ಕ್ರೀಡೆ

ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ರಚಿಸಿದ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧೂ

Pinterest LinkedIn Tumblr

ಬಾಸೆಲ್‌(ಸ್ವಿಜರ್ಲೆಂಡ್‌): ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧೂ, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ರಚಿಸಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್‌ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿಯೆನ್ನುವ ಚಾರಿತ್ರಿಕ ದಾಖಲೆಯನ್ನು ಬರೆದಿದ್ದಾರೆ.

ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ತಮ್ಮ ಬದ್ದ ವೈರಿ ಜಪಾನ್‌ನ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ 21-7, 21-7ರ ಅಂತರದ ಗೆಲುವು ದಾಖಲಿಸಿ ಇತಿಹಾಸ ಪುಟ ಸೇರಿದ್ದಾರೆ.

ಭಾರತದ ಬ್ಯಾಡ್ಮಿಂಟನ್ ಕಣ್ಮಣಿ ಪಿ.ವಿ ಸಿಂಧೂ, ಸತತವಾದ ಐದನೇ ಪ್ರಯತ್ನದಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 24ರ ಹರೆಯದ ಹೈದರಾಬಾದ್‌ ಆಟಗಾರ್ತಿ 2017 ಮತ್ತು 2018ರ ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿ, ಪ್ರಶಸ್ತಿ ಸೆಣಸಾಟದಲ್ಲಿ ಸೋತು ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟುಕೊಂಡಿದ್ದರು. ಅದರಲ್ಲೂ ವಿಶೇಷವಾಗಿ 2017ರ ಫೈನಲ್‌ನಲ್ಲಿ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ ಕೇವಲ ಎರಡು ಅಂಕಗಳ ಹಿನ್ನಡೆಯೊಂದಿಗೆ ಸೋತು ನಿರಾಸೆ ಅನುಭವಿಸಿದ್ದರು.

ಜೀವಮಾನದಲ್ಲೇ ಅತ್ಯುನ್ನತ ಫಾರ್ಮ್‌ನಲ್ಲಿರುವ ಪಿವಿ ಸಿಂಧೂ, ಪಂದ್ಯದ ಆರಂಭದಿಂದಲೇ ಎದುರಾಳಿ ಮೇಲೆ ಪ್ರಹಾರ ಮಾಡ ತೊಡಗಿದರು. ಸಿಂಧೂ ಬಲವಾದ ಹೊಡೆತಕ್ಕೆ ಓಕುಹರಾ ಬಳಿ ಉತ್ತರವೇ ಇಲ್ಲ. ಇದರಿಂದಾಗಿ ಒಂದು ಹಂತದಲ್ಲಿ 16-2ರ ಅಂತರದ ಮುನ್ನಡೆ ದಾಖಲಿಸಿದರು. ಅಲ್ಲದೆ ಮೊದಲ ಸುತ್ತನ್ನು 21-7 ರ ಅಂತರದ ಸುಲಭವಾಗಿ ವಶಪಡಿಸಿಕೊಂಡರು.

ನಿರ್ಣಾಯಕ ದ್ವಿತೀಯ ಸುತ್ತಿನಲ್ಲೂ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಸಿಂಧೂ, ಎದುರಾಳಿಯ ಮೇಲೆ ನಿರಂತರ ಒತ್ತಡವನ್ನು ಹೇರುತ್ತಲೇ ಸಾಗಿದರು. ಹಿಂದಿನ ಪ್ರದರ್ಶನಕ್ಕೆ ಹೋಲಿಸಿದರೆ ಅನಗತ್ಯ ತಪ್ಪುಗಳಿಗೆ ಯಾವುದೇ ಆಸ್ಪದ ನೀಡದ ಸಿಂಧೂ, ತಮ್ಮ ಬಲವಾದ ಹೊಡೆತದಿಂದಲೇ ಎದುರಾಳಿ ಮೇಲೆ ಸವಾರಿ ಮಾಡಿದರು. ಹಾಗೆಯೇ ದ್ವಿತೀಯ ಸುತ್ತಿನಲ್ಲೂ ಒಂದು ಹಂತದಲ್ಲಿ 16-4ರ ಮುನ್ನಡೆ ಗಳಿಸಿ ಪ್ರಶಸ್ತಿಯತ್ತ ಮುನ್ನಡೆದರು. ಅಂತಿಮವಾಗಿ ದ್ವಿತೀಯ ಗೇಮ್ 21-7ರ ಅಂತರದಲ್ಲಿ ವಶಪಡಿಸಿ ಚಿನ್ನದ ಹಾರವನ್ನುಕೊರಳಿಗೆ ಹಾಕಿಕೊಂಡರು.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಚೆನ್‌ ಯು ಫಿ ಅವರನ್ನು 21-7 ಮತ್ತು 21-14 ಗೇಮ್‌ಗಳಿಂದ ಮಣಿಸಿ ಅಂತಿಮ ಹಣಾಹಣಿಗೆ ವೇದಿಕೆ ನಿರ್ಮಿಸಿಕೊಂಡರು. ಇದರೊಂದಿಗೆ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದ ವಿಶ್ವದ ಮೊದಲ ಆಟಗಾರ್ತಿಯೆನ್ನುವ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡರು.

2013ರ ಆವೃತ್ತಿಯಲ್ಲಿ ಸಿಂಧೂ ಕಂಚಿನ ಪದಕ ಜಯಿಸಿದ್ದರು. ಆಗ ಅವರಿಗೆ ಕೇವಲ 18 ವರ್ಷ. ಅದಾದ ಬಳಿಕ 2014ರ ಆವೃತ್ತಿಯಲ್ಲೂ ಕಂಚಿನ ಪದಕ ಗೆದ್ದಿದ್ದರು. ಇದರೊಂದಿಗೆ, ರಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಸಿಂಧೂ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 5 ಪದಕ (ಹಾಲಿ ಆವೃತ್ತಿಯದೂ ಸೇರಿ) ಗೆದ್ದಂತಾಗಿದೆ.

ಸಿಂಧೂ ಪ್ರಮುಖ ಸಾಧನೆಗಳು:

ಒಲಿಂಪಿಕ್:
2016 ರಿಯೋ ಡಿ ಜನೈರೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)

ವಿಶ್ವ ಚಾಂಪಿಯನ್‌ಶಿಪ್:
2019 ಬಾಸೆಲ್: ಚಿನ್ನ ಪದಕ (ಮಹಿಳಾ ಸಿಂಗಲ್ಸ್)
2018 ನಾನ್‌ಜಿಂಗ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2017 ಗ್ಲ್ಯಾಸ್ಗೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2014 ಕೊಪೆನ್‌ಹ್ಯಾಗನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್)
2013 ಗುವಾಂಗ್‌ಝೌ: ಕಂಚಿನ ಪದಕ (ಮಹಿಳಾ ಸಿಂಗಲ್ಸ್)

ಏಷ್ಯನ್ ಗೇಮ್ಸ್:
2018 ಜಕಾರ್ತ-ಪ್ಯಾಲೆಮ್‌ಬ್ಯಾಂಗ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2014 ಇಂಚಿಯಾನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್)

ಕಾಮನ್‌ವೆಲ್ತ್ ಗೇಮ್ಸ್:
2018 ಗೋಲ್ಡ್ ಕೋಸ್ಟ್: ಚಿನ್ನದ ಪದಕ (ಮಿಶ್ರ ತಂಡ)
2018 ಗೋಲ್ಡ್ ಕೋಸ್ಟ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2014 ಗ್ಲ್ಯಾಸ್ಗೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)

ಏಷ್ಯಾ ಚಾಂಪಿಯನ್‌ಶಿಪ್:
2014 ಗಿಮ್ಚಿಯಾನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್)

Comments are closed.