ಕ್ರೀಡೆ

ನಿತ್ಯಾನಂದರೇ ನಿಮ್ಮ ದೇಶಕ್ಕೆ ವೀಸಾ ಪಡೆಯುವುದು ಹೇಗೆ? ಕ್ರಿಕೆಟರ್​ ಅಶ್ವಿನ್​​​

Pinterest LinkedIn Tumblr


ತಮ್ಮದೇಯಾದ ಸ್ವಂತ ದೇಶವನ್ನು ರಚನೆ ಮಾಡಿ ಅದಕ್ಕೊಂದು ಧ್ವಜ, ಪ್ರತ್ಯೇಕ ಸಂವಿಧಾನ ಮತ್ತು ಲಾಂಛನವನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿರುವ ನಿತ್ಯಾನಂದ ಸ್ವಾಮಿಗೆ ಟೀಮ್​ ಇಂಡಿಯಾದ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್​ ಪ್ರಶ್ನೆಯೊಂದನ್ನು ಕೇಳುವ ಮೂಲಕ ನಿತ್ಯಾನಂದ ಅವರನ್ನು ಕಾಲೆಳೆದಿದ್ದಾರೆ.

ನಿಮ್ಮದೇಯಾದ ದೇಶಕ್ಕೆ ಬರುವುದಾದರೆ ವೀಸಾ ಪಡೆಯುವ ಪ್ರಕ್ರಿಯೆ ಹೇಗೆ ಎಂದು ಅಶ್ವಿನ್​ ಪ್ರಶ್ನಿಸುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ. ಜಾಲತಾಣದಲ್ಲಿ ಅಶ್ವಿನ್​ ಟ್ವೀಟ್​ ವೈರಲ್​ ಆಗಿದೆ.

ಅಶ್ವಿನ್ ಅವರ ವ್ಯಂಗ್ಯದ ಪ್ರಶ್ನೆಗಳಿಗೆ ವ್ಯಂಗ್ಯವಾಗಿ ಟ್ವೀಟಿಗರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಮುಂದೆ ಹೋಗಿ ನಿತ್ಯಾನಂದ ಅವರ ವಿವಾದಾತ್ಮಕ ಸತ್ಸಂಗಗಳ ಬಗ್ಗೆ ಉಲ್ಲೇಖಗಳನ್ನು ಉಲ್ಲೇಖಿಸಿದರು. ವಿಶ್ವಶ್ರೇಷ್ಠ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್‌ಸ್ಟೈನ್‌ರ ವಿಶೇಷ ಸಾಪೇಕ್ಷತಾ ಸಿದ್ಧಾಂತವನ್ನೇ ತಳ್ಳಿಹಾಕಿದ ನಿತ್ಯಾನಂದನ ವಿಚಾರಧಾರೆಯನ್ನು ಅಪಹಾಸ್ಯ ಮಾಡಿದರು.

ನಿತ್ಯಾನಂದ ಹೇಳಿಕೊಂಡಿರುವಂತೆ ಕೈಲಾಸ ಎಂಬುದು ವಿಶ್ವದಾದ್ಯಂತ ಸಂತ್ರಸ್ತ ಹಿಂದೂಗಳು ರಚಿಸಿದ ಗಡಿರೇಖೆಗಳಿಲ್ಲದ ರಾಷ್ಟ್ರವಾಗಿದೆ. ಈ ದೇಶವು ತನ್ನದೇ ಆದ “ಪಾಸ್‌ಪೋರ್ಟ್” ಅನ್ನು ಹೊಂದಿದೆ ಮತ್ತು ನಿತ್ಯಾನಂದ ಈಗಾಗಲೇ ಅದರ ಮಾದರಿಯನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾನೆ.

ನಿತ್ಯಾನಂದನ ಹೊಸ ರಾಷ್ಟ್ರವು ದೇವಾಲಯ ಆಧಾರಿತ ಜೀವನ ವ್ಯವಸ್ಥೆ, ಯೋಗ, ಧ್ಯಾನ, ಸಾರ್ವತ್ರಿಕ ಉಚಿತ ಆರೋಗ್ಯ ರಕ್ಷಣೆ, ಉಚಿತ ಶಿಕ್ಷಣ, ಉಚಿತ ಆಹಾರ ಇತ್ಯಾದಿಗಳನ್ನು ನೀಡುತ್ತದೆಯಂತೆ.

ನಿತ್ಯಾನಂದನ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಗುಜರಾತ್​ನ ಅಹಮದಾಬಾದ್​ನಲ್ಲಿರುವ ಯೋಗಿನಿ ಸರ್ವಜ್ಞಪೀಠಂ ಆಶ್ರಮದಲ್ಲಿನ ನಾಲ್ಕು ವಿದ್ಯಾರ್ಥಿಗಳ ಶೋಷಣೆ ಮಾಡಿದ ಆರೋಪ ಆತನ ಮೇಲಿದೆ. ಮಕ್ಕಳನ್ನು ಅಪಹರಿಸಿ ಅಕ್ರಮವಾಗಿ ಕೂಡಿಟ್ಟುಕೊಂಡ ಆರೋಪದ ಮೇಲೆ ಗುಜರಾತ್‌ ಪೊಲೀಸರು ಆತನ ಮೇಲೆ ಎಫ್‌ಐಆರ್‌ ದಾಖಲಿಸಿ, ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ನಿತ್ಯಾನಂದ ಸ್ವಾಮಿ ಬಿಡದಿ ನ್ಯಾಯಾಲಯಕ್ಕೂ 6 ತಿಂಗಳಿನಿಂದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಮುಂದಿನ ವಿಚಾರಣೆ ಡಿ. 9ರಂದು ನಡೆಯಲಿದ್ದು, ಆ ವೇಳೆ ಹಾಜರಾದರೆ ಅಹಮದಾಬಾದ್​ ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆಯಿದೆ.

Comments are closed.