ಕರ್ನಾಟಕ

ವೈದ್ಯರ ಕೊರತೆ: ಪಕ್ಷಭೇದ ಮರೆತು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆ

Pinterest LinkedIn Tumblr

speaker_0

ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದಲ್ಲಿ ವೈದ್ಯರ ಸಮಸ್ಯೆ ಹಾಗೂ ವೇತನದ ಕುರಿತು ಸ್ಪೀಕರ್ ಸೇರಿದಂತೆ ಸದಸ್ಯರು ವಿಧಾನಸಭೆಯಲ್ಲಿ ಗುರು­ವಾರ ಪಕ್ಷಭೇದ ಮರೆತು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವೈದ್ಯರ ಕೊರತೆ ಕುರಿತು ಕೃಷ್ಣರಾಜ­ನಗರದ ಸಾ.ರಾ.ಮಹೇಶ್ ಪರವಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರೇ ಪ್ರಶ್ನೆ ಕೇಳಿದರು. ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿ, ‘559 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹುದ್ದೆ ಖಾಲಿ ಇದೆ. ಇವನ್ನು ತುಂಬುವ ಕೆಲಸ ಕೆಪಿಎಸ್‌ಸಿಗೆ ವಹಿಸ­ಲಾ­ಗಿದೆ. ಆರು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣ­ಗೊಳಿಸ­­ಲಾಗುವುದು ಎಂದು ಆಯೋಗ ತಿಳಿಸಿದೆ. ಗುತ್ತಿಗೆ ಆಧಾರ­ದಲ್ಲಿ ನೇಮ­ಕಾತಿ ನಡೆಸಲು ಎಲ್ಲ ಜಿಲ್ಲಾಧಿ­ಕಾರಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ­ಗಳಿಗೆ ಅನುಮತಿ ನೀಡಲಾಗಿದೆ’ ಎಂದರು.

‘ಎಷ್ಟು ವರ್ಷಗಳಿಂದ ಹುದ್ದೆಗಳು ಖಾಲಿ ಇವೆ. ವೈದ್ಯರಿಗೆ ಎಷ್ಟು ವೇತನ ನೀಡುತ್ತಿದ್ದೀರಿ’ ಎಂದು ಸ್ಪೀಕರ್ ಪ್ರಶ್ನಿಸಿದರು. ‘ಕಾಯಂ ವೈದ್ಯರಿಗೆ ರೂ 52 ಸಾವಿರ ವೇತನ ನೀಡಲಾಗುತ್ತಿದೆ. ಗುತ್ತಿಗೆ ವೈದ್ಯ­ರಿಗೆ ಈಗ ರೂ 26 ಸಾವಿರ ವೇತನ ನೀಡಲಾಗುತ್ತಿದೆ’ ಎಂದು ಖಾದರ್ ಉತ್ತರಿಸಿದರು.

ಇದರಿಂದ ಕೆರಳಿದ ಸ್ಪೀಕರ್, ‘ಗುತ್ತಿಗೆ ವೈದ್ಯರಿಗೆ ನ್ಯಾಯಯುತ ವೇತನ ನೀಡುತ್ತಿಲ್ಲ. ಹೀಗಾಗಿ ಆರೋಗ್ಯ ಕೇಂದ್ರ­ಗಳಲ್ಲಿ ವೈದ್ಯರ ಕೊರತೆ ಉಂಟಾಗಿದೆ. ಊರಿನಲ್ಲಿ ನಮಗೆ ಮುಖ ತೋರಿಸಲು ಆಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಮುಷ್ಕರದ ನಂತರ ವೈದ್ಯರೊಂದಿಗೆ ರಾಜ್ಯ ಸರ್ಕಾರ ಸಂಧಾನ ಮಾಡಿ­ಕೊಂಡಿತ್ತು. ಬಳಿಕ ವೈದ್ಯರ ಸಂಬಳ ಹೆಚ್ಚಾ­ಗುವ ಬದಲು ಕಡಿಮೆ ಆಯಿತು. ವೈದ್ಯರು ಕೆಲಸ ಬಿಟ್ಟು ಹೋಗುತ್ತಿ­ದ್ದಾರೆ’ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ವಿ.ಸುನೀಲ್ ಕುಮಾರ್ಮತ್ತಿತರರು ಆರೋಪಿಸಿದರು.

ಕಾಂಗ್ರೆಸ್‌ನ ಕೆ.ಆರ್. ರಮೇಶ­ಕುಮಾರ್ ಮಾತನಾಡಿ, ‘ವೈದ್ಯರ ನೇಮಕ ಪ್ರಕ್ರಿಯೆಯನ್ನು ಸರಳಗೊಳಿಸಿ ಜಿಲ್ಲಾ ಮಟ್ಟದ ಪ್ರಾಧಿಕಾರದ ಮೂಲಕ ನಡೆಸಿ’ ಎಂದು ಸಲಹೆ ನೀಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರ­ಸ್ವಾಮಿ, ‘ರೂ 20 ಸಾವಿರ ವೇತನ ನೀಡಿ­ದರೆ ವೈದ್ಯರು ಬರಲ್ಲ. ಇದ್ದ ವೈದ್ಯರೂ ಕೆಲಸ ಬಿಟ್ಟು ಹೋಗುತ್ತಾರೆ’ ಎಂದು ಗಮನ ಸೆಳೆದರು.

ಖಾದರ್ ಉತ್ತರಿಸಿ, ‘ನೇರ ನೇಮಕಾತಿ ನಡೆಸಿ­ದರೆ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿ ತಡೆ ತರುತ್ತಾರೆ. ಹೀಗಾಗಿ ಕೆಪಿಎಸ್‌ಸಿ ಮೂಲಕ ನೇಮಕ ಮಾಡಲಾಗುತ್ತಿದೆ’ ಎಂದು ಸಮಜಾಯಿಷಿ ನೀಡಿದರು. ‘ಕಾಯಂ ವೈದ್ಯರ ವೇತನವನ್ನು ರೂ 70 ಸಾವಿರಕ್ಕೆ ಹಾಗೂ ಗುತ್ತಿಗೆ ವೈದ್ಯರ ವೇತನವನ್ನು ರೂ 31 ಸಾವಿರಕ್ಕೆ ಏರಿಸು­ವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ನೀಡ­ಲಾಗಿದೆ’ ಎಂದರು.

ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಎಷ್ಟು ದಿನಗಳು ಕಳೆದವು’ ಎಂದು ಪ್ರಶ್ನಿಸಿದ ಸ್ಪೀಕರ್, ‘ಆರ್ಥಿಕ ಇಲಾಖೆ ಬದಲು ಸಚಿವ ಸಂಪುಟ ಸಭೆಯಲ್ಲೇ ತೀರ್ಮಾನ ತೆಗೆದು­ಕೊಳ್ಳಬೇಕು’ ಎಂದರು. ‘ಆರ್ಥಿಕ ಇಲಾಖೆ ಪ್ರಸ್ತಾವ ವಾಪಸ್ ಕಳುಹಿಸಿ­ದರೆ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದರು. ‘ಮೂರು ದಿನಗಳಲ್ಲಿ ಕಡತ ವಾಪಸ್ ಕಳುಹಿಸದೇ ಇದ್ದಲ್ಲಿ ನಾನೇ ಆರ್ಥಿಕ ಇಲಾಖೆಗೆ ಹೋಗುತ್ತೇನೆ’ ಎಂದರು.

ದಾರಿ ತಪ್ಪಿಸುವ ಕಾರ್ಯದರ್ಶಿ: ‘ಎನ್ಆರ್ಎಚ್ಎಂ ವೈದ್ಯರಿಗೆ ಮಾಸಿಕ ರೂ1 ಲಕ್ಷ  ವೇತನ ನೀಡಲು ಸಿದ್ಧ’ ಎಂದು ಖಾದರ್ ಭರವಸೆ ನೀಡಿದರು. ‘ನಿಮ್ಮ ಇಲಾಖೆ ಕಾರ್ಯದರ್ಶಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ಸ್ವಲ್ಪ ಎಚ್ಚರಿಕೆ­ಯಿಂದ ಇರಿ’ ಎಂದು ಸಚಿವರಿಗೆ ಸ್ಪೀಕರ್ ಸಲಹೆ ನೀಡಿದರು. ‘ಸಚಿವರು ಉತ್ತರವನ್ನೇ ನೀಡಿಲ್ಲ’ ಎಂದು ಬಿಜೆಪಿ ಸದಸ್ಯರು ಗಲಾಟೆ ಆರಂಭಿಸಿದರು. ಮಧ್ಯಪ್ರವೇಶಿ­ಸಿದ ಕಾಗೋಡು  ‘ಶಸ್ತ್ರಚಿಕಿತ್ಸೆ ನಡೆಸ­ಲಾಗಿದೆ. ಫಲಿತಾಂಶಕ್ಕಾಗಿ ಕಾಯೋಣ’ ಎಂದು ವಿಷಯಕ್ಕೆ ತೆರೆ ಎಳೆದರು.

ನೀರಿಗಾಗಿ ಕಣ್ಣೀರಿಟ್ಟ ಶಿವಲಿಂಗೇಗೌಡ

ಅರಸೀಕೆರೆ ತಾಲ್ಲೂಕಿನ 477 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನಡೆದು ಎರಡು ವರ್ಷಗಳು ಕಳೆದಿವೆ. ಆದರೆ ಯೋಜನೆ ಮಾತ್ರ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ  ವಿಧಾನಸಭೆಯಲ್ಲಿ ಗುರುವಾರ ಕಣ್ಣೀರಿಟ್ಟರು.

ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ  ಸಚಿವ ಎಚ್.ಕೆ. ಪಾಟೀಲ, ‘ಟೆಂಡರ್ ಪಡೆದು ಅನುಷ್ಠಾನ ವಿಳಂಬ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೊಸದಾಗಿ ಟೆಂಡರ್ ಕರೆಯಲಾಗುವುದು’ ಎಂದು ಭರವಸೆ ನೀಡಿದರು

Write A Comment