
ನವದೆಹಲಿ: ಈ ಬಾರಿ ಭಾರತ ಬಿಟ್ಟು ಹೊರಗಡೆ ಐಪಿಎಲ್ 13ನೇ ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆದ ಐಪಿಎಲ್ 13ನೇ ಆವೃತ್ತಿಯ ಆತಿಥ್ಯ ವಹಿಸಿದ ಯುಎಇ ಕ್ರಿಕೆಟ್ ಮಂಡಳಿಗೆ ಬಿಸಿಸಿಐ 100 ಕೋಟಿ ರೂ. ಮೊತ್ತವನ್ನು ಪಾವತಿಸಿದೆ ಎಂದು ವರದಿಯಾಗಿದೆ.
ಏಪ್ರಿಲ್-ಮೇನಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ ಟೂರ್ನಿ ಕರೊನಾ ಹಾವಳಿಯಿಂದಾಗಿ ಮುಂದೂಡಲ್ಪಟ್ಟಿತ್ತು. ಬಳಿಕ ಯುಎಇಗೆ ಸ್ಥಳಾಂತರಗೊಂಡಿತ್ತು. ಟೂರ್ನಿ ನಡೆಯದೆ ಹೋಗಿದ್ದರೆ ಬಿಸಿಸಿಐ ಬರೋಬ್ಬರಿ 4 ಸಾವಿರ ಕೋಟಿ ರೂ. ನಷ್ಟ ಅನುಭವಿಸುವ ಭೀತಿ ಎದುರಿಸಿತ್ತು.
ಯುಎಇಯಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಐಪಿಎಲ್ ಟೂರ್ನಿ ಆಯೋಜನೆಗೊಂಡಿತ್ತು. 2014ರಲ್ಲಿ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಯುಎಇ, ಟೂರ್ನಿಯ ಮೊದಲ 20 ಪಂದ್ಯಗಳಿಗೆ ಮಾತ್ರ ಆತಿಥ್ಯ ವಹಿಸಿತ್ತು. ಈ ಬಾರಿ ಟೂರ್ನಿ ಆಯೋಜನೆಯ ಬಗ್ಗೆ ಯುಎಇ ಕ್ರಿಕೆಟ್ ಮಂಡಳಿಯಿಂದಲೇ ಮೊದಲಿಗೆ ಆಹ್ವಾನ ಬಂದಿತ್ತು.
ಭಾರತದಲ್ಲಿ ಕರೊನಾ ಹಾವಳಿ ಕಡಿಮೆಯಾಗದಿದ್ದರೆ, 2021ರಲ್ಲಿ ನಡೆಯಬೇಕಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಐಪಿಎಲ್ 14ನೇ ಆವೃತ್ತಿಗೂ ಯುಎಇ ಬದಲಿ ತಾಣವಾಗಿದೆ. ಆದರೆ ಈ ಸರಣಿ ಮತ್ತು ಮುಂದಿನ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಹೆಚ್ಚಿನ ಒಲವು ಹೊಂದಿದೆ.
ಯುಎಇಗೆ ಕ್ರಿಕೆಟ್ ಮಂಡಳಿಗೆ ನೀಡಿರುವ ಮೊತ್ತದ ಹೊರತಾಗಿ ಅರಬ್ ರಾಷ್ಟ್ರ ಇತರ ಮೂಲಗಳಿಂದಲೂ ಸಾಕಷ್ಟು ಲಾಭ ಮಾಡಿಕೊಂಡಿದೆ. ಟೂರ್ನಿಯ ವೇಳೆ 3 ತಿಂಗಳ ಕಾಲ ಯುಎಇಯ 14 ಫೈವ್ಸ್ಟಾರ್ ಹೋಟೆಲ್ಗಳು ಬಹುತೇಕ ತುಂಬಿದ್ದವು. ಇದರ ಬಾಡಿಗೆಯಿಂದಲೂ ಅರಬ್ ರಾಷ್ಟ್ರ ಕೋಟ್ಯಂತರ ರೂ. ಆದಾಯ ಗಳಿಸಿದೆ.
Comments are closed.