ಕರಾವಳಿ

ಯುವ ಮೆರಿಡಿಯನ್‌ನಲ್ಲಿ ಬಾಕ್ಸ್ ಕ್ರಿಕೆಟ್ ಪಂದ್ಯ ಉದ್ಘಾಟಿಸಿ ಬ್ಯಾಟಿಂಗ್ ಮಾಡಿದ ಉಡುಪಿ ಡಿಸಿ (Video)

Pinterest LinkedIn Tumblr

ಕುಂದಾಪುರ: ಯುವ ಮೆರಿಡಿಯನ್ ಕುಂದಾಪುರ ಇವರ ಆಶ್ರಯದಲ್ಲಿ, ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವಿನೂತನವಾಗಿ ಸಜ್ಜುಗೊಳಿಸಿದ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.೧೩ ಶನಿವಾರ ಒಂದು ದಿನದ ಹಗಲು ರಾತ್ರಿಯ ಕಾರ್ಪೋರೆಟ್ ಬಾಕ್ಸ್ ಕ್ರಿಕೆಟ್ ಬ್ಯಾಶ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಉದ್ಘಾಟಿಸಿ ಮಾತನಾಡಿ, ಕೋಟೇಶ್ವರದಲ್ಲಿನ ಯುವ ಮೆರಿಡಿಯನ್ ಸಂಸ್ಥೆಯಲ್ಲಿನ ಈ ಉತ್ತಮ ವಾತಾವರಣದಲ್ಲಿ ಐಪಿ‌ಎಲ್ ಮಾದರಿಯಲ್ಲಿ ಈ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಂತಹ ವ್ಯವಸ್ಥೆ ಮಾಡಿರುವುದು ಅಭಿನಂದನಾರ್ಹವಾಗಿದ್ದು ಇದರ ಸದುಪಯೋಗವನ್ನು ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳು ಬಳಸಿಕೊಂಡು ಕ್ರೀಡೆಯಲ್ಲಿ ಸಾಧನೆ ಮಾಡಬೇಕಿದೆ. ಯುವ ಮೆರಿಡಿಯನ್ ಸಂಸ್ಥೆಯು ಯಾವುದೇ ಕಾರ್ಯಕ್ಕೆ ಕೈ ಹಾಕಿದರೂ ಅದು ಅತ್ಯದ್ಭುತವಾಗಿರುತ್ತದೆ. ಬಾಕ್ಸ್ ಕ್ರಿಕೆಟ್ ವ್ಯವಸ್ಥೆಯನ್ನು ಜಿಲ್ಲೆಗೆ ತಂದಿರುವುದು ಶ್ಲಾಘನೀಯ ಎಂದರು.

ಕಾನ್ಸ್‌ಟೆಬಲ್ ಪ್ರತಿಭೆ ಹೊಗಳಿದ ಡಿಸಿ..
ಪೊಲೀಸ್ ತಂಡವನ್ನು ಪ್ರತಿನಿಧಿಸುವ ಪೊಲೀಸ್ ಸಿಬ್ಬಂದಿ ಪ್ರಶಾಂತ್ ಪಡುಕೆರೆ ಅವರ ಕ್ರಿಕೆಟ್ ಆಟದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿ ಜಿ. ಜಗದೀಶ್ ಅವರು ಪ್ರಶಾಂತ್ ಅತ್ಯದ್ಭುತ ಆಟಗಾರನಾಗಿದ್ದು ಕೆಲ ದಿನ ಅವರೊಂದಿಗೆ ಆಟವಾಡಿದರೆ ನಾವು ಕೂಡ ಇನ್ನಷ್ಟು ಉತ್ತಮವಾಗಿ ಆಡಬಹುದು ಎಂದು ಅಭಿಪ್ರಾಯಪಟ್ಟರು.

ಬ್ಯಾಟಿಂಗ್ ಮಾಡಿದ ಜಿಲ್ಲಾಧಿಕಾರಿ..!
ಉದ್ಘಾಟನೆ ಕಾರ್ಯಕ್ರಮದ ಬಳಿಕ ಕ್ರೀಡಾಂಗಣಕ್ಕೆ ಎಸಿ ಹಾಗೂ ಡಿವೈ‌ಎಸ್ಪಿ ಹಾಗೂ ಗಣ್ಯರ ಜೊತೆಗೆ ಆಗಮಿಸಿದ ಡಿಸಿ ಅವರು ಹದಿನೈದು ನಿಮಿಷಗಳಿಗೂ ಅಧಿಕ ಕಾಲ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದರು. ಎಸಿ ರಾಜು ಕೆ, ಪೊಲೀಸ್ ಸಿಬ್ಬಂದಿ ಪ್ರಶಾಂತ್ ಹಾಗೂ ಇತರ ಆಟಗಾರರು ಡಿಸಿ ಅವರಿಗೆ ಬೌಲಿಂಗ್ ಮಾಡಿದರು. ರಜಾ ದಿನವಾದ್ದರಿಂದ ಕಾರ್ಯಕ್ರಮಕ್ಕೆ ಡಿಸಿ ತನ್ನ ಕುಟುಂಬಿಕರ ಜೊತೆಗೆ ಆಗಮಿಸಿದ್ದರು.

ಮುಖ್ಯ ಅಥಿತಿಗಳಾಗಿ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಡಿವೈ‌ಎಸ್ಪಿ ಶ್ರೀಕಾಂತ್, ಯುವ ಮೆರಿಡಿಯನ್ ಸಂಸ್ಥೆಯ ಉದಯ್ ಕುಮಾರ್ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ, ಟಾರ್ಪಡಸ್ ಕ್ರಿಕೇಟರ್ಸ್ ಗೌತಮ್ ಶೆಟ್ಟಿ, ಕೆ.ಎಂ.ಸಿ ಮಣಿಪಾಲದ ವೈಸ್ ಚಾನ್ಸಿಲರ್ ಡಾ. ವಿನೋದ್ ನಾಯಕ್, ಗಣ್ಯರಾದ ಅಭಿನಂದನ್ ಶೆಟ್ಟಿ, ರವಿಕಿರಣ್ ಕೋತ, ವಿಜಯ್ ಎಸ್ ಪೂಜಾರಿ, ಮನೋಜ್ ನಾಯರ್, ರಂಜಿತ್ ಶೆಟ್ಟಿ ಮೊದಲಾದವರಿದ್ದರು.

ಭಾಗವಹಿಸಿದ ತಂಡಗಳು:
ಕೋಸ್ಟಲ್ ವುಡ್ ಹೀರೋಸ್, ಎಮ್.ಆರ್.ಪಿ.ಎಲ್, ಉಡುಪಿ ಜಿಲ್ಲಾ ಪೊಲೀಸ್ ತಂಡ, ಜಿಲ್ಲಾಧಿಕಾರಿಗಳ ಕಛೇರಿಯ ತಂಡ, ಕೆ.ಎಮ್.ಸಿ ಮಣಿಪಾಲ ತಂಡ, ವೈದ್ಯರ ತಂಡ ಕುಂದಾಪುರ, ವಕೀಲರ ತಂಡ ಕುಂದಾಪುರ, ಎ.ಸಿ.ಆಫೀಸ್ ಕುಂದಾಪುರ, ಜನತಾ ಫಿಶ್ ಮೀಲ್ ಕೋಟ, ಲಯನ್ಸ್ ಕ್ಲಬ್ ಹಂಗಳೂರು, ರೋಟರಿ ಕ್ಲಬ್ ಕೋಟೇಶ್ವರ, ರೋಟರಿ ಕ್ಲಬ್ ಕುಂದಾಪುರ.

(ವರದಿ- ಯೋಗೀಶ್ ಕುಂಭಾಸಿ)

 

Comments are closed.