ಕ್ರೀಡೆ

ಐಪಿಎಲ್ 2020ನೇ ಆವೃತ್ತಿಯ ಪ್ರಾಯೋಜಕತ್ವದ ಬಿಡ್ಡಿಂಗ್‌ಗೆ ಬಾಬಾ ರಾಮ್ ದೇವ್ ಪತಂಜಲಿ ಚಿಂತನೆ

Pinterest LinkedIn Tumblr

ನವದೆಹಲಿ: ಐಪಿಎಲ್ 2020ನೇ ಆವೃತ್ತಿಯ ಪ್ರಾಯೋಜಕತ್ವದಿಂದ ಚೀನಾ ಮೂಲದ ವಿವೋ ಸಂಸ್ಥೆ ಹಿಂದಕ್ಕೆ ಸರಿದ ಬೆನ್ನಲ್ಲೇ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಅವರ ‍‘ಪತಂಜಲಿ ಆಯುರ್ವೇದ’ ಸಂಸ್ಥೆ ಬಿಡ್ಡಿಂಗ್‌ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಪತಂಜಲಿ ಬ್ರಾಂಡ್‌ಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಈ ವರ್ಷದ ಐಪಿಎಲ್ ಪ್ರಾಯೋಜಕತ್ವ ವಹಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕಂಪನಿಯ ವಕ್ತಾರ ಎಸ್.ಕೆ.ತಿಜಾರಾವಾಲ ಹೇಳಿದ್ದಾರೆ. ಪತಂಜಲಿ ಮಾತ್ರವಲ್ಲದೇ ಮುಖೇಶ್ ಅಂಬಾನಿ ಒಡೆತನಗ ಜಿಯೊ, ಅಮೆಜಾನ್, ಟಾಟಾ ಗ್ರೂಪ್ ಮತ್ತು ಅದಾನಿ ಗ್ರೂಪ್‌ಗಳೂ ಸಹ ಪ್ರಾಯೋಜಕತ್ವ ವಹಿಸಿಕೊಳ್ಳಲು ಉತ್ಸುಕವಾಗಿವೆ ಎಂದು ವರದಿ ಉಲ್ಲೇಖಿಸಿದೆ.

ಇನ್ನು ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ವಿವೊ ಅನ್ನು ಐಪಿಎಲ್ ಪ್ರಾಯೋಜಕತ್ವದಿಂದ ಬಿಸಿಸಿಐ ಇತ್ತೀಚೆಗೆ ಅಮಾನತುಗೊಳಿಸಿತ್ತು. ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಭಾರತ–ಚೀನಾ ಸೇನಾ ಪಡೆಗಳ ನಡುವೆ ಸಂಘರ್ಷ ನಡೆದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕರೆ ದೇಶದಲ್ಲಿ ತೀವ್ರಗೊಂಡಿತ್ತು. ಇದರ ಬೆನ್ನಲ್ಲೇ ಐಪಿಎಲ್ ಪ್ರಾಯೋಜಕತ್ವದಿಂದ ವಿವೊ ಅನ್ನು ಅಮಾನತುಗೊಳಿಸಲಾಗಿತ್ತು.

ಐಪಿಎಲ್‍ಗಾಗಿ ಬಿಸಿಸಿಐನೊಂದಿಗೆ 2018ರಲ್ಲಿ 5 ವರ್ಷಗಳ ಅವಧಿಗೆ 2,199 ಕೋಟಿ ರೂ.ಗಳ ಒಪ್ಪಂದವನ್ನು ವಿವೋ ಮಾಡಿಕೊಂಡಿತ್ತು. ಟೈಟಲ್ ಪ್ರಾಯೋಜಕತ್ವ ಒಪ್ಪದದಂತೆ ಪ್ರತಿ ವರ್ಷ 440 ಕೋಟಿ ರೂ.ಗಳನ್ನು ವಿವೋ ಬಿಸಿಸಿಐಗೆ ನೀಡುತ್ತಿತ್ತು. ಈ ಒಪ್ಪಂದ 2022ರ ಐಪಿಎಲ್ ಟೂರ್ನಿ ಬಳಿಕ ಮುಕ್ತಾಯವಾಗುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರಿಯರು ಸೇರಿದಂತೆ ಟೀಂ ಇಂಡಿಯಾ ಅಭಿಮಾನಿಗಳು ಐಪಿಎಲ್ ಪ್ರಯೋಜಕತ್ವದಿಂದ ಚೀನಾ ಮೂಲಕದ ವಿವೋ ಸಂಸ್ಥೆಯನ್ನು ಕೈಬಿಡಬೇಕು ಎಂದು ಬಿಸಿಸಿಐಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ವಿವೋ ಸ್ವಯಂ ಟೂರ್ನಿಯ ಟೈಟಲ್ ಪ್ರಯೋಜಕತ್ವದಿಂದ ಹಿಂದೆ ಸರಿದಿತ್ತು.

Comments are closed.