ಕ್ರೀಡೆ

ವಿಶ್ವಕಪ್‌; ನ್ಯೂಜಿಲೆಂಡ್​ ಎದುರು ಭಾರತಕ್ಕೆ 18 ರನ್​ಗಳ ಸೋಲು; ವಿಶ್ವಕಪ್ ರೇಸ್‌ನಿಂದ ಭಾರತ ಔಟ್

Pinterest LinkedIn Tumblr

ಮ್ಯಾಂಚೆಸ್ಟರ್: ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಬುಧವಾರ ಒಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 18 ರನ್ ಅಂತರದ ಸೋಲಿಗೆ ಶರಣಾಗಿರುವ ಟೀಮ್ ಇಂಡಿಯಾ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಇದರೊಂದಿಗೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ವಿಶ್ವಕಪ್ ಕನಸು ನೂಚ್ಚುನೂರಾಗಿದೆ.

ಇದೇ ಮೊದಲ ಬಾರಿಗೆ ನಾಯಕನಾಗಿ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಸೆಮಿಫೈನಲ್ ಹಂತದಲ್ಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ. ಅಷ್ಟೇ ಅಲ್ಲದೆ 1983ರಲ್ಲಿ ಕಪಿಲ್ ದೇವ್ ಹಾಗೂ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಸಾಧನೆಯನ್ನು ಪುನರಾವರ್ತಿಸುವಲ್ಲಿ ವಿಫಲವಾಗಿದ್ದಾರೆ.

ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಏಳನೇ ಬಾರಿಗೆ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಈ ಪೈಕಿ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೆ ಎರಡು ಬಾರಿ ಚಾಂಪಿಯನ್ ಪಟ್ಟ ಹಾಗೂ ಒಂದು ಬಾರಿ ರನ್ನರ್-ಅಪ್ ಪಟ್ಟ ಆಲಂಕರಿಸಿತ್ತು. ನಾಲ್ಕು ವರ್ಷಗಳ ಹಿಂದೆ 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮೀಸ್‌ನಲ್ಲಿ ಮುಗ್ಗರಿಸಿದ ಭಾರತ ಕೂಟದಿಂದಲೇ ಹೊರನಡೆದಿತ್ತು. ಇದೀಗ ಸತತ ಎರಡನೇ ಬಾರಿಗೆ ನಾಲ್ಕರ ಘಟ್ಟದಲ್ಲಿ ಎಡವಿ ಬಿದ್ದಿದೆ.

ನ್ಯೂಜಿಲೆಂಡ್ ವಿರುದ್ಧ ಭಾರತವೇ ಗೆಲ್ಲುವ ಫೇವರಿಟ್ ತಂಡವೆಂಬ ಪಟ್ಟ ಕಟ್ಟಿಕೊಂಡಿತ್ತು. ಆದರೆ ಮಳೆಯಿಂದಾಗಿ ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಲ್ಪಟ್ಟ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲೆಂಡ್ 211/5 ಎಂಬಲ್ಲಿದ್ದ ಬುಧವಾರ ಬ್ಯಾಟಿಂಗ್ ಮುಂದುವರಿಸಿದ ನ್ಯೂಜಿಲೆಂಡ್ ಎಂಟು ವಿಕೆಟ್ ನಷ್ಟಕ್ಕೆ 239 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಭಾರತ ತಂಡವು ನ್ಯೂಜಿಲೆಂಡ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಒಂದು ಹಂತದಲ್ಲಿ 30.3 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 92 ರನ್‌ಗಳನ್ನಷ್ಟೇ ಗಳಿಸಿತ್ತು. ಆದರೆ ಕೊನೆಯ ಹಂತದಲ್ಲಿ ವಿರೋಚಿತ ಹೋರಾಟ ನೀಡಿದ ಮಹೇಂದ್ರ ಸಿಂಗ್ ಧೋನಿ (50) ಹಾಗೂ ರವೀಂದ್ರ ಜಡೇಜಾ (77) ಫೈಟ್ ಬ್ಯಾಕ್ ‌ಇನ್ನಿಂಗ್ಸ್‌ನ ಹೊರತಾಗಿಯೂ ಭಾರತ ಗೆಲುವಿನಂಚಿನಲ್ಲಿ ಎಡವಿ ಬಿದ್ದಿತ್ತು. ಇದರೊಂದಿಗೆ ವಿಶ್ವಕಪ್ ಟ್ರೋಫಿ ಕನಸು ಭಗ್ನವಾಗಿದೆ.

ಭಾರತಕ್ಕೆ 240 ರನ್ ಗೆಲುವಿನ ಗುರಿ…
ಈ ಮೊದಲು ಮಳೆ ಬಾಧಿತ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೀಸಲು ದಿನವಾದ ಬುಧವಾರ ಬ್ಯಾಟಿಂಗ್ ಮುಂದುವರಿಸಿರುವ ನ್ಯೂಜಿಲೆಂಡ್ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 239 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲಷ್ಟೇ ಶಕ್ತವಾಗಿದೆ.

ಜಡೇಜಾ, ಭುವಿ ಮಿಂಚಿಂಗ್…
ಮೊದಲು ಸೆಟ್ ಬ್ಯಾಟ್ಸ್‌ ರಾಸ್ ಟೇಲರ್ ರನೌಟ್ ಮಾಡಿದ ರವೀಂದ್ರ ಜಡೇಜಾ ಬಳಿಕ ಟಾಮ್ ಲೇಥಮ್ (10) ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದರು. 90 ಎಸೆತಗಳನ್ನು ಎದುರಿಸಿದ ಟೇಲರ್ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 74 ರನ್ ಗಳಿಸಿದರು.

ಅಂತಿಮವಾಗಿ ನಿರ್ಧರಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 239 ರನ್ ಪೇರಿಸಿತು. ಇನ್ನುಳಿದಂತೆ ಮಿಚೆಲ್ ಸ್ಯಾಂಟ್ನರ್ (9*), ಮ್ಯಾಟ್ ಹೆನ್ರಿ (1) ಹಾಗೂ ಟ್ರೆಂಟ್ ಬೌಲ್ಟ್ (3*) ರನ್ ಗಳಿಸಿದರು. ಈ ಮೂಲಕ ಇಂದು 3.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತು.

ಭಾರತದ ಪರ ಭುವನೇಶ್ವರ್ ಕುಮಾರ್ ಮೂರು ಮತ್ತು ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಲ್ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟುಗಳನ್ನು ಹಂಚಿಕೊಂಡರು.

ಕಿವೀಸ್ 211 /5 (ಮಂಗಳವಾರದ ಅಪ್‌ಡೇಟ್)
ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೈವೋಲ್ಟೇಜ್‌ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್ 46.1 ಓವರ್‌ಗಳಲ್ಲಿ 5 ವಿಕೆಟ್‌ಗೆ 211 ರನ್‌ ಗಳಿಸಿದ್ದಾಗ ಮಳೆ ಸುರಿಯತೊಡಗಿದ್ದರಿಂದ ಆಟವನ್ನು ಸ್ಥಗಿತಗೊಳಿಸಲಾಯಿತು. ರಾಸ್ ಟೇಲ್ (67*) ಹಾಗೂ ಟಾಮ್ ಲೇಥಮ್ (3*) ಕ್ರೀಸಿನಲ್ಲಿದ್ದರು.

46.1 ಓವರ್‌ಗಳಾಗಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಕೊನೆಗೂ ಮಳೆ ನಿಲ್ಲದ ಕಾರಣ ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ವಿಶ್ವಕಪ್‌ ಮೊದಲ ಸೆಮಿಫೈನಲ್‌ ಪಂದ್ಯವನ್ನು ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಲಾಗಿತ್ತು.

Comments are closed.