ಕರಾವಳಿ

ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟ ಉದ್ಘಾಟನೆ | ಕಬ್ಬಡಿ ಅಪ್ಪಟ ದೇಶಿ ಕ್ರೀಡೆ: ಮಂಜಯ್ಯ ಶೆಟ್ಟಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಬ್ಬಡಿ ಅಪ್ಪಟ ದೇಶಿಯ ಕ್ರೀಡೆ. ಹಿಂದಿನಿಂದಲೂ ಕಬ್ಬಡಿ ಹಾಗೂ ಕೋಕೋ ಆಟವು ಉತ್ತಮ ಮಟ್ಟದಲ್ಲಿ ನಡೆಯುತ್ತಿದ್ದು ಈಗಲೂ ಕೂಡ ಕಬ್ಬಡಿ ಕ್ರೀಡೆಗೆ ಮಹತ್ತರ ಸ್ಥಾನವಿದೆ. ಕ್ರೀಡೆಯೆಂದಾಗ ಸೋಲು, ಗೆಲುವು ನೋಡದೆ ಭಾಗವಹಿಸುವಿಕೆ ಮೂಲಕ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧಿಸಬೇಕು ಎಂದು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜಯ್ಯ ಶೆಟ್ಟಿ ಹೇಳಿದರು.

ಅವರು ಬುಧವಾರದಂದು ಉಡುಪಿ ಜಿಲ್ಲೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕುಂದಾಪುರದ ಬಿದ್ಕಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಕಬ್ಬಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳ ಕ್ರೀಡಾ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿದ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ ಸಿದ್ದಲಿಂಗಪ್ಪ ಮಾತನಾಡಿ, ದೇಸಿ ಕ್ರೀಡೆಯಾದ ಕಬ್ಬಡಿ ಅಪ್ಪಟ ಕ್ರೀಡೆಯಾಗಿದ್ದು ಅದನ್ನು‌ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಬಿದ್ಕಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಉತ್ತಮ ಕಲಿಕಾ ವಾತವರಣವಿದ್ದು ಇದು ಸರಕಾರಿ ಶಾಲೆಗೆ ಮಾದರಿ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಬಿದ್ಕಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯ ಉದಯ ಕುಮಾರ್ ಶೆಟ್ಟಿ, ಶಿಕ್ಷಕ ಸತೀಶ್ ಶೆಟ್ಟಿಗಾರ್ ಜಪ್ತಿ, ಸಿ.ಆರ್.ಪಿ ನಾಗರಾಜ ಆಚಾರ್ಯ, ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.

ಮೊಳಹಳ್ಳಿ ಗ್ರಾ.ಪಂ ಅಧ್ಯಕ್ಷೆ ಇಂದಿರಾ ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಕ್ರೀಡಾ ಜ್ಯೋತಿ ಪ್ರಜ್ವಲನೆಗೈದರು. ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ ಅಧ್ಯಕ್ಷ ಜಗನ್ನಾಥ ಶೆಟ್ಟಿ ಕಬ್ಬಡ್ಡಿ ಕ್ರೀಡಾಂಗಣ ಉದ್ಘಾಟಿಸಿದರು. ಗುತ್ತಿಗೆದಾರ ಎಂ. ದಿನೇಶ್‌ ಹೆಗ್ಡೆ ವಿದ್ಯಾರ್ಥಿಗಳ ಪಥಸಂಚಲನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹೊಂಬಾಡಿ-ಮಂಡಾಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಮಡಿವಾಳ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಘುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ, ಮೊಳಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಗೌತಮ ಶೆಟ್ಟಿ, ಪ್ರಾಂಶುಪಾಲ ವಿಘ್ನೇಶ್ವರ ಭಟ್, ಯುವಜನಸೇವೆ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಜೈನ್, ಕುಂದಾಪುರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಬೈಂದೂರು ವಲಯದ ಚಂದ್ರಶೇಖರ ಶೆಟ್ಟಿ, ಬ್ರಹ್ಮಾವರ ವಲಯದ ಪದ್ಮಾವತಿ, ಉಡುಪಿ ವಲಯದ ಗೋಪಾಲ ಶೆಟ್ಟಿ, ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಮಾರ್ ಹೆಗ್ಡೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾ. ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ತಾ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ, ನಿವೃತ್ತ ಶಿಕ್ಷಕ ಎಚ್. ಸುಬ್ಬಣ್ಣ ಶೆಟ್ಟಿ ಇದ್ದರು.

ಮೊಳಹಳ್ಳಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಶೆಟ್ಟಿ ಬೆಳಗೋಡು ಕಾರ್ಯಕ್ರಮ ನಿರೂಪಿಸಿ, ಬಿದ್ಕಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಸಹಶಿಕ್ಷಕ ಚಂದ್ರ ನಾಯ್ಕ್ ವಂದಿಸಿದರು.

Comments are closed.