ಕ್ರೀಡೆ

20 ದಿನಗಳಲ್ಲಿ 5 ಚಿನ್ನದ ಪದಕ ಗೆದ್ದ ‘ಚಿನ್ನದ ಹುಡುಗಿ’ ಹಿಮಾದಾಸ್​ಗೆ ಅಭಿನಂದನೆಗಳ ಮಹಾಪೂರ

Pinterest LinkedIn Tumblr

ನವದೆಹಲಿ: ಜೆಕ್​ ಗಣರಾಜ್ಯದ ಪ್ರೇಗ್​ನಲ್ಲಿ ನಡೆದ 400 ಮೀಟರ್​ ಓಟದಲ್ಲಿ ಗೆದ್ದು ಜುಲೈ ತಿಂಗಳ ಐದನೇ ಚಿನ್ನದ ಪದಕ ಗಳಿಸಿದ ಮಿಂಚಿನ ಓಟಗಾರ್ತಿ, ಚಿನ್ನದ ಹುಡುಗಿ ಹಿಮಾದಾಸ್​ಗೆ ಟ್ವಿಟರ್​ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಸೇರಿ ಕೇಂದ್ರ ಸಚಿವರು, ಕ್ರಿಕೆಟ್​ ಆಟಗಾರರು ಹಿಮಾ ದಾಸ್​ಗೆ ಶುಭಾಶಯ ತಿಳಿಸಿದ್ದಾರೆ.

ನರೇಂದ್ರ ಮೋದಿಯವರು ಟ್ವೀಟ್​ ಮಾಡಿ ಹಿಮಾ ದಾಸ್​ ಬಗ್ಗೆ ಹೆಮ್ಮೆಯೆನಿಸುತ್ತದೆ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಹಿಮಾ ದಾಸ್​ ಅದ್ಭುತವಾಗಿ ಆಟವಾಡುತ್ತಿದ್ದು ಗುರಿ ಮುಟ್ಟಿದ್ದಾರೆ. ಈ ತಿಂಗಳಲ್ಲಿ ಒಟ್ಟು ಐದು ಚಿನ್ನದ ಪದಕಗಳನ್ನು ನಮ್ಮ ದೇಶಕ್ಕೆ ತಂದುಕೊಟ್ಟ ಹಿಮಾ, ನಮ್ಮ ದೇಶಕ್ಕೆ ಹೆಮ್ಮೆ. ಪ್ರತಿಯೊಬ್ಬರೂ ಸಂತೋಷ ಪಡುವ ವಿಚಾರ ಇದು. ಅವಳಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿಮಾ ದಾಸ್​, ಸರ್​, ನಿಮ್ಮ ಹಾರೈಕೆಗೆ ಧನ್ಯವಾದ. ನಾನು ನನ್ನ ದೇಶಕ್ಕಾಗಿ ಇನ್ನಷ್ಟು ಪದಕಗಳನ್ನು ಗೆದ್ದು ತರುತ್ತೇನೆ ಎಂದಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ಟ್ವೀಟ್​ ಮಾಡಿದ್ದು, ಚಿನ್ನದ ಹುಡುಗಿಗೆ ಅಭಿನಂದನೆಗಳು. 20 ದಿನಗಳ ಒಳಗೆ 5 ಚಿನ್ನದ ಪದಕಗಳನ್ನು ಗೆದ್ದಿರುವುದು ನಿಜಕ್ಕೂ ಅತ್ಯದ್ಭುತ. ಆಕೆಯ ಆತ್ಮವಿಶ್ವಾಸ ಮತ್ತು ಚಾಂಪಿಯನ್​ ಆಗಬೇಕೆಂಬ ಹಠ ದೇಶಕ್ಕೆ ಸ್ಫೂರ್ತಿ. ಅವಳ ಗೆಲುವನ್ನು ದೇಶದ ಜನರೊಂದಿಗೆ ನಾನೂ ಸೆಲೆಬ್ರೇಟ್​ ಮಾಡುತ್ತೇನೆ ಎಂದಿದ್ದಾರೆ.

ಹಾಗೇ ಕ್ರೀಡಾ ಸಚಿವ ಕಿರಣ್​ ರಿಜಿಜು ಅವರು ಹಿಮಾ ದಾಸ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾನಂತೂ ಹಿಮಾದಾಸ್​ ಯಶಸ್ಸು ನೋಡಿ ತುಂಬ ಎಕ್ಸೈಟ್​ ಆಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಟ್ವೀಟ್​ ಮಾಡಿದ್ದು, ಕಳೆದ 19 ದಿನಗಳಿಂದ ನಿಮ್ಮ ಓಟ ನೋಡಿ ಮನಸು ತುಂಬಿ ಬಂದಿದೆ. ನಿಮ್ಮ ಗೆಲುವಿನ ಹಸಿವು ಹಾಗೂ ಪರಿಶ್ರಮ ಯುವಜನತೆಗೆ ಸ್ಫೂರ್ತಿಯಾಗಿದೆ. ಐದು ಚಿನ್ನದ ಪದಕಗಳನ್ನು ಗೆದ್ದ ನಿಮಗೆ ಅಭಿನಂದನೆ. ಮುಂದಿನ ಆಟಗಳಿಗೆ ಶುಭವಾಗಲಿ ಎಂದು ಹೃದಯಪೂರ್ವಕಾಗಿ ಹಿಮಾದಾಸ್​ಗೆ ಹಾರೈಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿಮಾ, ‘ನಾನು ಭಾರತಕ್ಕೆ ಮರಳಿದ ಕೂಡಲೇ ನಿಮ್ಮನ್ನು ಭೇಟಿಯಾಗಿ ಖಂಡಿತ ಆಶೀರ್ವಾದ ಪಡೆಯುತ್ತೇನೆ’ ಎಂದಿದ್ದಾರೆ.

ಭಾರತ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​ ರಿಷಬ್​ ಪಂತ್​ ಕೂಡ ಹಿಮಾ ದಾಸ್​ಗೆ ಅಭಿನಂದನೆ ತಿಳಿಸಿದ್ದಾರೆ. ನೀವು ನಿಜಕ್ಕೂ ಮಾದರಿ. ಭಾರತದ ಗೋಲ್ಡನ್​ ಗರ್ಲ್​ ಎಂದು ಹೊಗಳಿರುವ ಅವರು ಹಿಮಾ ದಾಸ್​ಗೆ ಸಲಾಂ ಬಾಸ್​ ಎಂದು ಟ್ವೀಟ್​ ಮಾಡಿದ್ದಾರೆ.

ಮರಳು ಶಿಲ್ಪಕಲಾವಿದ ಸುದರ್ಶನ್​ ಪಟ್ನಾಯಕ್​ ವಿಭಿನ್ನವಾಗಿ ಹಿಮಾದಾಸ್​ ಗೆಲುವನ್ನು ಸಂಭ್ರಮಿಸಿದ್ದಾರೆ. ಮರಳಿನಲ್ಲಿ ಹಿಮಾ ದಾಸ್​ ಆಕೃತಿ ಮೂಡಿಸಿ, ದೇಶದ ಹೆಮ್ಮೆ, ರನ್ನಿಂಗ್​ ಕ್ವೀನ್​ ಎಂದು ಬರೆದು ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನುಳಿದಂತೆ ಕ್ರಿಕೆಟರ್​ ಮೊಹಮ್ಮದ್​ ಕೈಫ್​, ವಿ.ವಿ.ಎಸ್​.ಲಕ್ಷ್ಮಣ್​, ನಟ ಅನುಪಮ್​ ಖೇರ್​, ಕೇಂದ್ರ ಸಚಿವರಾದ ಪಿಯುಷ್​ ಗೋಯಲ್​, ಪ್ರಲ್ಹಾದ್​ ಜೋಶಿ, ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್​ ಕುಮಾರ್​ ದೇಬ್​ ಸೇರಿ ಹಲವು ಗಣ್ಯರು ಹಿಮಾ ದಾಸ್​ ಅವರನ್ನು ಅಭಿನಂದಿಸಿದ್ದಾರೆ.

ಹಿಮಾ ದಾಸ್​ ಭಾನುವಾರ 400 ಮೀಟರ್​ನ್ನು 52.09 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದಾರೆ. 2018ರ ಏಷ್ಯನ್​ ಗೇಮ್​ನಲ್ಲಿ ಹಿಮಾ ದಾಸ್​ ಅವರು ಇದೇ ದೂರವನ್ನು 50.79 ಸೆಕೆಂಡ್​ಗಳಲ್ಲಿ ಓಡಿ ವೈಯಕ್ತಿಕ ದಾಖಲೆ ನಿರ್ಮಿಸಿದ್ದಾರೆ.

Comments are closed.