ಕ್ರೀಡೆ

ಟೆನಿಸ್​ ತಾರೆ ನವೊಮಿ ಒಸಾಕಾರಿಂದ ಬಿಕಿನಿ ಚಿತ್ರದ ಟೀಕೆಗೆ ತಿರುಗೇಟು

Pinterest LinkedIn Tumblr


ಟೋಕಿಯೊ: ವಿಶ್ವದ ಶ್ರೀಮಂತ ಟೆನಿಸ್​ ಆಟಗಾರ್ತಿಯಾಗಿ ಗುರುತಿಸಲ್ಪಟ್ಟಿರುವ ಜಪಾನ್​ನ ನವೊಮಿ ಒಸಾಕಾ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಕೆಲ ಬಿಕಿನಿ ಪೋಸ್​ಗಳ ಚಿತ್ರಗಳನ್ನು ಪ್ರಕಟಿಸಿದ್ದರು. ಅದರ ಬೆನ್ನಲ್ಲೇ ಭಾರಿ ಟೀಕೆಗಳಿಗೂ ಗುರಿಯಾಗಿದ್ದರು. ಇದಕ್ಕೀಗ ಟೆನಿಸ್​ ತಾರೆ ದಿಟ್ಟ ಪ್ರತಿಕ್ರಿಯೆಯ ಮೂಲಕ ತಿರುಗೇಟು ನೀಡಿದ್ದಾರೆ.

ಒಸಾಕಾ ಬಿಕಿನಿ ಚಿತ್ರಗಳನ್ನು ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು, ‘ನಿಮ್ಮ ಅಮಾಯಕ ವರ್ಚಸ್ಸು ಕಳೆದುಕೊಳ್ಳಬೇಡಿ’ ಎಂದು ಕಮೆಂಟ್​ ಹಾಕಿದ್ದರು. ಅದರ ಜತೆಜತೆಯಲ್ಲೇ, ‘ಉತ್ತಮ ಆದರ್ಶ ಆಟಗಾರ್ತಿಯಾಗಲು ಬಯಸುತ್ತೇನೆ ಎಂದು ನೀವೊಮ್ಮೆ ಪಂದ್ಯದ ಬಳಿಕ ಸಂದರ್ಶನದಲ್ಲಿ ಹೇಳಿದ್ದಿರಿ. ಆ ಮಾತನ್ನು ಉಳಿಸಿಕೊಳ್ಳಿ’ ಎಂದು ಮತ್ತೆ ಕೆಲವರು ಕಮೆಂಟ್​ ಹಾಕಿದ್ದರೆ, ‘ಇಂಥ ಅರೆಬೆನ್ನಲೆ ಚಿತ್ರಗಳನ್ನು ಯಾಕೆ ಹಾಕುತ್ತೀರಿ, ಸ್ವಲ್ಪಮಟ್ಟಿಗಾದರೂ ಗುಣಮಟ್ಟವನ್ನು ಕಾಪಾಡಿಕೊಳ್ಳಿ’ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದ್ದರು.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಯುಎಸ್​ ಮತ್ತು ಆಸ್ಟ್ರೇಲಿಯನ್​ ಓಪನ್​ ಚಾಂಪಿಯನ್​ ಒಸಾಕಾ, ‘ಅಮಾಯಕಿಯ ವರ್ಚಸ್ಸು ಕಾಪಾಡಿಕೋ ಎಂದು ಎಷ್ಟು ಜನರು ಹೇಳುತ್ತೀರಿ? ನಾನಲ್ಲದೆ ಇರುವುದನ್ನು ಹೇಳಲು ಬರಬೇಡಿ. ನಿಮಗೆ ಗೊತ್ತಿಲ್ಲವೇ ನನಗಿನ್ನೂ 22 ವರ್ಷ. ಈಜುಕೊಳಕ್ಕೆ ಇಳಿಯುವಾಗ ನಾನು ಈಜುಡುಪು ಧರಿಸುತ್ತೇನೆ. ನಾನೇನು ಧರಿಸಬೇಕೆಂದು ನೀವು ಯಾಕೆ ಕಮೆಂಟ್​ ಹಾಕುತ್ತೀರಿ’ ಎಂದು ತಿರುಗೇಟು ನೀಡಿದ್ದಾರೆ. ಇದರ ಬೆನ್ನಲ್ಲೇ ಒಸಾಕಾಗೆ ಕೆಲವರಿಂದ ಬೆಂಬಲವೂ ಹರಿದುಬಂದಿದೆ.

‘ನವೊಮಿ ಒಸಾಕಾ ಸತತ ಎರಡು ಗ್ರಾಂಡ್​ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ ರಾಣಿ. ಮಹಿಳಾ ಕ್ರೀಡಾಪಟುಗಳಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಆಟಗಾರ್ತಿ. ಆಕೆ ಏನನ್ನು ಪೋಸ್ಟ್​ ಮಾಡಬೇಕು ಮತ್ತು ಏನನ್ನು ಧರಿಸಬೇಕೆಂದು ಹೇಳಲು ಕೆಲ ಮೂರ್ಖರು ಪ್ರಯತ್ನಿಸುತ್ತಿದ್ದಾರೆ’ ಎಂದು ಅಭಿಮಾನಿಯೊಬ್ಬರು ಒಸಾಕಾಗೆ ಬೆಂಬಲ ಸೂಚಿಸಿದ್ದಾರೆ.

Comments are closed.