ಕ್ರೀಡೆ

ಪೌರತ್ವ ಕಾಯ್ದೆ ವಿವಾದಕ್ಕೆ ನನ್ನ ಪುತ್ರಿಯನ್ನು ಎಳೆದುತರಬೇಡಿ; ಸೌರವ್ ಗಂಗೂಲಿ

Pinterest LinkedIn Tumblr


ನವದೆಹಲಿ (ಡಿಸೆಂಬರ್ 19): ನನ್ನ ಮಗಳು ಇನ್ನೂ ಚಿಕ್ಕವಳು. ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ಅವಳಿಂದ ಸಾಧ್ಯವಿಲ್ಲ. ಹೀಗಾಗಿ ಅವಳನ್ನು ಈ ವಿವಾದಗಳ ನಡುವೆ ಎಳೆದು ತರಬೇಡಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮನವಿ ಮಾಡಿಕೊಂಡಿದ್ದಾರೆ.

ಪೌರತ್ವ ನಿಷೇಧ ಕಾಯ್ದೆ ಹಾಗೂ ಇದನ್ನು ವಿರೋಧಿಸಿದ ಹೋರಾಟ ರಾಷ್ಟ್ರವ್ಯಾಪಿ ದಿನೇ ದಿನೇ ಕಾವೇರುತ್ತಲೇ ಇದೆ. ಅಲ್ಲದೆ, ಪ್ರತಿಭಟನಾ ನಿರತ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ ಹಾಗೂ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಸುದ್ದಿ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಈ ನಡುವೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಸೌರವ್ ಗಂಗೂಲಿ ಅವರ 18 ವರ್ಷದ ಮಗಳು ಸನಾ ಗಂಗೂಲಿ ಖಂಡಿಸಿದ್ದರು. ಅಲ್ಲದೆ, ಖ್ಯಾತ ಬರಹಗಾರ ಖುಷ್ವಂತ್ ಸಿಂಗ್ ಅವರ “ದಿ ಎಂಡ್ ಆಫ್ ಇಂಡಿಯಾ” ಪುಸ್ತಕದ ಆಯ್ದ ಭಾಗಗಳನ್ನು ತಮ್ಮ ಖಾಸಗಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು.

ಸನಾ ಗಂಗೂಲಿ ಬರಹದ ಸಾರ ಇಲ್ಲಿದೆ: “ಪ್ರತಿಯೊಂದು ಫ್ಯಾಸಿಸ್ಟ್ ಆಡಳಿತ ಅಭಿವೃದ್ಧಿ ಹೊಂದಲು ಒಂದು ಸಮುದಾಯ ಅಥವಾ ಗುಂಪಿನ ಅವಶ್ಯಕತೆ ಇರುತ್ತದೆ. ಆದರೆ, ಇದು ಎಂದಿಗೂ ಮುಗಿಯುವುದಿಲ್ಲ. ದ್ವೇಷದ ಮೇಲೆ ನಿರ್ಮಿಸಲಾದ ಚಳುವಳಿ ನಿರಂತರವಾಗಿ ಭಯ ಮತ್ತು ಕಲಹಗಳನ್ನು ಸೃಷ್ಟಿಸುವುದರ ಮೂಲಕ ತನ್ನನ್ನು ತಾನು ಉಳಿಸಿಕೊಳ್ಳುತ್ತದೆ.

ತಾವು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರಲ್ಲ ಎಂಬ ಕಾರಣಕ್ಕೆ ತಮ್ಮನ್ನು ತಾವು ಸುರಕ್ಷಿತರು ಎಂದು ಭಾವಿಸಿರುವವರು ಮೂರ್ಖರ ಸ್ವರ್ಗದಲ್ಲಿ ಬದುಕುತ್ತಿದ್ದಾರೆ. ಸಂಘ ಈಗಾಗಲೇ ಎಡಪಂಥೀಯ ಇತಿಹಾಸಕಾರರನ್ನು, ಪಾಶ್ಚಾತ್ಯ ಸಂಸ್ಕೃತಿ ಮೈಗೂಡಿಸಿಕೊಂಡ ಯುವಸಮುದಾಯವನ್ನು ಟಾರ್ಗೆಟ್ ಮಾಡಿದೆ. ನಾಳೆ ತನ್ನ ದ್ವೇಷವನ್ನು ಸ್ಕರ್ಟ್ ಧರಿಸುವ ಹೆಣ್ಣುಮಕ್ಕಳ ಮೇಲೆ ಕಾರಿಕೊಳ್ಳುತ್ತದೆ.

ಮಾಂಸ ತಿನ್ನುವ ಜನರು, ಮದ್ಯಪಾನ ಮಾಡುವವರು, ವಿದೇಶಿ ಸಿನಿಮಾ ನೋಡುಗರು, ತೀರ್ಥಯಾತ್ರೆಗೆ ಹೋಗದವರು, ದಂತ್ ಮಂಜನವಲ್ಲದೆ ಟೂತ್ ಪೇಸ್ಟ್ ಬಳಸುವವರು, ಜೈಶ್ರೀರಾಮ್ ಹೇಳುವ ಬದಲು ಶೇಕ್ ಹ್ಯಾಂಡ್ ಮಾಡುವವರು ಅಥವಾ ಕಿಸ್ ಮಾಡುವವರು ಎಲ್ಲರೂ ಇವರ ಶಿಕಾರಿಯಾಗುತ್ತಾರೆ. ಯಾರೂ ಇಲ್ಲಿ ಸುರಕ್ಷಿತರಲ್ಲ. ಭಾರತವನ್ನು ಜೀವಂತವಾಗಿ ಉಳಿಸಿಕೊಳ್ಳಬೇಕೆಂದರೆ ಇದೆಲ್ಲವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.” ಎಂದು ಬರೆದುಕೊಂಡಿದ್ದರು.

ಮಾಜಿ ಕ್ರಿಕೆಟಿಗ ವೀರೇಂದ್ರ ಶೆವ್ಹಾಗ್ ಸಹ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲೇ ಓದಿದವರು. ಆದರೆ, ಈ ದೌರ್ಜನ್ಯದ ಕುರಿತು ಇಡೀ ಕ್ರಿಕೆಟ್ ಮತ್ತು ಕ್ರೀಡಾ ಸಮುದಾಯ ಮೌನಕ್ಕೆ ಶರಣಾಗಿದ್ದ ಸಂದರ್ಭದಲ್ಲಿ ಸನಾ ಗಂಗೂಲಿ ತಮ್ಮ ಒಂದು ಪ್ರಬುದ್ಧ ಇನ್ಸ್ಟಾಗ್ರಾಂ ಬರಹದಿಂದ ಇಡೀ ಭಾರತದ ಪ್ರಜ್ಞಾವಂತ ಜನ ಸಮುದಾಯದ ಮನ ಗೆದ್ದಿದ್ದರು. ಈಕೆಗೆ ಬರಹಕ್ಕೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.

ಜೊತೆ ಜೊತೆಗೆ ವಿವಾದವೂ ಮೈಮೇಲೆ ಎರಗುವ ಸಾಧ್ಯತೆಯನ್ನು ಮನಗಂಡಿರುವ ಸೌರವ್ ಗಂಗೂಲಿ ಈ ಕುರಿತು ಇಂದು ಜನರಲ್ಲಿ ಮನವಿ ಮಾಡಿದ್ದು ತಮ್ಮ ಮಗಳನ್ನು ಈ ವಿವಾದದಲ್ಲಿ ಎಳೆದು ತರಬೇಡಿ ಆಕೆ ಇನ್ನೂ ಚಿಕ್ಕವಳು ಕೇಳಿಕೊಂಡಿದ್ದಾರೆ.

Comments are closed.