ಕ್ರೀಡೆ

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್’ಗೆ ಐದು ವಿಕೆಟ್ ಅಂತರದ ರೋಚಕ ಗೆಲುವು

Pinterest LinkedIn Tumblr

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಆಡಿರುವ 10 ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿರುವ ಡೆಲ್ಲಿ, ಒಟ್ಟು 12 ಅಂಕಗಳೊಂದಿಗೆ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಅಲ್ಲದೆ ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್ ಜತೆ ಸ್ಪಷ್ಟ ಅಂತರವನ್ನು ಕಾಪಾಡಿಕೊಂಡಿದೆ. ಇನ್ನೊಂದೆಡೆ ಈ ಸೋಲಿನ ಹೊರತಾಗಿಯೂ 10 ಪಂದ್ಯಗಳಲ್ಲಿ ಐದು ಗೆಲುವುಗಳೊಂದಿಗೆ ಅಷ್ಟೇ ಅಂಕಗಳನ್ನು ಸಂಪಾದಿಸಿರುವ ಪಂಜಾಬ್ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದೆ.

ಅಂಕಪಟ್ಟಿಯಲ್ಲಿ ಡೆಲ್ಲಿ ಹಿಂದಿಕ್ಕಲು ಈ ಪಂದ್ಯದಲ್ಲಿ ಪಂಜಾಬ್‌ಗೆ ಗೆಲುವು ಅನಿವಾರ್ಯವೆನಿಸಿತ್ತು. ಇದರಂತೆ ಕ್ರಿಸ್ ಗೇಲ್ ಬಿರುಸಿನ ಅರ್ಧಶತಕದ (69) ಹೊರತಾಗಿ ಇತರೆ ಯಾವ ಬ್ಯಾಟ್ಸ್‌ಮನ್‌ನಿಂದ ಹೆಚ್ಚಿನ ನೆರವು ದೊರಕಲಿಲ್ಲ. ಪರಿಣಾಮ ಏಳು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಶಕ್ತವಾಯಿತು.

ಬಳಿಕ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಆಕರ್ಷಕ ಅರ್ಧಶತಕ ಬಾರಿಸಿದ ಶಿಖರ್ ಧವನ್ (56) ಹಾಗೂ ನಾಯಕ ಶ್ರೇಯಸ್ ಅಯ್ಯರ್ (58*) ಸಮಯೋಚಿದ ಬ್ಯಾಟಿಂಗ್ ನೆರವಿನಿಂದ ಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಡೆಲ್ಲಿಗೆ ಪೃಥ್ವಿ ಶಾ (13) ಹಾಗೂ ಶಿಖರ್ ಧವನ್ ಉತ್ತಮ ಆರಂಭವೊದಗಿಸಿದರು. ಆದರೆ ಧವನ್ ಜತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಶಾ ವಿಕೆಟ್ ಒಪ್ಪಿಸಿದರು.

ಇನ್ನೊಂದೆಡೆ ಧವನ್ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು. ಪರಿಣಾಮ ಪವರ್-ಪ್ಲೇನಲ್ಲಿ 60 ರನ್ ಗಳಿಸಿ ಉತ್ತಮ ಸ್ಥಿತಿ ತಲುಪುವಂತಾಯಿತು. ಧವನ್‌ಗೆ ನಾಯಕ ಶ್ರೇಯಸ್ ಅಯ್ಯರ್‌ ಅವರಿಂದಲೂ ಉತ್ತಮ ಬೆಂಬಲ ದೊರಕಿತು.

10 ಓವರ್ ಅಂತ್ಯಕ್ಕೆ ಡೆಲ್ಲಿ ಸ್ಕೋರ್ 90/1. ಅಂದರೆ ಕೊನೆಯ 60 ಎಸೆತಗಳಲ್ಲಿ ಗೆಲುವಿಗೆ 74 ರನ್‌ಗಳ ಅವಶ್ಯಕತೆಯಿತ್ತು. ಅತ್ತ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ಧವನ್ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಶಿಖರ್ ಬ್ಯಾಟ್‌ನಿಂದ ಸಿಡಿದ 35ನೇ ಐಪಿಎಲ್ ಫಿಫ್ಟಿ ಸಾಧನೆಯಾಗಿದೆ.

ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 41 ಎಸೆತಗಳನ್ನು ಎದುರಿಸಿದ ಧವನ್ ಏಳು ಬೌಂಡರಿ ಹಾಗೂ ಸಿಕ್ಸರ್ ನೆರವಿನಿದ 56 ರನ್ ಗಳಿಸಿದರು. ಅಲ್ಲದೆ ನಾಯಕ ಅಯ್ಯರ್ ಜತೆಗೆ ದ್ವಿತೀಯ ವಿಕೆಟ್‌ಗೆ 92 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

ಈ ನಡುವೆ ಮಗದೊಮ್ಮೆ ಅರ್ಪಣಾ ಮನೋಭಾವದ ಕೊರತೆ ಅನುಭವಿಸಿದ ರಿಷಬ್ ಪಂತ್ (6) ತಮ್ಮ ವಿಕೆಟನ್ನು ದಾನವಾಗಿ ನೀಡಿದರು. ಇದರಿಂದ ಡೆಲ್ಲಿ ಚೇಸಿಂಗ್‌ಗೆ ಹಿನ್ನಡೆಯಾಯಿತು.

ಏತನ್ಮಧ್ಯೆ ಅಂತಿಮ ಹಂತದಲ್ಲಿ ನಾಲ್ಕು ಬೌಂಡರಿಗಳಿಂದ ಕೇವಲ 9 ಎಸೆತಗಳಲ್ಲೇ 19 ರನ್ ಚಚ್ಚಿದ ಕಾಲಿನ್ ಇನ್‌ಗ್ರಾಂ ಗೆಲುವನ್ನು ಖಚಿತಪಡಿಸಿದರು. ಇನ್ನೊಂದೆಡೆ ನಾಯಕನ ಇನ್ನಿಂಗ್ಸ್ ಕಟ್ಟಿದ ಅಯ್ಯರ್ 45 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅಂತಿಮವಾಗಿ ಇನ್ನು ಎರಡು ಎಸೆತಗಳು ಬಾಕಿ ಉಳಿದರುವಂತೆಯೇ 19.4 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ವಿಜಯ ದಾಖಲಿಸಿತು. 49 ಎಸೆತಗಳನ್ನು ಎದುರಿಸಿದ ಅಯ್ಯರ್ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ಔಟಾಗದೆ ಉಳಿದರು.

Comments are closed.