ಕ್ರೀಡೆ

ಟೀಮ್‌ ಇಂಡಿಯಾದ ಫಿಟ್ನೆಸ್‌ ಕಸರತ್ತಿಗೆ ದಂಗಾದ ಅಭಿಮಾನಿಗಳು!

Pinterest LinkedIn Tumblr


ಹೈದರಾಬಾದ್‌: ಜಾಗತಿಕ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾದ ಪ್ರಾಬಲ್ಯಕ್ಕೆ ತಂಡದ ಆಟಗಾರರ ಫಿಟ್ನೆಸ್‌ ಕೂಡ ಮಹತ್ವದ ಪಾತ್ರ ವಹಿಸಿದೆ. ನಾಯಕ ವಿರಾಟ್‌ ಕೊಹ್ಲಿ ಅವರಿಂದ ಹಿಡಿದು ಪ್ರತಿಯೊಬ್ಬ ಆಟಗಾರನು ಕೂಡ ಇಂದು ಫಿಟ್ನೆಸ್‌ ವಿಚಾರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಭಾರತ ಕ್ರಿಕೆಟ್‌ ತಂಡ ಇದೀಗ ತನ್ನ ಫಿಟ್ನೆಸ್‌ ಕಸರತ್ತುಗಳಲ್ಲಿ ಹೊಸ ಬಗೆಯ ರನ್ನಿಂಗ್‌ ಚಟುವಟಿಕೆಗಳನ್ನು ಅಳವಡಿಸಿಕೊಂಡಿದೆ. ಟೀಮ್‌ ಇಂಡಿಯಾ ಆಟಗಾರು ಈ ವಿಭಿನ್ನ ಕಸರತ್ತುಗಳ ಮೂಲಕ ಬೆವರಿಳಿಸುತ್ತಿರುವ ವಿಡಿಯೋವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದೆ.

ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ ತಲಾ 3 ಪಂದ್ಯಗಳ ಟಿ20 ಮತ್ತು ಏಕದಿನ ಕ್ರಿಕೆಟ್‌ ಪಂದ್ಯಗಳ ಸರಣಿ ಸಲುವಾಗಿ ಟೀಮ್‌ ಇಂಡಿಯಾ ಬುಧವಾರ ಅಭ್ಯಾಸ ಆರಂಭಿಸಿದೆ. ಡಿ.6ರಂದು ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿರುವ ಭಾರತ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ.

ಈ ಸಲುವಾಗಿ ಬುಧವಾರ ಅಭ್ಯಾಸ ಆರಂಭಿಸಿ ಬೆವರಿಳಿಸಿದ ಭಾರತೀಯ ಆಟಗಾರರು, ಎರಡು ತಂಡವಾಗಿ ವಿಂಗಡನೆಗೊಂಡು ವಿವಿಧ ರನ್ನಿಂಗ್‌ ಕಸರತ್ತುಗಳನ್ನು ನಡೆಸಿದರು. ಒಂದು ತಂಡದ ಸದಸ್ಯರು ತಮ್ಮ ಚಟ್ಟಿಯ ಹಿಂಬದಿಯಲ್ಲಿ ಬಟ್ಟೆಯ ಒಂದು ತುಂಡನ್ನು ಕಟ್ಟಿ ಓಡಬೇಕು ಮತ್ತೊಂದು ತಂಡದ ಸದಸ್ಯರು ಅವದನ್ನು ಕಸಿಯುವ ಪ್ರಯತ್ನ ನಡೆಸಬೇಕು. ಬಿಸಿಸಿಐ ಇದನ್ನು “ಚೇಸ್‌ ಡ್ರಿಲ್‌” ಎಂದು ಟ್ವಿಟರ್‌ನಲ್ಲಿ ಹೆಸರಿಸಿದೆ.

ಸಂಜು ಸ್ಯಾಮ್ಸನ್‌ಗೆ ಸ್ಥಾನ
ವಿಂಡೀಸ್‌ ವಿರುದ್ಧ ಟಿ20-ಐ ಮತ್ತು ಏಕದಿನ ಕ್ರಿಕೆಟ್‌ ಸರಣಿಗಳಿಗೆ ಮೊದಲು ಪ್ರಕಟಿಸಲಾದ ಭಾರತ ತಂಡದಿಂದ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕೇರಳದ ಸಂಜು ಸ್ಯಾಮ್ಸನ್‌ ಅವರನ್ನು ಕೈಬಿಡಲಾಗಿತ್ತು. ಇದರಿಂದಾಗಿ ಆಕ್ರೋಶಗೊಂಡಿದ್ದ ಕೇರಳ ಕ್ರಿಕೆಟ್‌ ಅಭಿಮಾನಿಗಳು, ವಿಂಡೀಸ್‌ ವಿರುದ್ಧ ತಿರುವನಂತಪುರದಲ್ಲಿ ಡಿ.8ರಂದು ನಡೆಯಬೇಕಿರುವ 2ನೇ ಟಿ20 ಪಂದ್ಯವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಮೂಲಕ ಬಿಸಿಸಿಐಗೆ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದರು.

ಆದರೆ ಮಂಡಿಯ ಗಾಯದ ಸಮಸ್ಯೆಯಿಂದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಚೇತರಿಸದೇ ಇರುವುದರಿಂದ ಅವರ ಸ್ಥಾನದಲ್ಲಿ ಬದಲಿ ಆಟಗಾರನಾಗಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ಅಭಿಮಾನಿಗಳು ಕೂಡ ಶಾಂತಗೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ಸಂಜು ಸ್ಯಾಮ್ಸನ್‌ ತಂಡದಲ್ಲಿ ಇದ್ದರಾದರೂ, ಆಡುವ 11ರ ಬಳಗದಲ್ಲಿ ಅವಕಾಶ ಲಭ್ಯವಾಗಲಿಲ್ಲ. ರಿಷಭ್‌ ಪಂತ್‌ ಭಾರತ ತಂಡದ ಮೊದಲ ಆಯ್ಕೆಯ ವಿಕೆಟ್‌ಕೀಪರ್‌ ಆಗಿದ್ದು, ವಿಂಡೀಸ್‌ ವಿರುದ್ಧದ ಸರಣಿಯಲ್ಲೂ ಪಂತ್‌ ವಿಫಲರಾದರೆ ಅವಕಾಶ ಸ್ಯಾಮ್ಸನ್‌ಗೆ ಒಲಿಯಲಿದೆ.

Comments are closed.