ಕ್ರೀಡೆ

ಈ ಕೊರೊನಾ ಜೀವ ಬಲಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಜನರನ್ನು ದಿವಾಳಿ ಮಾಡುತ್ತದೆ

Pinterest LinkedIn Tumblr


ಕರಾಚಿ: ಕೊರೊನಾ ವೈರಸ್‌ ವಿಶ್ವ ವ್ಯಾಪಿ ತನ್ನ ರುದ್ರ ನರ್ತನ ಆರಂಭಿಸಿದ ದಿನದಿಂದಲೂ ಈ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಮಾತನಾಡಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಜಗತ್ತಿನಾದ್ಯಂತ ಇಂದು ಕೋವಿಡ್‌-19 ಸೋಂಕಿತರ ಸಂಖ್ಯೆ 9.5 ಲಕ್ಷ ಗಡಿ ದಾಟಿದ್ದು, ಈವರೆಗೆ 49 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೊರೊನಾ ವೈರಸ್‌ ಕುರಿತಾಗಿ ಜಾಗೃತ್ತಿ ಮೂಡಿಸಲು ಅಖ್ತರ್‌ ಈ ಮೊದಲು ಸಾಲು ಸಾಲು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರು.

ಅಷ್ಟೇ ಅಲ್ಲದೆ ವೈರಸ್‌ನಿಂದ ದೂರ ಉಳಿಯಲು ಏನೆಲ್ಲಾ ಮಾಡಬೇಕು ಎಂಬುದನ್ನೂ ಹೇಳಿಕೊಟ್ಟಿದ್ದ ಅಖ್ತರ್‌, ಈ ಮಧ್ಯೆ ವೈರಸ್‌ ಕಾಣಿಸಿಕೊಳ್ಳಲು ಕಾರಣರಾದ ಚೀನಾ ದೇಶದವರನ್ನೂ ಹಿಗ್ಗಾಮಗ್ಗಾ ಜಾಡಿಸಿದ್ದರು. ಜೊತೆಗೆ ಜಂಕ್‌ ಫುಡ್‌ ತಿಂದು ನಾವೆಲ್ಲ ಮಾನವನ ಶರೀರದ ರೋಗ ನಿರೋಧಕ ಶಕ್ತಿಯನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ಮೊದಲ ನಿಲ್ಲಿಸಬೇಕು ಎಂದೆಲ್ಲಾ ರಾವಲಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ಮಾಜಿ ವೇಗಿ ತಿಳಿ ಹೇಳಿದ್ದರು.

ಇದೀಗ ಅಚ್ಚರಿಯ ಟ್ವೀಟ್‌ ಒಂದನ್ನು ಮಾಡಿರುವ ಅಖ್ತರ್‌, ಕೊರೊನಾ ವೈರಸ್‌ ದೂರವಾಗುವ ಹೊತ್ತಿದೆ ವಿಶ್ವದಾದ್ಯಂತ ಸಂಭವಿಸುವ ಸಾವಿನ ಸಂಖ್ಯೆಗಿಂತಲೂ ದಿವಾಳಿ ಆಗುವವರ ಸಂಖ್ಯೆಯೇ ಹೆಚ್ಚಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕೋವಿಡ್‌-19 ವೈರಸ್‌ ಕೇವಲ ಪ್ರಾಣವನ್ನು ಮಾತ್ರವೇ ಬಲಿ ತೆಗೆದುಕೊಳ್ಳುವುದಿಲ್ಲ ಹಿಂದೆಂದೂ ಕಾಣದ ಆರ್ಥಿಕ ಸಂಕಷ್ಟವನ್ನೂ ತಂದೊಡ್ಡುತ್ತದೆ ಎಂದು ಅಖ್ತರ್‌ ಎಚ್ಚರಿಸಿದ್ದಾರೆ.

“ಈ ಕೊರೊನಾ ವೈರಸ್‌ ಸಾಂಕ್ರಾಮಿಕ ಮಹಾಮಾರಿಯು ಜೀವಗಳನ್ನು ಬಲಿ ತೆಗೆದುಕೊಳ್ಳುವುದಕ್ಕಿಂತಲೂ ಹೆಚ್ಚಿನ ಜನರನ್ನು ದಿವಾಳಿಯಾಗುವಂತೆ ಮಾಡುತ್ತದೆ,” ಎಂದು ಗುರುವಾರ ಅಖ್ತರ್‌ ಟ್ವೀಟ್‌ ಮಾಡಿದ್ದಾರೆ. ವಿಶ್ವದ ಆರ್ಥಿಕತೆ ಈ ವರ್ಷ ರಿಸೆಷನ್‌ಗೆ ಒಳಪಡಲಿದೆ ಎಂದು ವರದಿಗಳು ಹೊರಬರುತ್ತಿದದ್ದಂತೆಯೇ ಅಖ್ತರ್‌ ಈ ರೀತಿಯ ಟ್ವೀಟ್‌ ಹರಿಬಿಟ್ಟಿದ್ದಾರೆ.

ಕೊರೊನಾ ವೈರಸ್‌ ತಂದೊಡ್ಡುವ ಆರ್ಥಿಕ ದುಸ್ಥಿತಿಯು ಜಗತ್ತಿನ ಎಲ್ಲಾ ರಾಷ್ಟ್ರಗಳ ಮೇಲೆ ಪ್ರಭಾವ ಬೀರಲಿದ್ದು, ಚೀನಾ ಮೇಲೆ ಇದರ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುವ ರಾಷ್ಟ್ರಗಳ ನೆರವಿಗಾಗಿ 2.5 ಟ್ರಿಲಿಯನ್‌ ಅಮೆರಿಕನ ಡಾಲರ್‌ಗಳ ಭಾರಿ ಮೊತ್ತದ ಪರಿಹಾರ ಒದಗಿಸಲು ವಿಶ್ವಸಂಸ್ಥೆ ಮುಂದಾಗಿದೆ.

Comments are closed.