ಮೇ 30 ರಿಂದ ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಏಪ್ರಿಲ್ 15 ರಂದು ಮುಂಬೈನಲ್ಲಿ ನಡೆದ ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಹಾಗೂ ಐದು ಆಯ್ಕೆದಾರರು ನಡೆಸಿದ ಸಭೆಯಲ್ಲಿ 15 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ವಿರಾಟ್ ಕೊಹ್ಲಿ ಮುನ್ನಡೆಸಲಿರುವ ತಂಡದಲ್ಲಿ ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ವಿಜಯ್ ಶಂಕರ್, ಎಂ.ಎಸ್ ಧೋನಿ (ವಿಕೆಟ್ ಕೀಪರ್), ಕೇದರ್ ಜಾಧವ್, ದಿನೇಶ್ ಕಾರ್ತೀಕ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದರು.
ಆದರೀಗ ಈ ಪಟ್ಟಿಗೆ 4 ಹೆಚ್ಚುವರಿ ಬೌಲರ್ಗಳನ್ನು ಸಹ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಬಾರಿಯ ವರ್ಲ್ಡ್ ಕಪ್ ಇಂಗ್ಲೆಂಡ್ನಲ್ಲಿ ನಡೆಯಲಿದ್ದು, ಅಲ್ಲಿನ ವೇಗದ ಪಿಚ್ಗಳಲ್ಲಿ ಆಟಗಾರರಿಗೆ ಭ್ಯಾಸ ನಡೆಸಲು ತಂಡದೊಂದಿಗೆ ನಾಲ್ಕು ಯುವವೇಗಿಗಳನ್ನು ಕಳುಹಿಸಲು ಬಿಸಿಸಿಐ ತೀರ್ಮಾನಿಸಿದೆ. ಈ ಮಾಹಿತಿ ಪ್ರಕಾರ ಭರವಸೆಯ ವೇಗಿಗಳಾದ ನವದೀಪ್ ಸೈನಿ, ಅವೇಶ್ ಖಾನ್, ದೀಪಕ್ ಚಾಹರ್ ಹಾಗೂ ಖಲೀಲ್ ಅಹ್ಮದ್ ಟೀಂ ಇಂಡಿಯಾದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ.
2015 ರಲ್ಲಿ ನ್ಯೂಜಿಲೆಂಡ್-ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ವೇಳೆ ತಂಡದೊಂದಿಗೆ ಹೆಚ್ಚುವರಿ ಬೌಲರ್ಗಳನ್ನು ಕಳುಹಿಸಿಕೊಡಲಾಗಿತ್ತು. ಈ ವೇಳೆ ತಂಡದಲ್ಲಿ ಆಯ್ಕೆಯಾಗದಿದ್ದರೂ ಅಭ್ಯಾಸಕ್ಕಾಗಿ ಧವಲ್ ಕುಲಕರ್ಣಿಯನ್ನು ಹೆಚ್ಚುವರಿ ಬೌಲರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಬಾರಿ ಟೀಂ ಇಂಡಿಯಾದ ಬೌಲರ್ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು 4 ಬೌಲರ್ಗಳನ್ನು ಕಳುಹಿಸಲಾಗುತ್ತಿದೆ ಎಂದು ಬಿಸಿಸಿಐ ಆಡಳಿತ ಮಂಡಳಿ ತಿಳಿಸಿದೆ.
ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳಿಗೆ ನೆಟ್ ಪ್ರಾಕ್ಟೀಸ್ನಲ್ಲಿ ಹೆಚ್ಚಿನ ಸಮಯ ಕಳೆಯಲು ನಾಲ್ವರು ಹೆಚ್ಚುವರಿ ಬೌಲರ್ಗಳನ್ನು ಆಯ್ಕೆ ಮಾಡಲಾಗಿದೆ. ಇದರಿಂದ ತಂಡದಲ್ಲಿರುವ ಬೌಲರ್ಗಳು ಸತತ ಪ್ರಾಕ್ಟೀಸ್ನಿಂದ ಬಳಲುವುದು ತಪ್ಪಲಿದೆ. ಹಾಗೆಯೇ ಇತರೆ ಬೌಲರ್ಗಳಿರುವುದರಿಂದ ಎಲ್ಲ ಆಟಗಾರರಿಗೂ ಹೆಚ್ಚು ಹೊತ್ತು ಅಭ್ಯಾಸದಲ್ಲಿ ನಿರತವಾಗಬಹುದು. ಈ ಹಿನ್ನೆಲೆಯಲ್ಲಿ ಯುವ ವೇಗಿಗಳನ್ನು ಆರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 4 ರಂದು ದಕ್ಷಿಣ ಆಫ್ರಿಕಾ ವಿರುದ್ಧದೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಹಾಗೆಯೇ ಜೂನ್ 16 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಮುಖಾಮುಖಿ ಆಗಲಿದ್ದು, ಈ ಪಂದ್ಯವನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.