ಕ್ರೀಡೆ

ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಬಂಧನ ಭೀತಿ..!

Pinterest LinkedIn Tumblr


ಟೀಂ ಇಂಡಿಯಾ ವೇಗಿ ಮೊಹಮ್ಮದ್​ ಶಮಿ ವಿರುದ್ಧ ಅರೆಸ್ಟ್​​ ವಾರೆಂಟ್​ ಜಾರಿ ಮಾಡಲಾಗಿದೆ. ಪತ್ನಿ ಮೇಲೆ ಹಲ್ಲೆ ದೌರ್ಜನ್ಯ ಆರೋಪ ಎದುರಿಸುತ್ತಿರುವ ಭಾರತ ತಂಡದ ಆಟಗಾರನ ವಿರುದ್ಧ ಪಶ್ಚಿಮ ಬಂಗಾಳದ ಅಲಿಪೂರ್ ಕೋರ್ಟ್​ ಬಂಧನದ ಆದೇಶ ಹೊರಡಿಸಿದೆ.

ಈ ಹಿಂದೆ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ನ್ಯಾಯಾಲಕ್ಕೆ ಹಾಜರಾಗದ ಶಮಿ ವಿರುದ್ದ ಇದೀಗ ಕೋರ್ಟ್​ ವಾರೆಂಟ್ ಜಾರಿಗೊಳಿಸಿದೆ. ಅಷ್ಟೇ ಅಲ್ಲದೆ 15 ದಿನಗಳ ಒಳಗಾಗಿ ಕೋರ್ಟ್​ಗೆ ಹಾಜರಾಗುವಂತೆ ಸೂಚಿಸಿದೆ. ಸದ್ಯ ಮೊಹಮ್ಮದ್ ಶಮಿ ವೆಸ್ಟ್​ ಪ್ರವಾಸದಲ್ಲಿದ್ದು, ಈ ಸರಣಿಯನ್ನು ಮೊಟಕುಗೊಳಿಸಿ ಭಾರತಕ್ಕೆ ಹಿಂತಿರುಗುವ ಸಾಧ್ಯತೆ ಹೆಚ್ಚಿದೆ.

ಈ ಹಿಂದೆ ಕೋಲ್ಕತ್ತಾ ಪೊಲೀಸರು ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರ ದೂರಿನ ಹಿನ್ನೆಲೆ ಕ್ರಿಕೆಟಿಗನ ವಿರುದ್ಧ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 354ಎ (ಲೈಂಗಿಕ ದೌರ್ಜನ್ಯ) ವಿಭಾಗದಡಿಯಲ್ಲಿ ಚಾರ್ಜ್ ಶೀಟ್ ದಾಖಲಿಸಿದ್ದರು. ಅಷ್ಟೇ ಅಲ್ಲದೆ ತನ್ನ ಪತಿಯು ಐಪಿಎಲ್​ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ. ಪಾಕಿಸ್ತಾನ ಮಹಿಳೆ ಅಲಿಸ್ಬಾಯಿಂದ ಶಮಿ ದುಬೈನಲ್ಲಿ ಹಣ ಸ್ವೀಕರಿಸಿದ್ದಾರೆ ಈ ಬಗ್ಗೆ ನನ್ನ ಬಳಿ ಸಾಕ್ಷ್ಯವಿದೆ ಎಂದು ಹಸೀನ್ ಆರೋಪಿಸಿದ್ದರು.

ಇದರಿಂದಾಗಿ ಕೆಲ ದಿನಗಳ ಕಾಲ ಶಮಿಯನ್ನು ತಂಡದಿಂದ ಕೈ ಬಿಡಲಾಗಿತ್ತು. ಅಲ್ಲದೆ ಆ ಬಳಿಕ ನಡೆದ ಬಿಸಿಸಿಐ ತನಿಖೆಯಲ್ಲಿ ಮೋಸದಾಟದಲ್ಲಿ ಭಾಗವಹಿಸಿರುವ ಬಗ್ಗೆ ಸಾಕ್ಷಿಗಳು ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಮಿ ಕ್ರಿಕೆಟ್ ಆಡಲು ಶಮಿಗೆ ಅನುಮತಿ ನೀಡಲಾಗಿತ್ತು. ಇದರಿಂದಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನಗಳಿಸಲು ಮೊಹಮ್ಮದ್ ಶಮಿ ಯಶಸ್ವಿಯಾಗಿದ್ದರು.

ಮೊಹಮ್ಮದ್ ಶಮಿ ಪರ ಸ್ತ್ರೀಯರ ಜೊತೆ ಅಕ್ರಮ ಸಂಬಂಧವಿದೆ ಎಂದು ಈ ಹಿಂದೆ ಹಸೀನ್ ಜಹಾನ್ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ ಪರಸ್ತ್ರೀಯರ ಜೊತೆಗಿರುವ ಶಮಿಯ ಫೋಟೋಗಳನ್ನ ಫೇಸ್ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು. ತನ್ನ ಸಹೋದರನ ಜೊತೆ ಸಂಬಂಧ ಹೊಂದುವಂತೆ ಶಮಿ ಒತ್ತಡ ಹಾಕಿದ್ದರು ಎಂಬ ಹಸೀನ್ ಗಂಭೀರ ಆರೋಪವನ್ನು ಮಾಡಿದ್ದರು.

ಆದರೆ, ಈ ಎಲ್ಲ ಆರೋಪಗಳನ್ನ ನಿರಾಕರಿಸಿದ್ದ ಮೊಹಮ್ಮದ್ ಶಮಿ, ನಾನು ಯಾವಾಗಲೂ ಹಸೀನ್ ಪರ ನಿಂತಿದ್ದೇನೆ. ಈಗ ಆಕೆ ಯಾಕೆ ಈ ರೀತಿ ವರ್ತಿಸುತ್ತಿದ್ದಾಳೋ ಗೊತ್ತಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದಿದ್ದರು. ಮ್ಯಾಚ್ ಫಿಕ್ಸಿಂಗ್​ನಂತಹ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗುವ ಬದಲು ಸಾಯುತ್ತೇನೆ ಎಂದು ಖಡಕ್ ಉತ್ತರ ಕೊಟ್ಟಿದ್ದರು.

ಆದರೆ ಈ ಸಂಬಂಧ ಹಸೀನ್ ಜಹಾನ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಕ್ಕೆ ಹಾಜರಾಗದ ಕಾರಣ ಮೊಹಮ್ಮದ್ ಶಮಿ ವಿರುದ್ದ ಪಶ್ಚಿಮ ಬಂಗಾಳದ ಅಲಿಪೂರ್ ಕೋರ್ಟ್​ ಬಂಧನದ ಆದೇಶ ಹೊರಡಿಸಿದೆ.

Comments are closed.