ಕ್ರೀಡೆ

ನಾಳೆ ನಡೆಯಲಿರುವ ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದು…? ಯಾವ ತಂಡ ಬಲಿಷ್ಠ ?

Pinterest LinkedIn Tumblr

ಮ್ಯಾಂಚೆಸ್ಟರ್: ನ್ಯೂಜಿಲೆಂಡ್‌ ವಿರುದ್ಧ ಕಳೆದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರಿಂದ ತೀವ್ರ ನಿರಾಸಗೆ ಒಳಗಾಗಿದ್ದ ಭಾರತ ತಂಡ ನಾಳೆ ಐಸಿಸಿ ವಿಶ್ವಕಪ್‌ ಟೂರ್ನಿಯ 22ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲು ತುದಿಗಾಲಲ್ಲಿ ನಿಂತಿದೆ. ಕಳೆದ 2017ರಲ್ಲಿ ಚಾಂಪಿಯನ್ಸ್‌ ಟ್ರೊಫಿ ಪೈನಲ್‌ನಲ್ಲಿ ಪಾಕ್‌ ವಿರುದ್ಧ ಸೋಲು ಅನುಭವಿಸಿದ್ದ ಭಾರತ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ನಾಳೆ ಕಣಕ್ಕೆ ಇಳಿಯಲಿದೆ.

ದಕ್ಷಿಣ ಆಫ್ರಿಕಾ ಹಾಗೂ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಆತ್ಮ ವಿಶ್ವಾಸದಲ್ಲಿ ಬೀಗುತ್ತಿದ್ದ ಭಾರತ, ಕಿವಿಸ್‌ ವಿರುದ್ಧ ತನ್ನ ಮೂರನೇ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ತೀವ್ರ ನಿರಾಸೆ ಅನುಭವಿಸಿತ್ತು.

ಧವನ್‌ ಅನುಪಸ್ಥಿಯಲ್ಲಿ ಕನ್ನಡಿಗೆ ಕೆ.ಎಲ್‌ ರಾಹುಲ್‌ ಅವರು ಉಪ ನಾಯಕ ರೋಹಿತ್‌ ಶರ್ಮಾ ಅವರೊಂದಿಗೆ ಇನಿಂಗ್ಸ್‌ ಆರಂಭಿಸಲಿದ್ದಾರೆ. ಈ ಜೋಡಿ ಉತ್ತಮ ಅಡಿಪಾಯ ಹಾಕಲಿದೆ ಎಂಬ ವಿಶ್ವಾಸ ನಾಯಕ ಕೊಹ್ಲಿಗೆ ಇದೆ. ಜತೆಗೆ, ಮಧ್ಯಮ ಕ್ರಮಾಂಕ ಕೂಡ ಅತ್ಯುತ್ತಮ ಜವಾಬ್ದಾರಿ ನಿರ್ವಹಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಕಳೆದ ಪಂದ್ಯಗಳ ಪ್ರದರ್ಶನ ಗಮನಿಸಿದರೆ, ಜಸ್ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಾಹಲ್‌, ಕುಲ್ದೀಪ್‌ ಯಾದವ್‌ ಅವರನ್ನೊಳಗೊಂಡ ಬೌಲಿಂಗ್‌ ಪಡೆ ಬಲಿಷ್ಟವಾಗಿದೆ. ಯಾವುದೇ ಸನ್ನಿವೇಶ ಎದುರಾದರೂ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಭಾರತ ಬೌಲಿಂಗ್‌ ಪಡೆಗೆ ಇದೆ.

ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 41 ರನ್‌ಗಳಿಂದ ಸೋಲು ಅನುಭವಿಸಿದ್ದ ಪಾಕಿಸ್ತಾನ ನಾಳೆ ಭಾರತದ ವಿರುದ್ಧ ಗೆದ್ದು ಮತ್ತೇ ಗೆಲುವಿನ ಲಯಕ್ಕೆ ಮರುಳುವ ಇರಾದೆಯಲ್ಲಿದೆ. ಮತ್ತೊಮ್ಮೆ 1992ರ ಪ್ರದರ್ಶನವನ್ನು ಪುನಾರಾವರ್ತಿಸುವ ಯೋಜನೆಯಲ್ಲಿ ನಾಳೆ ಕಣಕ್ಕೆ ಇಳಿಯಲಿದೆ.

ಭಾರತ ತಂಡ 2017ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿತ್ತು. ಆದ್ದರಿಂದ ಪಾಕ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ಬಲಾಬಲ ನೋಡಿದಾಗ ಕೊಹ್ಲಿ ಪಡೆ ಮೇಲುಗೈ ಸಾಧಿಸಿರುವುದು ಕಂಡುಬರಲಿದೆ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೂರು ವಿಭಾಗಗಳಲ್ಲಿ ಭಾರತ ಅತ್ಯುತ್ತಮ ಲಯದಲ್ಲಿದೆ.

ನಾಳಿನ ಪಂದ್ಯಕ್ಕೆ ಮಳೆ ಭೀತಿ:
ಇಂಡೊ-ಪಾಕ್‌ ಸಾಂಪ್ರದಾಯಿಕ ಎದುರಾಳಿಗಳ ಕಾಳಗವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈ ಪಂದ್ಯಕ್ಕಾಗಿ ದುಬಾರಿ ಮೊತ್ತ ನೀಡಿ ಟಿಕೆಟ್‌ ಖರೀದಿಸಿದ್ದಾರೆ. ಆದರೆ, ನಾಳಿನ ಪಂದ್ಯದ ಫಲಿತಾಂಶದ ಮೇಲೆ ವರುಣನ ಪ್ರಭಾವವನ್ನೂ ತಳ್ಳಿಹಾಕುವಂತಿಲ್ಲ. ಮ್ಯಾಂಚೆಸ್ಟರ್ ನಲ್ಲಿ ಶನಿವಾರ ಮೊಡಕವಿದ ವಾತಾವರಣ ಕಂಡು ಬಂದಿದ್ದು, ನಾಳೆ ಮಧ್ಯಾಹ್ನದ ನಂತರ ಮಳೆ ಬೀಳುವ ಸಾಧ್ಯತೆ ಇದೆ. ಹಾಗಾಗಿ, ತೀವ್ರ ಕುತೂಹಲ ಕೆರಳಿಸಿರುವ ನಾಳಿನ ಪಂದ್ಯಕ್ಕೆ ಮಳೆಯ ಭೀತಿಯನ್ನು ತಳ್ಳಿಹಾಕುವಂತಿಲ್ಲ.

ಹಾಗೇನಾದರೂ ಮಳೆ ಪಂದ್ಯವನ್ನು ಅಪೋಷನ ತೆಗೆದುಕೊಂಡರೆ ಭಾರಿ ನಿರೀಕ್ಷೆಯಲ್ಲಿರುವ ಭಾರತ-ಪಾಕಿಸ್ತಾನವಲ್ಲದೇ ಜಾಗತಿಕ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆ ಆಗಲಿದೆ. ಪ್ರಸಕ್ತ ಆವೃತ್ತಿ ವಿಶ್ವಕಪ್‌ನಲ್ಲಿ ಮಳೆಯಿಂದಾಗಿ ಅತೀ ಹೆಚ್ಚು ಪಂದ್ಯಗಳು ರದ್ದಾಗಿದ್ದು, ಇದು ಕ್ರೀಡಾಭಿಮಾನಿಗಳ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತಕ್ಕೆ ಅಮೀರ್‌ ಅಪಾಯಕಾರಿ:
ಸುದೀರ್ಘ ಅವಧಿ ಪಾಕಿಸ್ತಾನ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಮೊಹಮ್ಮದ್‌ ಅಮೀರ್‌ ನಾಳಿನ ಪಂದ್ಯಕ್ಕೆ ಪ್ರಮುಖ ಆಕರ್ಷಣೆ. ವಿಶ್ವಕಪ್‌ ಪಾಕ್‌ ತಂಡಕ್ಕೆ ಅನಿರೀಕ್ಷಿತವಾಗಿ ಆಯ್ಕೆಯಾದ ಅಮೀರ್‌, ನಿರೀಕ್ಷೆಯಂತೆ ಅದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ಅಮೀರ್ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ತೋರಿದ್ದಾರೆ. ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ಓವರ್‌ಗಳಲ್ಲಿ ಕೇವಲ 30 ರನ್‌ ನೀಡಿ ಐದು ವಿಕೆಟ್‌ ಕಬಳಿಸಿದ್ದರು. ಅಲ್ಲದೇ, ಭಾರತದ ವಿರುದ್ಧ ಕಳೆದ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಅತ್ಯುತ್ತಮ ದಾಳಿ ನಡೆಸಿದ್ದ ಅಮೀರ್‌ ಪಾಕಿಸ್ತಾನ ಚಾಂಪಿಯನ್‌ ಆಗುವಲ್ಲಿ ಶ್ರಮಿಸಿದ್ದರು. ಅತ್ಯುತ್ತಮ ಲಯದಲ್ಲಿರುವ ಇವರು ಭಾರತ ವಿರುದ್ಧವೂ ಅದೇ ಲಯ ಮುಂದುವರಿಸುವ ತುಡಿತದಲ್ಲಿದ್ದಾರೆ.

ಭಾರತ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ(ಉಪನಾಯಕ), ಮಹೇಂದ್ರ ಸಿಂಗ್‌ ಧೋನಿ (ವಿ.ಕೀ), ಕೆ.ಎಲ್ ರಾಹುಲ್‌, ದಿನೇಶ್‌ ಕಾರ್ತಿಕ್, ಭುವನೇಶ್ವರ್‌ ಕುಮಾರ್‌, ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲ್ದೀಪ್‌ ಯಾದವ್‌, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್, ರವೀಂದ್ರಾ ಜಡೇಜಾ.

ಪಾಕಿಸ್ತಾನ:
ಶೊಯೆಬ್‌ ಮಲ್ಲಿಕ್‌, ಮೊಹಮ್ಮದ್‌ ಹಫೀಜ್‌, ಸರ್ಫರಾಜ್‌ ಅಹಮದ್‌ (ನಾಯಕ), ವಹಾಬ್‌ ರಿಯಾಜ್‌,ಮೊಹಮ್ಮದ್‌ ಅಮೀರ್‌, ಹ್ಯಾರಿಸ್‌ ಸೊಹೈಲ್‌, ಬಾಬರ್‌ ಅಜಾಮ್‌, ಇಮಾಮ್‌-ಉಲ್‌-ಹಕ್‌, ಆಸೀಪ್‌ ಅಲಿ, ಇಮಾದ್‌ ವಾಸೀಮ್‌, ಫಖಾರ್‌ ಜಮಾನ್‌, ಶದಾಬ್‌ ಖಾನ್‌, ಹಸನ್‌ ಅಲಿ, ಶಾಹೀನ್‌ ಆಫ್ರಿದಿ, ಮೊಹಮ್ಮದ್‌ ಹಸ್ನೈನ್‌.

ಸಮಯ: ನಾಳೆ ಮಧ್ಯಾಹ್ನ 03:00
ಸ್ಥಳ: ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣ, ಮ್ಯಾಂಚೆಸ್ಟರ್‌
ವಿಶ್ವಕಪ್‌ ಉಭಯ ತಂಡಗಳ ಬಲಾಬಲ
ಭಾರತ: 6
ಪಾಕಿಸ್ತಾನ: 0
ಒಟ್ಟು: 6

Comments are closed.