ಕ್ರೀಡೆ

ಡೈವೋರ್ಸ್ ನೀಡಿದ ಕೆಲ ಸಮಯದಲ್ಲಿ ಹೊಸ ಗೆಳತಿಯನ್ನು ಹುಡುಕಿಕೊಂಡ ಮೈಕಲ್‌ ಕ್ಲಾರ್ಕ್‌!

Pinterest LinkedIn Tumblr


ಹೊಸದಿಲ್ಲಿ: ಕೆಲ ತಿಂಗಳ ಹಿಂದಷ್ಟೇ ತಮ್ಮ ಪತ್ನಿ ಕೈಲಿ ಕ್ಲಾರ್ಕ್‌ಗೆ ವಿಚ್ಛೇದನ ನೀಡಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌, ಇದೀಗ ಫ್ಯಾಷನ್‌ ಡಿಸೈನರ್‌ ಹಾಗೂ ಮಾಡೆಲ್‌ ಆಗಿರುವ ಪಿಪ್‌ ಎಡ್ವರ್ಡ್ಸ್‌ ಅವರೊಂದಿಗೆ ಸಂಬಧ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಕೆಲ ದಿನಗಳಿಂದ ಈ ಜೋಡಿ ಜೊತೆ ಜೊತೆಯಾಗಿ ಓಡಾಡುತ್ತಿರುವ ಫೋಟೊಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ 39 ವರ್ಷದ ಮಾಜಿ ಬಲಗೈ ಬ್ಯಾಟ್ಸ್‌ಮನ್‌, ಪಿಪ್‌ ಎಡ್ವರ್ಡ್ಸ್‌ ತಮ್ಮ ನೂತನ ಗರ್ಲ್‌ಫ್ರೆಂಡ್‌ ಎಂಬುದನ್ನು ಖಾತ್ರಿ ಪಡಿಸಿದ್ದಾರೆ. ಈ ಮೂಲಕ ವಿಚ್ಛೇದನ ಪಡೆದ ನಾಲ್ಕೇ ತಿಂಗಳಲ್ಲಿ ಹೊಸ ಸಂಗಾತಿಯನ್ನು ಕ್ಲಾರ್ಕ್‌ ಹುಡುಕಿಕೊಂಡಿದ್ದಾರೆ.

“ಕಳೆದ ಫೆಬ್ರವರಿಯಲ್ಲಿ ನೂರಾರು ಕೋಟಿ ರೂ.ಗಳ ಭಾರಿ ಮೊತ್ತದ ಜೀವನಾಂಶ ಭರಿಸಿಕೊಟ್ಟು ಕೈಲಿ ಕ್ಲಾರ್ಕ್‌ ಅವರೊಟ್ಟಿಗಿನ ವಿವಾಹ ಬಾಂಧವ್ಯವನ್ನು ಮುರಿದುಕೊಂಡಿದ್ದ ಕ್ರಿಕೆಟ್‌ ತಾರೆ ಮೈಕಲ್‌ ಕ್ಲಾರ್ಕ್‌, ಇದೀಗ ಪಿ.ಇ ನೇಷನ್‌ ಆಕ್ಟೀವ್‌ ವೇರ್‌ನ ಸಹ ಮಾಲಕಿ ಪಿಪ್‌ ಎಡ್ವರ್ಡ್ಸ್‌ ಅವರೊಟ್ಟಿಗೆ ಸಂಬಂಧ ಹೊಂದಿರುವುದನ್ನು ಮೂಲಗಳು ಖಾತ್ರಿ ಪಡಿಸಿವೆ,” ಎಂದು ನ್ಯೂ ಸಿಡ್ನಿ ಹೆರಾಲ್ಡ್‌ ವರದಿಮಾಡಿದೆ.

ಕೈಲೀ ಕ್ಲಾರ್ಕ್‌ ಮತ್ತು ಮೈಕಲ್‌ ಕ್ಲಾರ್ಕ್‌ ಜೋಡಿಗೆ 4 ವರ್ಷದ ಕೆಲ್ಸೀ ಕ್ಲಾರ್ಕ್‌ ಹೆಸರಿನ ಮಗಳಿದ್ದಾಳೆ. ಮೈಕ್‌ ತಮ್ಮ ಮಗಳ ಸಲುವಾಗಿ ಪಿಪ್‌ ಎಡ್ವರ್ಡ್ಸ್‌ ಜೊತೆಗಿನ ಸಂಬಂಧದ ಕುರಿತಾಗಿ ಎಲ್ಲಿಯೂ ಈವರೆಗೆ ತುಟಿ ಬಿಚ್ಚಿರಲಿಲ್ಲ ಎಂದು ವದಂತಿ ಹಬ್ಬಿದೆ. ಆದರೀಗ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಕ್ಲಾರ್ಕ್‌, ತಮ್ಮ ಮತ್ತು ಪಿಪ್‌ ನಡುವಣ ಸಂಬಂಧವನ್ನು ಬಹಿರಂಗ ಪಡಿಸಿದ್ದಾರೆ.

ಇನ್ನು ಮೈಕಲ್‌ ಕ್ಲಾರ್ಕ್‌ ಮತ್ತು ಪಿಪ್‌ ಎಡ್ವರ್ಡ್ಸ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಇತ್ತೀಚೆಗೆ ಪಿಪ್‌ ಮಾಡಿದ್ದ ಒಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌. ಅದರಲ್ಲಿ ಬ್ಲೇಝರ್‌ ತೊಟ್ಟಿರುವ ಫೋಟೊ ಪ್ರಕಟಿಸಿದ್ದ 40 ವರ್ಷದ ಹೆಸರಾಂತ ಫ್ಯಾಷನ್‌ ಡಿಸೈನರ್‌ ಪಿಪ್‌, “ನಾನು ನನ್ನ ಬಾಯ್‌ಫ್ರೆಂಡ್‌ನ ಬ್ಲೇಝರ್‌ ತೊಟ್ಟಿದ್ದೇನೆ,” ಎಂದು ಬರೆದುಕೊಂಡಿದ್ದರು. ಇದಕ್ಕೆ ಮೈಕಲ್‌ ಕ್ಲಾರ್ಕ್‌ ಕೂಡ ಕಾಮೆಂಟ್‌ ಬರೆದಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಭಾರಿ ಯಶಸ್ಸು ಕಂಡಿರುವ ಮೈಕಲ್‌ ಕ್ಲಾರ್ಕ್‌, 2015ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ನಾಯಕತ್ವದಲ್ಲಿ ಆಸೀಸ್‌ಗೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಆಸ್ಟ್ರೇಲಿಯಾ ಪರ 115 ಟೆಸ್ಟ್‌ ಕ್ರಿಕೆಟ್‌ ಮತ್ತು 245 ಒಡಿಐ ಪಂದ್ಯಗಳನ್ನು ಆಡಿರುವ ಕ್ಲಾರ್ಕ್‌, ಒಟ್ಟಾರೆ 17 ಸಾವಿರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ.

Comments are closed.