ಕರ್ನಾಟಕ

ಖಚಿತವಾಗದ ಐಸಿಸ್ ಉಗ್ರರ ನಂಟು: ಕೇಂದ್ರ ತನಿಖಾ ತಂಡ ಬೆಂಗಳೂರಿಗೆ ಆಗಮನ

Pinterest LinkedIn Tumblr

iraq-crisis-kerala-nurses

ಬೆಂಗಳೂರು: ಐಎಸ್‌ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ) ಸಂಘಟನೆಯ ಪ್ರಮುಖ ಟ್ವಿಟರ್ ಖಾತೆಗಳಲ್ಲಿ ಒಂದಾಗಿರುವ ‘ಶಾಮಿ ವಿಟ್ನೆಸ್’ ಖಾತೆಯನ್ನು ಬೆಂಗಳೂರಿನಿಂದಲೇ ನಿರ್ವಹಣೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ತನಿಖೆ ನಡೆಸಲು ನಗರ ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತನಿಖಾ ತಂಡ ರಚಿಸಿದ್ದಾರೆ. ಆದರೆ ತನಿಖಾ ತಂಡಕ್ಕೆ ಶಾಮಿ ವಿಟ್ನೆಸ್ ಕೆಲಸ ಮಾಡುತ್ತಿದ್ದ ಕಂಪನಿಯಾಗಲಿ, ನೆಲೆಸಿದ್ದ ತಾಣವಾಗಲಿ ಸೇರಿದಂತೆ ಇದುವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ಮೆಹದಿ ಹೆಸರಿನ ವ್ಯಕ್ತಿ ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯ ಜಾಹೀರಾತು ವಿಭಾಗದ ಉದ್ಯೋಗಿ ಎನ್ನುವ ಸಂಗತಿ ಶುಕ್ರವಾರ ಸಂಜೆಯವರೆಗೂ ಹರಿದಾಡುತ್ತಿತ್ತು. ಆದರೆ ಸಂಜೆಯ ನಂತರ ಮತ್ತೊಂದು ಸುದ್ದಿ ಹರಡಿ ಆಹಾರ ತಯಾರಿಕಾ ಕಂಪನಿಯೊಂದರ ಉದ್ಯೋಗಿ ಎನ್ನುವ ಸಂಗತಿ ಜೀವ ಪಡೆದುಕೊಂಡಿತು. ಆದರೆ ತನಿಖೆಗೆ ಇಳಿದಿದ್ದ ತಂಡಕ್ಕೆ ಮಾತ್ರ ತಡರಾತ್ರಿಯವರೆಗೂ ಯಾವುದೇ ಖಚಿತವಾದ ಸುಳಿವಾಗಲೀ, ಪುರಾವೆಗಳಾಗಲೀ ಲಭ್ಯವಾಗಿಲ್ಲ.

ಕೇಂದ್ರ ತನಿಖಾ ತಂಡ ನಗರಕ್ಕೆ
ಶಾಮಿ ವಿಟ್ನೆಸ್ ಕುರಿತು ತನಿಖೆ ಆರಂಭಿಸಿರುವ ಕೇಂದ್ರ ತನಿಖಾ ತಂಡದ ಇಬ್ಬರು ಅಧಿಕಾರಿಗಳು ಶುಕ್ರವಾರ ಸಂಜೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ತಂಡಕ್ಕೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲಎಂದು ಮೂಲಗಳು ತಿಳಿಸಿವೆ.

ಸತ್ಯಾಸತ್ಯತೆ ಬಗ್ಗೆಯೇ ಅನುಮಾನ
ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಟ್ವಿಟರ್ ಖಾತೆ ತೆರೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಆಯುಕ್ತ ಎಂ.ಎನ್.ರೆಡ್ಡಿ ”ಎಲ್ಲೋ ಕುಳಿತು ತನ್ನನ್ನು ತಾನು ಬೆಂಗಳೂರಿನ ಉದ್ಯೋಗಿ ಎಂದು ತಮ್ಮ ಖಾತೆಯಲ್ಲಿ ಬರೆದುಕೊಳ್ಳಬಹುದು. ಆದ್ದರಿಂದ ಆ ವ್ಯಕ್ತಿ ನಿಜವಾಗಲೂ ಬೆಂಗಳೂರಿನವನಾ? ಬೆಂಗಳೂರಿನಿಂದಲೇ ಖಾತೆಯನ್ನು ನಿರ್ವಹಿಸುತ್ತಿದ್ದದ್ದು ನಿಜವೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ದಿಕ್ಕಿನಲ್ಲೂ ಸಿಸಿಬಿಯ ಒಂದು ತಂಡ ಕ್ರಿಯಾಶೀಲವಾಗಿದೆ,” ಎಂದು ತಿಳಿಸಿದರು.

ಸಾಮಾಜಿಕ ತಾಣಗಳನ್ನು ನಿರ್ವಹಿಸಬೇಕೆಂದರೆ ಇಂಗ್ಲಿಷ್ ಚೆನ್ನಾಗಿ ಬಲ್ಲವರಾಗಿದ್ದು, ವಿದ್ಯಾವಂತರಾಗಿರಬೇಕು. ಐಸಿಸ್ ಸಾಮಾಜಿಕ ತಾಣಗಳ ಮೂಲಕ ಇಂಥವರನ್ನೇ ಆಕರ್ಷಿಸುತ್ತಿದೆ. ಐಟಿ ರಾಜಧಾನಿಯಾದ ಬೆಂಗಳೂರಿನಲ್ಲಿ ಇಂಥವರಿಗೇನೂ ಕೊರತೆ ಇಲ್ಲ. ಹಾಗೆಯೇ ಜಗತ್ತಿನ ಎಲ್ಲಾ ದೇಶಗಳವರನ್ನೂ ತನ್ನಲ್ಲಿ ಇಟ್ಟುಕೊಂಡಿರುವ ಐಟಿ ಸಿಟಿಯಲ್ಲಿ ಯಾವ ದೇಶದವರೂ ಬೇಕಾದರೂ ಕುಳಿತು ಖಾತೆ ನಿರ್ವಹಿಸಬಹುದು. ಇದುವರೆಗೂ ಬೆಂಗಳೂರಿನಲ್ಲಿ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ವ್ಯಕ್ತಿ ಭಾರತೀಯನೇ ಅಥವಾ ವಿದೇಶಿ ಪ್ರಜೆಯೇ ಎನ್ನುವುದು ಮಾತ್ರ ಇದುವರೆಗೂ ಖಚಿತವಾಗಿಲ್ಲ.

ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿ ಆಗಿರುವ ವ್ಯಕ್ತಿ ‘ಮೆಹದಿ’ ಹೆಸರಿನಲ್ಲಿ ಟ್ವಿಟರ್‌ನಲ್ಲಿ ಸಂಭಾಷಿಸಿದ್ದಾನೆ. ಇದು ಆತನ ನಿಜವಾದ ಹೆಸರಾಗಿರುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸಂಶಯಿಸಿದ್ದಾರೆ.

ವಿದೇಶಿ ಟಿವಿಗೆ ಸಂದರ್ಶನ?
ಒಂದು ಕಡೆ ಶಾಮಿ ವಿಟ್ನೆಸ್‌ನ ಮೆಹದಿಯ ಬಗ್ಗೆ ತನಿಖೆಗೆ ಇಳಿದಿರುವ ಕೇಂದ್ರ ತನಿಖಾ ತಂಡ ಮತ್ತು ನಗರ ಪೊಲೀಸ್ ಅಧಿಕಾರಿಗಳಿಗೆ ಸಂಗತಿಯ ಸತ್ಯಾಸತ್ಯತೆ ಬಗ್ಗೆಯೇ ಇನ್ನೂ ಹಲವಾರು ಅನುಮಾನಗಳಿವೆ. ಆದರೆ ಬ್ರಿಟನ್‌ನ ನ್ಯೂಸ್ 4 ವಾಹಿನಿ ಆರೋಪಿ ಮೆಹದಿಯನ್ನು ಸಂದರ್ಶಿಸಿರುವುದಾಗಿ ಹೇಳಿಕೊಂಡಿದೆ.

ಸಂದರ್ಶನ ವಿವರವನ್ನು ತನ್ನ ವೆಬ್‌ನಲ್ಲಿ ಪ್ರಕಟಿಸಿರುವ ನ್ಯೂಸ್ 4, ಮೆಹದಿ ಪೊಲೀಸರಿಗೆ ಶರಣಾಗಲು ಸಿದ್ಧವಿರುವುದಾಗಿ ತಿಳಿಸಿದ್ದಾನಂತೆ. ತನಿಖೆಗೆ ಇಳಿದಿರುವ ಭಾರತೀಯ ಪೊಲೀಸರು ತನ್ನನ್ನು ಕೊಲ್ಲಬಹುದು. ಆ ನಂತರ ‘ನಾನು ಅವರ ಮೇಲೆ ದಾಳಿಗೆ ಯತ್ನಿಸಿದೆ’ ಎಂದು ಹೇಳಬಹುದು ಎಂದು ಹೇಳಿದ್ದಾನಂತೆ.

”ನಾನು ದೇಶದ ಕಾನೂನನ್ನು ಮುರಿದಿಲ್ಲ. ಯಾರಿಗೂ ತೊಂದರೆ ಕೊಟ್ಟಿಲ್ಲ. ದೇಶದ ಯಾವುದೇ ನಿಯಮವನ್ನು ಮುರಿದಿಲ್ಲ. ಭಾರತೀಯರ ವಿರುದ್ಧ ನಾನು ಯಾವುದೇ ಹಿಂಸೆ ನಡೆಸಿಲ್ಲ ಮತ್ತು ಯಾವುದೇ ಯುದ್ಧ ಮಾಡಿಲ್ಲ. ಭಾತರದ ಮಿತ್ರ ರಾಷ್ಟ್ರಗಳ ಜತೆಗೆ ಯುದ್ಧ ಘೋಷಿಸಿಲ್ಲ. ನಾನು ನಡೆದದ್ದನ್ನು ಟ್ವಿಟರ್‌ನಲ್ಲಿ ಹೇಳಿದೆ. ಜನ ನನ್ನನ್ನು ಹಿಂಬಾಲಿಸಿದರು. ನಂತರ ನನ್ನ ಮತ್ತು ನನ್ನ ಹಿಂಭಾಲಕರ ನಡುವೆ ಸಂಭಾಷಣೆ ನಡೆದಿದೆ. ಐಸಿಸ್ ಹೋರಾಟಗಾರರು ಮತ್ತು ಅವರ ಬಗ್ಗೆ ಅನುಕಂಪ ಉಳ್ಳವರು ಸಾರ್ವಜನಿಕ ಟ್ವಿಟರ್‌ನಲ್ಲಿ ಏನನ್ನು ಹೇಳಿಕೊಂಡಿದ್ದಾರೋ ಅದಷ್ಟೆ ನನಗೆ ಗೊತ್ತಿರುವುದು,” ಎಂದು ಮೆಹದಿ ನ್ಯೂಸ್ 4 ಜತೆಗೆ ಅಭಿಪ್ರಾಯ ಹಂಚಿಕೊಂಡಿದ್ದಾನೆ ಎನ್ನಲಾಗಿದೆ.
**

ಐಸಿಸ್ ಎಂದರೇನು?
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ದಿ ಲೆವಂಟ್ ಅಥವಾ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಎಸ್‌ಐಎಸ್ ಅಥವಾ ಐಸಿಸ್) ಎಂಬುದೊಂದು ಉಗ್ರ ಸಂಘಟನೆ. ಇರಾಕ್‌ನಲ್ಲಿ ಸದ್ದಾಂ ಹುಸ್ಸೇನ್‌ನನ್ನು ಹತ್ಯೆಗೈದ ಬಳಿಕ ಅಲ್ಲಿ ಶಿಯಾ ಪಂಗಡಕ್ಕೆ ಸೇರಿದ ನೂರ್ ಅಲ್ ಮಲಿಕಿ ಅವರಿಗೆ ದೇಶವನ್ನು ಪುನರ್ ನಿರ್ಮಿಸುವ ಹೊಣೆ ಹೊರಿಸಲಾಯಿತು. ಆದರೆ ಅವರು ಇರಾಕ್‌ನ ಅಲ್ಪಸಂಖ್ಯಾತ ಸುನ್ನಿ ಪಂಗಡದ ದಮನಕ್ಕೆ ನಿಂತಿದ್ದಾರೆ ಎಂದು ಆರೋಪಿಸಿ ಸುನ್ನಿ ಜಿಹಾದಿಗಳು ಸಂಘಟನೆ ಕಟ್ಟಿಕೊಂಡು ರಕ್ತಸಿಕ್ತ ಹೋರಾಟಕ್ಕೆ ನಿಂತರು. ಇರಾಕ್‌ನ ಬಹುಭಾಗ ಹಾಗೂ ಪಕ್ಕದ ಸಿರಿಯಾದ ಕೆಲ ಭಾಗಗಳನ್ನೂ ತಮ್ಮ ವಶಕ್ಕೆ ತೆಗೆದುಕೊಂಡು ಪ್ರತ್ಯೇಕ ದೇಶ ನಿರ್ಮಿಸಿಕೊಂಡರು. ಸುನ್ನಿಗಳಿಗಾಗಿ ಪ್ರತ್ಯೇಕ ದೇಶಗಳನ್ನು ನಿರ್ಮಿಸಿ ಅಲ್ಲಿ ಇಸ್ಲಾಂ ಕಾನೂನು ಜಾರಿ ಮಾಡುವುದು ಇವರ ಗುರಿಯಾಗಿದೆ. ಈಗ ಐಸಿಸ್ ಜಿಹಾದಿಗಳ ಕಬಂಧ ಬಾಹುಗಳು ಲಿಬಿಯಾ, ಈಜಿಪ್ತ್ ಸೇರಿದಂತೆ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ದಕ್ಷಿಣ ಹಾಗೂ ಆಗ್ನೇಯ ಏಷ್ಯಾದಲ್ಲಿಯೂ ಚಾಚುತ್ತಿವೆ.

Write A Comment