ಕರ್ನಾಟಕ

ವಿಶ್ವ ಹಿಂದೂ ಪರಿ­ಷತ್‌ನ ಹಿರಿಯ ಮುಖಂಡ ಪ್ರವೀಣ್‌ ತೊಗಾಡಿಯಾ ಬೆಂಗಳೂರು ಪ್ರವೇಶ ನಿರ್ಬಂಧ: ಕಲಾಪ ಬಲಿ

Pinterest LinkedIn Tumblr

to

ಬೆಂಗಳೂರು: ಬೆಂಗಳೂರು ಪ್ರವೇಶಿಸ­ದಂತೆ ವಿಶ್ವ ಹಿಂದೂ ಪರಿ­ಷತ್‌ನ ಹಿರಿಯ ಮುಖಂಡ ಪ್ರವೀಣ್‌ ತೊಗಾಡಿಯಾ ಅವರ ಮೇಲೆ  ನಿಷೇಧ ಹೇರಿದ ಪೊಲೀಸರ ಕ್ರಮ ಬುಧವಾರ ವಿಧಾನ ಮಂಡಲದ ಉಭಯ ಸದನ­ಗಳಲ್ಲಿ ಪ್ರತಿಧ್ವನಿಸಿತು. ಇದ­ರಿಂದ ಭಾರೀ ಕೋಲಾಹಲ ಉಂಟಾಗಿ ಕಲಾಪ­ವನ್ನು ಗುರುವಾರಕ್ಕೆ ಮುಂದೂಡಲಾಯಿತು.

‘ತೊಗಾಡಿಯಾ ಮೇಲಿನ ನಿಷೇಧ ತೆಗೆದು ಹಾಕ­ಬೇಕು’ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರೆ, ‘ಆದೇಶ ಹಿಂಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಸಿ.ಎಂ ಸಿದ್ದ­ರಾಮಯ್ಯ ತಮ್ಮ ನಿಲುವಿಗೆ ಬಲವಾಗಿ ಅಂಟಿಕೊಂಡರು. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ಗದ್ದಲದಿಂದ ಕಲಾಪ ನಡೆಯಲಿಲ್ಲ.

ಕೆಳಮನೆಯಲ್ಲಿ: ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆ ವಿಷಯ ಪ್ರಸ್ತಾಪಿ­ಸಿದ ವಿರೋಧ ಪಕ್ಷದ ಉಪ ನಾಯಕ ಆರ್‌.ಅಶೋಕ್‌, ‘ತೊಗಾಡಿಯಾ ಅವ­ರಿಗೆ ಫೆ. 5ರಿಂದ 10ರ ವರೆಗೆ ನಗರ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಸರ್ಕಾರ ಹಿಂದೂಗ­ಳನ್ನು ದಮನ­ಮಾ­ಡಲು ಹೊರಟಿದೆ’ ಎಂದು ದೂರಿದರು. ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಸರ್ಕಾರ ಉದ್ದೇಶ­ಪೂರ್ವಕವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಲ್ಪಸಂಖ್ಯಾತರ ವಿಷಯದಲ್ಲಿ ಮಂಜುಗಡ್ಡೆಯಂತೆ ಕರಗುವ ಕಾಂಗ್ರೆಸ್‌, ತನ್ನ ಮತಬ್ಯಾಂಕ್‌ ರಕ್ಷಿಸಿಕೊಳ್ಳಲು ಈ ರೀತಿ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು.

‘ಭಟ್ಕಳದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವವರಿಗೆ ನೆರವು ನೀಡುವ ಕಾಂಗ್ರೆಸ್‌ ಸರ್ಕಾರ, ಹಿಂದೂ­ಗಳಾದ ನಮ್ಮನ್ನು ಮಾತ್ರ ತುಳಿಯಲು ಹೊರಟಿದೆ. ತೊಗಾಡಿಯಾ ಭಾಗವಹಿ­ಸುವ ಕಾರ್ಯಕ್ರಮದಿಂದ ಯಾವ ತೊಂದರೆಯೂ ಆಗುವುದಿಲ್ಲ. ಬೇಕಾದರೆ ವೀಕ್ಷಕರಾಗಿ ಸಚಿವ ಆರ್‌.ರೋಷನ್‌ ಬೇಗ್‌ ಅವರನ್ನು ನಿಯೋಜಿಸಿ’ ಎಂದರು.

ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಸದನದಲ್ಲಿ ಮುಖ್ಯಮಂತ್ರಿ ಹಾಜರಿದ್ದರೂ ಪರಿಹಾರ ಹೇಳುತ್ತಿಲ್ಲ. ಅವರು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಬಿಜೆಪಿ ಸದಸ್ಯರೆಲ್ಲ ಸಭಾಧ್ಯಕ್ಷರ ಪೀಠದ ಮುಂದೆ ಬಂದು ಧರಣಿ ಆರಂಭಿಸಿದರು. ಅದುವರೆಗಿನ ಕಲಾಪವನ್ನು ಸುಮ್ಮನೆ ಕುಳಿತು ವೀಕ್ಷಿಸುತ್ತಿದ್ದ ಸಿದ್ದರಾಮಯ್ಯ, ‘ಸಮಾಜದಲ್ಲಿ ಸಾಮರಸ್ಯ ಕದಡುವವರಿಗೆ, ಶಾಂತಿಗೆ ಭಂಗ ತರುವವರಿಗೆ, ದ್ವೇಷ ಬಿತ್ತುವವರಿಗೆ ಮಾತನಾಡುವ ಅವಕಾಶವನ್ನು ನೀಡಲು ಸಾಧ್ಯವೇ ಇಲ್ಲ’ ಎಂದು ಘೋಷಿಸಿದರು. ಮಧ್ಯಾಹ್ನದ ಭೋಜನ ವಿರಾಮದ ನಂತರ ಸದನ ಸೇರಿದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಬಿಜೆಪಿಯವರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರೆ, ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸದನವನ್ನು ಮುಂದೂಡಿದರು.

ಪರಿಷತ್ತಿನಲ್ಲೂ ಗದ್ದಲ: ತೊಗಾಡಿಯಾ ಪ್ರಕರಣ ವಿಧಾನ ಪರಿಷತ್ತಿನಲ್ಲೂ ಗದ್ದಲ ಉಂಟು ಮಾಡಿತು. ಮೀಟರ್‌ ಅಕ್ರಮದ ತನಿಖೆಗೆ ಒತ್ತಾಯಿಸಿ ನಡೆಸುತ್ತಿದ್ದ ಧರಣಿಯನ್ನು ಕೈಬಿಟ್ಟು ಬಿಜೆಪಿ ಸದಸ್ಯರು ತಮ್ಮ ಸ್ಥಾನಕ್ಕೆ ಮರಳಿ ಇನ್ನೇನು ಕಲಾಪ ಆರಂಭ­ವಾಗುತ್ತದೆ ಎಂದಾಗ ಎದ್ದು ನಿಂತ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ತೊಗಾಡಿಯಾ ಅವರ ಬೆಂಗಳೂರು ಭೇಟಿಗೆ ನಿರ್ಬಂಧ ಹೇರಿರುವ ಪೊಲೀಸರ ಕ್ರಮದ ವಿರುದ್ಧ ನಿಲುವಳಿ ಸೂಚನೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ  ಸಭಾ ನಾಯಕ ಎಸ್‌.ಆರ್‌. ಪಾಟೀಲ ಹಾಗೂ ಕಾಂಗ್ರೆಸ್‌ ಇತರ ಸದಸ್ಯರು, ಪ್ರಶ್ನೋತ್ತರ ಅವಧಿಗೂ ಮುನ್ನ ನಿಲುವಳಿ ಸೂಚನೆಗೆ ಅವಕಾಶ ನೀಡ­ಬಾರದು ಎಂದು ಮನವಿ ಮಾಡಿದರು. ಸದನದ ಸಂಪ್ರದಾಯದಂತೆ ಪ್ರಶ್ನೋತ್ತರ, ಶೂನ್ಯ ವೇಳೆಯ ಕಲಾಪದ ನಂತರ ನಿಲು­ವಳಿ ಸೂಚನೆಗೆ ಅವಕಾಶ ನೀಡುವುದಾಗಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ತಿಳಿಸಿದರು. ಆದರೆ, ಇದನ್ನು ಒಪ್ಪದ ಈಶ್ವರಪ್ಪ, ಪೊಲೀಸರು ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಮೊದಲು ಅನುಮತಿ ನೀಡಿದ್ದರು. ನಂತರ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ. ರಾಷ್ಟ್ರಭಕ್ತರಿಗೆ ಅವಕಾಶ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Write A Comment