ಕ್ರೀಡೆ

ರೋಹಿತ್ ಜೊತೆ ಜಗಳ; ಸುದ್ದಿಗೋಷ್ಠಿಯಲ್ಲಿ ಕೊನೆಗೂ ಮೌನ ಮುರಿದ ಕೊಹ್ಲಿ

Pinterest LinkedIn Tumblr


ಬೆಂಗಳೂರು (ಜು. 29): ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತ ಇಂದು ರಾತ್ರಿ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕೂ ಮುನ್ನ ಮುಂಬೈನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಜೊತೆಗೆ ರೋಹಿತ್ ನಡುವಣ ಒಳಜಗಳದ ವಿಚಾರಕ್ಕೆ ಕ್ಯಾಪ್ಟನ್ ಸ್ಪಷ್ಟನೆ ನೀಡಿದ್ದಾರೆ.

‘ರೋಹಿತ್ ಶರ್ಮಾ ಹಾಗೂ ನನ್ನ ನಡುವೆ ಯಾವುದೇ ಮನಸ್ತಾಪವಿಲ್ಲ. ಮಾಧ್ಯಮಗಳಲ್ಲಿ ಬಂದಿರುವುದು ಸುಳ್ಳುಸುದ್ದಿ. ಜನರು ನಾವು ಯಾವರೀತಿ ಆಡುತ್ತೇವೆ ಎಂಬ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಯನ್ನು ಹರಿಯಬಿಡಬೇಡಿ. ನಾವು ಭಾರತ ತಂಡವನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ’.

‘ನಮ್ಮ ಡ್ರೆಸ್ಸಿಂಗ್ ರೂಮ್​ನಲ್ಲಿ ತೊಂದರೆಗಳಿವೆ ಎಂದಾದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಆದರೆ, ಕೆಲವರು ನಮ್ಮನ್ನು ತುಳಿಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಹಾಗೂ ರೋಹಿತ್ ನಡುವಣ ಸ್ನೇಹವನ್ನು ಎಲ್ಲರೂ ನೋಡಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೆ ಬಿರುಕಿಲ್ಲ’ ಎಂದು ಈ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇನ್ನು ತಂಡದ ಬಗ್ಗೆ ಮಾತನಾಡಿದ ಕೊಹ್ಲಿ, ‘ವಿಶ್ವಕಪ್​ ಸೋಲಿನ ಆಘಾತದಿಂದ ಹೊರಬರಲಿದ್ದೇವೆ. ಮುಂಬರುವ ಕ್ರಿಕೆಟ್​​ ಸರಣಿ ಯುವಕರಿಗೆ ಉತ್ತಮ ವೇದಿಕೆಯಾಗಲಿದೆ. ಮುಂದಿನ ವರ್ಷ ಟಿ-20 ವಿಶ್ವಕಪ್ ನಡೆಯಲಿದೆ. ಇದಕ್ಕಾಗಿ ಪ್ರತಿಭಾವಂತ ಯುವ ಆಟಗಾರರನ್ನು ಆಯ್ಕೆ ಮಾಡಿ ಪರೀಕ್ಷೆಗೆ ಒಳಪಡಿಸಲಿದ್ದೇವೆ. ಅಲ್ಲದೆ ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ಗೂ ಯುವ ಆಟಗಾರರನ್ನು ಆಯ್ಕೆ ಮಾಡಿದ್ದು ಇದೇ ವಿಚಾರಕ್ಕೆ’ ಎಂದರು.

‘ವೆಸ್ಟ್​ ಇಂಡೀಸ್ ವಿರುದ್ದದ ಸರಣಿ ನಮಗೆ ಮುಖ್ಯ. ಕೆಲ ಆಟಗಾರರು ಐಪಿಎಲ್ ಹಾಗೂ ದೇಶೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಹೊಸ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಲು ಇದೊಂದು ಉತ್ತಮ ವೇದಿಕೆಯಾಗಿದೆ’ ಎಂದು ಅಭಿಪ್ರಾಯ ಪಟ್ಟರು.

ಕೆರಿಬಿಯನ್ನ ನಾಡಲ್ಲಿ ಭಾರತ ಮೂರು ಟಿ-20, ಮೂರು ಏಕದಿನ ಹಾಗೂ ಎರಡು ಟೆಸ್ಟ್​ ಪಂದ್ಯವನ್ನಾಡಲಿದೆ. ಆಗಸ್ಟ್​ 3 ರಂದು ಮೊದಲ ಟಿ-20 ಪಂದ್ಯ ನಡೆಯಲಿದೆ.

Comments are closed.