ ಮೇಲೆಯೇ ನೇಮಕಾತಿ ಆದೇಶ ನಕಲಿ ಎಂಬುದು ಗೊತ್ತಾಗಿದ್ದು ಎಂದು ಯುವಕರು ಹೇಳಿಕೆ ನೀಡಿದ್ದಾರೆ’ ಎಂದು ತನಿಖಾಧಿಕಾರಿ ಮಾಹಿತಿ ನೀಡಿದರು.

‘ಯುವಕರ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಜತೆಗೆ ದೆಹಲಿ ಪೊಲೀಸರನ್ನು ಸಂಪರ್ಕಿಸಿ ರೇಶಮ್‌ ಎಂಬಾತನನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮೇಲ್ನೋಟಕ್ಕೆ ಇದೊಂದು ನಕಲಿ ನೇಮಕಾತಿ ಜಾಲವಿರಬಹುದು ಎಂಬ ಅನುಮಾನವಿದೆ. ಸೇನಾಧಿಕಾರಿಗಳು ದೂರು ನೀಡಿದ್ದು, ತನಿಖೆಗೆ ವಿಶೇಷ ತಂಡ ರಚಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಸೇನಾ ಉಡುಪು ತೊಟ್ಟಿದ್ದ: ‘ಆದೇಶ ಪ್ರತಿ ನೀಡಿರುವ ರೇಶಮ್‌, ಸೇನಾ ಉಡುಪು ತೊಟ್ಟಿದ್ದ’ ಎಂದು ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇಹದಾರ್ಢ್ಯತೆ ಪರೀಕ್ಷೆ ವೇಳೆ ಹಾಜರಿದ್ದ ಕೆಲ ಅಧಿಕಾರಿಗಳ ಹೆಸರು ಹೇಳಿದ್ದ ರೇಶಮ್‌್, ಈಗಾಗಲೇ ಹಲವರಿಗೆ ಕೆಲಸ ಕೊಡಿಸಿರುವುದಾಗಿ ನಂಬಿಸಿದ್ದನೆಂದು ಯುವಕರು ಹೇಳಿರುವುದಾಗಿ  ಪೊಲೀಸರು ತಿಳಿಸಿದರು.

ಒಡಿಶಾ ಮೂಲದ ನಕಲಿ ಸೇನಾಧಿಕಾರಿ ಬಂಧನ
ಬೆಂಗಳೂರು: ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ಅಮಾಯಕ ಯುವಕರನ್ನು ವಂಚಿಸುತ್ತಿದ್ದ ಆರೋಪದಡಿ ಒಡಿಶಾ ಮೂಲದ ದೇಬಬ್ರತ ರಾವತ್‌ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಕೆಲವು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ರಾವತ್, ಸೇನೆಯ ಉಡುಪು ತೊಟ್ಟು ತಾನು ಆರ್ಮಿ ಸಪ್ಲೈ ಕೋರ್‌ನಲ್ಲಿ (ಎಎಸ್‌ಸಿ) ಅಧಿಕಾರಿಯಾಗಿದ್ದೇನೆ. ನೇಮಕಾತಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ’ ಎಂದು ಹಲಸೂರು ಪೊಲೀಸರು ತಿಳಿಸಿದರು.

‘ಇತ್ತೀಚೆಗೆ ಒಡಿಶಾ ಮೂಲದ ಯುವಕನೊಬ್ಬ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಎಎಸ್‌ಸಿ ಬಳಿ ಓಡಾಡಿದ್ದ ಆತ, ಸೇನೆಯಲ್ಲಿ ಸೇರುವುದು ಹೇಗೆ? ಎಂದು ಕೆಲವರನ್ನು ವಿಚಾರಿಸಿದ್ದ. ಈ ವೇಳೆ  ಆತನಿಗೆ ಆರೋಪಿಯ ಪರಿಚಯವಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ತನಗೆ ಹಿರಿಯ ಅಧಿಕಾರಿಗಳು ಗೊತ್ತು. ಈಗಾಗಲೇ ಹಲವು ಯುವಕರನ್ನು ಸೇನೆಗೆ ಸೇರಿಸಿದ್ದೇನೆ ಎಂದಿದ್ದ ಆರೋಪಿ, ದುಡ್ಡು ಕೊಟ್ಟರೆ ಕೆಲಸ ಕೊಡಿಸುವುದಾಗಿ ಹೇಳಿದ್ದ.

ಅದನ್ನು ನಂಬಿದ್ದ ಯುವಕ ₹2.25 ಲಕ್ಷ ಹಣ ಕೊಟ್ಟಿದ್ದ.  ಹಣ ಪಡೆದಿದ್ದ ಆರೋಪಿಯು,  ನೇಮಕಾತಿ ಆದೇಶವೊಂದನ್ನು ನೀಡಿ ಜುಲೈ 12ರಂದು ತರಬೇತಿ ಇದ್ದು, ಎಎಸ್‌ಸಿ ಆಸ್ಪತ್ರೆ ಬಳಿ ಬರುವಂತೆ ಹೇಳಿದ್ದ’ ಎಂದು ಮಾಹಿತಿ ನೀಡಿದರು.

‘ಆದೇಶ ಪ್ರತಿಯನ್ನು ತನ್ನ ಸ್ನೇಹಿತರಿಗೆ ತೋರಿಸಿದಾಗ ಅದು ನಕಲಿ ಎಂಬುದು ಯುವಕನಿಗೆ ಗೊತ್ತಾಗಿದೆ. ಜತೆಗೆ ಜುಲೈ 12ರಂದು ಎಎಸ್‌ಸಿ ಬಳಿ ಹೋದಾಗ ಆರೋಪಿ  ಸ್ಥಳದಲ್ಲಿ ಇರಲಿಲ್ಲ.  ಮೋಸ ಹೋಗಿದ್ದು ಅರಿವಿಗೆ ಬರುತ್ತಿದ್ದಂತೆ ಠಾಣೆಗೆ ಬಂದು ದೂರು ನೀಡಿದ್ದಾನೆ’ ಎಂದು ತಿಳಿಸಿದರು.

‘ಪ್ರಕರಣ ದಾಖಲಿಸಿಕೊಂಡು ಎಎಸ್‌ಸಿ ಬಳಿ ತಪಾಸಣೆಗೆ ತೆರಳಿದ್ದಾಗ ಆರೋಪಿ ಅಲ್ಲಿಯೇ ಸಿಕ್ಕಿಬಿದ್ದಿದ್ದಾನೆ. ಆತ ಹಲವು ಯುವಕರಿಂದ ಹಣ ಪಡೆದು ವಂಚಿಸಿದ ಬಗ್ಗೆ ಮಾಹಿತಿ ಇದ್ದು, ಅದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

₹7– 8 ಲಕ್ಷ  ಪಡೆದು ವಂಚನೆ: ‘ಕೆಲಸ ಕೊಡಿಸುವುದಾಗಿ ಹೇಳಿ ಆರೋಪಿಯು ಇದುವರೆಗೆ ₹7–8 ಲಕ್ಷ ಪಡೆದು ವಂಚಿಸಿರುವುದು ಗೊತ್ತಾಗಿದೆ’ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.