
ಮ್ಯಾಂಚೆಸ್ಟರ್ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಡಕ್ವರ್ತ್ ನಿಯಮದ ಅನ್ವಯ 89 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಪಾಕ್ ವಿರುದ್ಧ ಅಜೇಯ ಗೆಲುವಿನ ಓಟ ಮುಂದುವರೆಸಿದೆ. ಇದು ಪಾಕ್ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಗ್ಗೆ ತಮ್ಮ ತಂಡದ ವಿರುದ್ಧವೇ ಪಾಕಿಸ್ತಾನದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ನೀಡಿದ ಬರೋಬ್ಬರಿ 337ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ್ದ ಪಾಕಿಸ್ತಾನ ಆರಂಭದಲ್ಲೇ ಆಘಾತ ಅನುಭವಿಸಿತು. ವಿಜಯ್ ಶಂಕರ್ ಬೌಲಿಂಗ್ನಲ್ಲಿ ಇಮಾಮ್ ಉಲ್ ಹಖ್(7) ಎಲ್ಬಿ ಬಲೆಗೆ ಸಿಲುಕಿ ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರು. ಬಳಿಕ 2ನೇ ವಿಕೆಟ್ಗೆ ಫಖರ್ ಜಮಾನ್ ಜೊತೆಯಾದ ಬಾಬರ್ ಅಜಂ ಉತ್ತಮ ಜೊತೆಯಾಟ ಆಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ 104 ರನ್ಗಳ ಕಾಣಿಕೆ ನೀಡಿತು. ಪಾಕ್ ಕ್ರೀಡಾಭಿಮಾನಿಗಳು ಗೆಲುವು ತಮ್ಮದೇ ಎಂದು ಕುಣಿದು ಕುಪ್ಪಳಿಸುತ್ತಿದ್ದರು.
ಆದರೆ, ಬಾಬರ್ ಅಜಂ ವಿಕೆಟ್ ಬೀಳುತ್ತಿದ್ದಂತೆ ಪಂದ್ಯದ ಗತಿಯೇ ಬದಲಾಯಿತು. ನೋಡ ನೋಡುತ್ತಿದ್ದಂತೆ ಪಾಕ್ ಕುಸಿತದ ಹಾದಿ ಕಂಡಿತ್ತು. ಅಂತಿಮವಾಗಿ ಪಾಕ್ ನಿಗದಿತ 40 ಓವರ್ಗೆ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಮಳೆ ಬಂದ ಕಾರಣ ಡಕ್ವರ್ತ್ ನಿಯಮ ಅನ್ವಯ ಪ್ರಕಾರ ಭಾರತ 89ರನ್ಗಳ ಜಯಗಳಿಸಿದೆ ಎಂದು ಘೋಷಿಸಲಾಯಿತು.
ಇದು ಪಾಕ್ ಅಭಿಮಾನಿಗಳನ್ನು ಕೆರಳಿಸಿದೆ. ವಿಶ್ವಕಪ್ನಲ್ಲಿ ಈ ಬಾರಿಯಾದರೂ ಗೆಲುವು ಕಾಣಬಹುದು ಎನ್ನುವ ಹುಮ್ಮಸ್ಸಿನಲ್ಲಿದ್ದ ಪಾಕಿಗರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಪಾಕ್ ತಂಡದ ವಿರುದ್ಧ ಅವರ ದೇಶದ ಅಭಿಮಾನಿಗಳೇ ಛೀಮಾರಿ ಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಅನೇಕರು ಟಿವಿ ಒಡೆದು ಹಾಕಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Comments are closed.