ಕ್ರೀಡೆ

ಸಿಎಸ್​ಕೆ ಗೆಲುವಿನ ರಹಸ್ಯವೇನು? ರಹಸ್ಯ ಹೇಳಿದರೆ ಯಾರೂ ನನ್ನ ಖರೀದಿಸುವುದಿಲ್ಲ: ಧೋನಿ

Pinterest LinkedIn Tumblr


ಚೆನ್ನೈ: ಐಪಿಎಲ್ ಟೂರ್ನಿಯ ಇತಿಹಾಸ ಅವಲೋಕಿಸಿದರೆ ಅತೀ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಮುಖವಾದುದು. 2008ರಲ್ಲಿ ಪ್ರಾರಂಭವಾದ ಐಪಿಎಲ್​ನ 12ನೇ ಆವೃತ್ತಿ ಇದೀಗ ನಡೆಯುತ್ತಿದೆ. ಸಿಎಸ್​ಕೆ ತಾನು ಪಾಲ್ಗೊಂಡಿದ್ದ 9 ಆವೃತ್ತಿಗಳಲ್ಲೂ ಪ್ಲೇ ಆಫ್ ಹಂತ ಪ್ರವೇಶ ಮಾಡಿದೆ. ಅದರಲ್ಲಿ ಬರೋಬ್ಬರಿ ಏಳು ಬಾರಿ ಫೈನಲ್ ಪ್ರವೇಶಿಸಿದೆ. 3 ಬಾರಿ ಪ್ರಶಸ್ತಿ ಜಯಿಸಿದೆ. 2019ರ ಟೂರ್ನಿಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇಷ್ಟು ಸ್ಥಿರ ಪ್ರದರ್ಶನ ನೀಡಿದ ತಂಡ ಮತ್ತೊಂದಿಲ್ಲ.

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಎಸ್​ಕೆ ತಂಡದಲ್ಲಿ ಮೊದಲಿಂದಲೂ ನಾಯಕರಾಗಿಯೇ ಜೋಡಿತರಾಗಿದ್ದಾರೆ. ಸಿಎಸ್​ಕೆ ಎಂದರೆ ಧೋನಿ; ಧೋನಿ ಇಲ್ಲದ ಸಿಎಸ್​ಕೆ ಇಲ್ಲ ಎನ್ನುವಷ್ಟು ಅವಿಭಾಜ್ಯ ಅಂಗವಾಗಿ ಹೋಗಿದ್ದಾರೆ. ಎಂಥ ಆಟಗಾರರನ್ನು ಕೊಟ್ಟರೂ ಧೋನಿ ಅವರು ವಿನ್ನಿಂಗ್ ಟೀಮ್ ಆಗಿ ರೂಪಿಸುತ್ತಾರೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾರೆ ಎಂದು ಧೋನಿ ಬಗ್ಗೆ ವ್ಯಕ್ತವಾಗುವ ಪ್ರಶಂಸೆಯ ಮಾತುಗಳಾಗಿವೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸಾಧಿಸಲಾಗದ್ದನ್ನು ಧೋನಿ ಅವರು ಐಪಿಎಲ್​ನಲ್ಲಿ ಸಿಎಸ್​ಕೆ ಮೂಲಕ ಸಾಧಿಸಿದ್ದಾರೆ. ಧೋನಿ ಅವರ ಗೆಲುವಿನ ಗುಟ್ಟೇನು? ಧೋನಿ ಅವರು ಕ್ಯಾಪ್ಟನ್ ಕೂಲೇನೋ ಹೌದು. ಆದರೆ, ಇಷ್ಟು ಸ್ಥಿರವಾಗಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಲು ಇನ್ನೂ ದೊಡ್ಡ ಕಾರಣವಿರಲೇಬೇಕು. ಇಂಥ ಕುತೂಹಲಭರಿತ ಪ್ರಶ್ನೆಯನ್ನು ಧೋನಿ ಅವರಿಗೇ ನೀಡಿದಾಗ…. ಅವರು ನೀಡಿದ ಉತ್ತರ ಏನು?

ಏಪ್ರಿಲ್ 23ರಂದು ಹೈದರಾಬಾದ್ ವಿರುದ್ಧ ಸಿಎಸ್​ಕೆ ಗೆಲುವು ಸಾಧಿಸಿದ ನಂತರ ಪತ್ರಕರ್ತರ ಈ ಪ್ರಶ್ನೆಗೆ ಧೋನಿ ಉತ್ತರ ಕೊಡಲಿಲ್ಲ. ತಮ್ಮ ಗೆಲುವಿನ ಗುಟ್ಟು ಬಿಟ್ಟುಕೊಡಲು ನಿರಾಕರಿಸಿದರು. ಆದರೆ, ನಿವೃತ್ತಿಯಾದ ಬಳಿಕ ಈ ರಹಸ್ಯ ತಿಳಿಸುತ್ತೇನೆಂದು ಮಾತ್ರ ಸ್ಪಷ್ಪಪಡಿಸಿದರು.

“ಇದನ್ನು ನಾನು ಎಲ್ಲರಿಗೂ ತಿಳಿಸಿಬಿಟ್ಟರೆ, ಸಿಎಸ್​ಕೆ ತಂಡದವರು ಐಪಿಎಲ್ ಹರಾಜಿನಲ್ಲಿ ನನ್ನನ್ನು ಕೊಳ್ಳುವುದೇ ಇಲ್ಲ. ಇದು ಟ್ರೇಡ್ ಸೀಕ್ರೆಟ್. ನನ್ನ ಯಶಸ್ಸಿನಲ್ಲಿ ಸಿಎಸ್​ಕೆ ಬೆಂಬಲಿಗರು ಮತ್ತು ಫ್ರಾಂಚೈಸಿಯ ಬೆಂಬಲ ಬಹಳ ಮುಖ್ಯ” ಎಂದು ಮಹೇಂದ್ರ ಸಿಂಗ್ ಧೋನಿ ತಿಳಿಸಿದರು.

“ತಂಡದ ಸಪೋರ್ಟಿಂಗ್ ಸ್ಟ್ಯಾಫ್​ಗೆ ಹೆಚ್ಚು ಕ್ರೆಡಿಟ್ ಸಲ್ಲಬೇಕು. ತಂಡದೊಳಗೆ ಹಿತಕರ ವಾತಾವರಣ ನಿರ್ಮಾಣ ಮಾಡಲು ಇವರು ಪ್ರಮುಖ ಕಾರಣ. ಇದು ಬಿಟ್ಟರೆ, ನಾನು ನಿವೃತ್ತಿಯಾಗುವವರೆಗೂ ಏನನ್ನೂ ಬಹಿರಂಗಪಡಿಸುವುದಿಲ್ಲ” ಎಂದು ಧೋನಿ ಹೇಳಿದರು.

ಎಂಥ ಒತ್ತಡದಲ್ಲೂ ತಂಡವನ್ನು ಧೋನಿ ಬಹಳ ಶಾಂತಚಿತ್ತದಿಂದ ಮುನ್ನಡೆಸಬಲ್ಲರು. ಕೀಪರ್ ಕೂಡ ಆಗಿರುವ ಅವರು ಬ್ಯಾಟ್ಸ್​ಮೆನ್​ಗಳ ಮನಸ್ಥಿತಿಯನ್ನು ಗ್ರಹಿಸಿ ಬೌಲರ್​ಗೆ ಟಿಪ್ಸ್ ಕೊಡಬಲ್ಲರು. ಅದಕ್ಕೆ ತಕ್ಕಂತೆ ಫೀಲ್ಡಿಂಗ್ ಸೆಟ್ ಮಾಡಬಲ್ಲರು. ಸಂದರ್ಭಕ್ಕೆ ತಕ್ಕಂತೆ ಬೌಲರ್​ಗಳಿಗೆ ಚೆಂಡು ನೀಡಬಲ್ಲರು. ಇವಿಷ್ಟೂ ಧೋನಿ ಗುಣಗಳು ಸಿಎಸ್​ಕೆ ಗೆಲುವಿನ ಗುಟ್ಟಾಗಿರಬಹುದು ಎಂಬುದು ಧೋನಿ ಅಭಿಮಾನಿಗಳ ಅಭಿಪ್ರಾಯ. ಇದೂ ಮೀರಿ ಧೋನಿ ಬಳಿ ಬೇರಿನ್ನೇನೋ ಗೆಲುವಿನ ಗುಟ್ಟು ಇದೆಯಾ? ಅದನ್ನು ತಿಳಿಯಲು ಅವರು ನಿವೃತ್ತಿಯವರೆಗೂ ಕಾಯಬೇಕಾಗುತ್ತದೆ.

Comments are closed.