ಕ್ರೀಡೆ

ಎಲಿಮಿನೇಟರ್ ಪಂದ್ಯ ದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ – ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ; ಗೆಲ್ಲುವುದು ಯಾರು ?

Pinterest LinkedIn Tumblr

ವಿಶಾಖಪಟ್ಟಣಂ: ಐಪಿಎಲ್ 12ನೇ ಆವೃತ್ತಿಯ ಪ್ಲೇ-ಆಫ್ ಗೇರಿರುವ 4 ತಂಡಗಳ ಪೈಕಿ ಒಂದು ತಂಡದ ಅಭಿಯಾನ ಬುಧವಾರಕ್ಕೆ ಕೊನೆಗೊಳ್ಳಲಿದೆ. ಇಲ್ಲಿನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯ ದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಾಡುವ ಅವಕಾಶ ಗಿಟ್ಟಿಸಿದರೆ, ಸೋಲುವ ತಂಡ ಟೂರ್ನಿಯಿಂದ ಹೊರ ಬೀಳಲಿದೆ.

ಈ ಟೂರ್ನಿಯಲ್ಲಿ ಹೈದ್ರಾಬಾದ್ ಹಾಗೂ ಡೆಲ್ಲಿ ತಂಡ ಗಳು 2 ಬಾರಿ ಮುಖಾಮುಖಿಯಾಗಿದ್ದು ಉಭಯ ತಂಡಗಳು ತಲಾ 1 ಬಾರಿ ಗೆಲುವು ಪಡೆದು ಸಮಬಲ ಸಾಧಿಸಿವೆ. ಹೈದ್ರಾಬಾದ್‌ನಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಡೆಲ್ಲಿ ಜಯಿಸಿದರೆ, ಡೆಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಹೈದ್ರಾಬಾದ್ ಜಯಭೇರಿ ಬಾರಿಸಿದೆ.

ಸನ್‌ಗಿದೆ ತವರಿನ ಲಾಭ: ಈ ಆವೃತ್ತಿಯಲ್ಲಿ ತವರಿನಲ್ಲಿ ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಹೈದ್ರಾಬಾದ್ 5ರಲ್ಲಿ ಗೆಲುವು ಸಾಧಿಸಿದ್ದು, 2 ಪಂದ್ಯಗಳಲ್ಲಿ ಸೋಲುಂಡಿದೆ. ಅದರಲ್ಲಿ ಡೆಲ್ಲಿ ವಿರುದ್ಧವು ತವರಿನಲ್ಲಿ ಹೈದ್ರಾಬಾದ್ ಸೋತಿರುವುದು ಸನ್‌ಗೆ ಹಿನ್ನಡೆಯಾಗಿದೆ. ಆದರೂ ಎಲ್ಲಾ ವಿಭಾಗ ದಲ್ಲೂ ಪ್ರಬಲ ಆಟಗಾರರನ್ನು ಹೊಂದಿರುವ ಹೈದ್ರಾಬಾದ್ ಲೀಗ್ ಹಂತದಲ್ಲಿ ತವರಿನಲ್ಲಿ ಡೆಲ್ಲಿ ಎದುರಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.

ಟೂರ್ನಿಯ ಗರಿಷ್ಠ ರನ್ ಸರದಾರ ಹೈದ್ರಾಬಾದ್ ತಂಡದವರಾಗಿದ್ದಾರೆ. ಆದರೆ ಆ ಆಟಗಾರ ಸದ್ಯ ಹೈದ್ರಾಬಾದ್ ತಂಡದಲ್ಲಿ ಇಲ್ಲ. ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ಹೈದ್ರಾಬಾದ್ ಸೋಲೊಪ್ಪಿ ಕೊಂಡಿದೆ. ಆದರೂ ನೆಟ್ ರನ್‌ರೇಟ್ ಆಧಾರದಲ್ಲಿ ಹೈದ್ರಾಬಾದ್ ಪ್ಲೇ-ಆಫ್ ಹಂತವನ್ನು ಖಚಿತಪಡಿಸಿಕೊಂಡಿತು. ಹೈದ್ರಾಬಾದ್ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದೆ. ಆದರೆ ದಿಢೀರ್ ಕುಸಿತ ಕಾಣುವ ಸಾಧ್ಯತೆ ಹೆಚ್ಚಾಗಿದೆ. ಒಂದೊಮ್ಮೆ ಹೈದ್ರಾಬಾದ್ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರೆ, ಡೆಲ್ಲಿ ತಂಡ ರನ್‌ಗಳಿಸಲು ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಹೈದ್ರಾಬಾದ್ ಬೌಲಿಂಗ್ ಬಳಗ ಸಾಕಷ್ಟು ಬಲವಾಗಿದೆ. ಸ್ಪಿನ್ ವಿಭಾಗದಲ್ಲಿ ರಶೀದ್ ಖಾನ್, ಮೊಹಮದ್ ನಬಿ, ವೇಗಿ ಭುವಿ, ಖಲೀಲ್ ವೇಗದ ನೊಗ ಹೊರಲಿದ್ದಾರೆ.

ಡೆಲ್ಲಿ ಮುಂದಿದೆ ದೊಡ್ಡ ಸವಾಲು: ಯುವ ಆಟಗಾರರಿಂದ ಕೂಡಿರುವ ಡೆಲ್ಲಿ ತಂಡದ ಮುಂದೆ ದೊಡ್ಡ ಸವಾಲು ಇದೆ. ಲೀಗ್ ಹಂತದಲ್ಲಿ ಗರಿಷ್ಠ ರನ್‌ರೇಟ್ ಹೊಂದಿದ್ದ ಹೈದ್ರಾಬಾದ್ ಎದುರು ಜಯ ಸಾಧಿಸುವ ಸವಾಲು ಶ್ರೇಯಸ್ ಬಳಗಕ್ಕಿದೆ. ಇತರೆ ತಂಡಗಳಿಗೆ ಹೋಲಿಸಿದರೆ ಹೈದ್ರಾಬಾದ್ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ವೇಗದ ಬೌಲರ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಭುವನೇಶ್ವರ್, ಎಡಗೈ ವೇಗಿ ಖಲೀಲ್ ಅಹ್ಮದ್, ಸಂದೀಪ್ ಶರ್ಮಾರನ್ನು ಎದುರಿಸುವುದು ಡೆಲ್ಲಿ ತಂಡಕ್ಕೆ ಕಠಿಣವಾಗಬಹುದು. ಖಲೀಲ್, ಭುವಿ ಅತ್ಯುತ್ತಮ ಲಯದಲ್ಲಿದ್ದು, ಹೈದ್ರಾಬಾದ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಡೆಲ್ಲಿ ಪರ ಫಿನೀಶರ್ ಪಾತ್ರ ನಿರ್ವಹಿಸಬಲ್ಲರು.

ಸ್ಥಳ: ಹೈದ್ರಾಬಾದ್
ಸಮಯ: ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1

Comments are closed.