ಕ್ರೀಡೆ

13ನೇ ಆವೃತ್ತಿಯ ಐಪಿಎಲ್‌ ವೇಳಾಪಟ್ಟಿ ಇಂದು ಬಿಡುಗಡೆ

Pinterest LinkedIn Tumblr


ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಂದು (ಭಾನುವಾರ) ಬಿಡುಗಡೆಯಾಗಲಿದೆ ಎಂದು ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತರಬೇತಿಯಲ್ಲಿ ತೊಡಗಿವೆ. 2020ರ ಐಪಿಎಲ್‌ ಟೂರ್ನಿಯು ಸೆ.19 ರಿಂದ ಆರಂಭಗೊಂಡು ನವೆಂಬರ್ 10 ರಂದು ಫೈನಲ್‌ ಮೂಲಕ ಅಂತ್ಯವಾಗಲಿದೆ ಎಂದು ಕಳೆದ ತಿಂಗಳು ಬಿಸಿಸಿಐ ಪ್ರಕಟಿಸಿತ್ತು. ಆದರೆ, ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಿರಲಿಲ್ಲ. ಶನಿವಾರ ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಸೆ.6 ರಂದು ಭಾನುವಾರ ಟೂರ್ನಿಯ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

“13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಸೆ.6 ರಂದು ಬಿಡುಗಡೆಯಾಗಲಿದೆ ,” ಎಂದು ಬ್ರಿಜೇಶ್‌ ಪಟೇಲ್ ಫೋನ್‌ ಮೂಲಕ ಹಿಂದೂಸ್ಥಾನ್‌ ಟೈಮ್ಸ್‌ಗೆ ಸ್ಪಷ್ಟಪಡಿಸಿದ್ದಾರೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು 2019 ರನ್ನರ್‌ ಅಪ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಟೂರ್ನಿಯ ಆರಂಭಿಕ ಪಂದ್ಯ ಜರುಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಸಿಎಸ್‌ಕೆ ಶಿಬಿರದಲ್ಲಿ ಇಬ್ಬರು ಆಟಗಾರರು ಸೇರಿದಂತೆ 13 ಸದಸ್ಯರಿಗೆ ಕೋವಿಡ್‌-19 ವರದಿ ಬಂದಿತ್ತು. ಇತ್ತೀಚೆಗೆ ನಡೆಸಿದ್ದ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಅಂತಿಮವಾಗಿ ಸಿಎಸ್‌ಕೆ ತಂಡ ಶುಕ್ರವಾರ ಮೊದಲನೇ ಬಾರಿ ದುಬೈನಲ್ಲಿ ಅಭ್ಯಾಸ ನಡೆಸಿತ್ತು.

ಕೋವಿಡ್-19 ಸೋಂಕು ತಗುಲಿದ್ದರಿಂದ ಆರಂಭಿಕ ಪಂದ್ಯದಲ್ಲಿ ಚೆನ್ನೈ ಫ್ರಾಂಚೈಸಿ ಆಡುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೂ ಸಿಎಸ್‌ಕೆ ಸಿಇಐ ವಿಶ್ವನಾಥನ್, ಅಗತ್ಯಬಿದ್ದರೆ ನಮ್ಮ ತಂಡ ಆರಂಭಿಕ ಪಂದ್ಯಕ್ಕೆ ಸಿದ್ದವಾಗಲಿದೆ ಎಂದು ಹೇಳಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಅಥವಾ ಸನ್‌ ರೈಸರ್ಸ್‌ ಹೈದರಾಬಾದ್‌ ಉದ್ಘಾಟನಾ ಪಂದ್ಯವಾಡಲಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಚೆನ್ನೈ ಫ್ರಾಮಚೈಸಿಯಲ್ಲಿ ಕೋವಿಡ್-19 ಪಾಸಿಟಿವ್‌ ಬಂದಿದ್ದರಿಂದ ಟೂರ್ನಿಯನ್ನು ತಡವಾಗಿ ಆರಂಭಿಸುವ ಬಗ್ಗೆಯೂ ಇತ್ತೀಚೆಗೆ ವರದಿಗಳಿಂದ ತಿಳಿದುಬಂದಿತ್ತು. ಆದರೆ, ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಅವರು ಯೋಜನೆಯಂತೆ ನಿಗದಿತ ದಿನಾಂಕದಲ್ಲಿ ಟೂರ್ನಿ ಆರಂಭವಾಗಲಿದೆ ಎಂದು ಹೇಳುವ ಮೂಲಕ ಈ ಎಲ್ಲಾ ಊಹಾಪೋಹಗಳನ್ನು ತಳ್ಳಿ ಹಾಕಿದ್ದರು.

“ನಿಗದಿಯಂತೆ ಸೆ.19 ರಿಂದಲೇ ಐಪಿಎಲ್‌ ಟೂರ್ನಿ ಆರಂಭವಾಗಲಿದ್ದು, ಈ ಬಗ್ಗೆ ಯಾವುದೇ ಅನುಮಾನವೇ ಇಲ್ಲ. ಆಟಗಾರರೆಲ್ಲರೂ ಕೋವಿಡ್‌-19 ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ ಹಾಗೂ ಪಂದ್ಯಗಳು ಪ್ರೇಕ್ಷಕರಿಲ್ಲದೆ ನಡೆಯುತ್ತವೆ. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

Comments are closed.