ಕ್ರೀಡೆ

ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು: 7ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಮುಡಿಗೇರಿಸಿಕೊಂಡ ಭಾರತ

Pinterest LinkedIn Tumblr

ದುಬೈ: ತೀವ್ರ ಕುತೂಹಲದ ಹಣಾಹಣಿಯಲ್ಲಿ ಬಾಂಗ್ಲಾದೇಶ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದ ಟೀಮ್ ಇಂಡಿಯಾ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರಿದೆ.

ಟೀಮ್ ಇಂಡಿಯಾ ದಾಖಲೆಯ ಏಳನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್‌ಶಿಪ್ ಮುಡಿಗೇರಿಸಿದೆ. ಏಷ್ಯಾಕಪ್ ಫೈನಲ್​ನ ಚೇಸಿಂಗ್​ನ ಹಾದಿಯಲ್ಲಿ ಹಲವು ಏರಿಳಿತಗಳನ್ನು ಅನುಭವಿಸಿದರೂ, ರವೀಂದ್ರ ಜಡೇಜಾ ಹಾಗೂ ಭುವನೇಶ್ವರ್ ಕುಮಾರ್ ಗೆಲುವಿನ ಸನಿಹದವರೆಗೂ ನಿಂತು ಹೋರಾಟ ನಡೆಸಿದ್ದರಿಂದ ಭಾರತ 2010ರ ಬಳಿಕ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತು.

ದುಬೈ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮ, ಬಾಂಗ್ಲಾ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದರು. 23 ವರ್ಷದ ಲಿಟನ್ ದಾಸ್ (121 ರನ್, 117 ಎಸೆತ, 12 ಬೌಂಡರಿ, 2 ಸಿಕ್ಸರ್) ಬಾರಿಸಿದ ಚೊಚ್ಚಲ ಏಕದಿನ ಶತಕದ ನೆರವಿನಿಂದ ಬಾಂಗ್ಲಾ 48.3 ಓವರ್​ಗಳಲ್ಲಿ 222 ರನ್ ಪೇರಿಸಿತು. ಪ್ರತಿಯಾಗಿ ಸಂಘಟಿತ ಬ್ಯಾಟಿಂಗ್ ನಡೆಸಿದ ಭಾರತ ತಂಡ 50 ಓವರ್​ಗಳಲ್ಲಿ 7 ವಿಕೆಟ್​ಗೆ 223 ರನ್ ಪೇರಿಸಿ ಗೆಲುವು ಕಂಡಿತು.

ಮೊತ್ತ ಬೆನ್ನಟ್ಟಿದ ಹಾಲಿ ಚಾಂಪಿಯನ್ ಭಾರತ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ 10 ಓವರ್​ಗಳ ಪವರ್ ಪ್ಲೇ ಅವಧಿಯಲ್ಲಿ 2 ವಿಕೆಟ್ ಕಳೆದುಕೊಂಡಿತು. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಶತಕ ಬಾರಿಸಿದ್ದ ಶಿಖರ್ ಧವನ್ (15) 3 ಬೌಂಡರಿ ಸಿಡಿಸಿ ನಿರ್ಗಮಿಸಿದರೆ, ಅಂಬಟಿ ರಾಯುಡು ಕೇವಲ 2 ರನ್ ಬಾರಿಸಿ ಮೊರ್ಟಜಗೆ ವಿಕೆಟ್ ಒಪ್ಪಿಸಿದರು.

46 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ 3ನೇ ವಿಕೆಟ್​ಗೆ ರೋಹಿತ್ ಶರ್ಮಗೆ (48ರನ್, 55 ಎಸೆತ, 3 ಬೌಂಡರಿ, 3 ಸಿಕ್ಸರ್) ಜತೆಯಾದ ದಿನೇಶ್ ಕಾರ್ತಿಕ್ (37ರನ್, 61 ಎಸೆತ, 1 ಬೌಂಡರಿ, 1 ಸಿಕ್ಸರ್) 37 ರನ್ ಸೇರಿಸಿದರು. ರೋಹಿತ್ ಔಟಾದಾಗ ಭಾರತ ಆತಂಕ ಎದುರಿಸಿದರೂ, ಕಾರ್ತಿಕ್​ಗೆ ಜತೆಯಾದ ಧೋನಿ (36ರನ್, 67 ಎಸೆತ, 3 ಬೌಂಡರಿ) 4ನೇ ವಿಕೆಟ್​ಗೆ ಅಮೂಲ್ಯ 54 ರನ್ ಜತೆಯಾಟವಾಡಿದರು.

ಗೆಲುವು ಖಚಿತಪಡಿಸಿದ ಭುವಿ, ಜಡೇಜಾ: ಧೋನಿ ಔಟಾದಾಗ ಭಾರತದ ಗೆಲುವಿಗೆ ಇನ್ನೂ 63 ರನ್ ಅಗತ್ಯವಿತ್ತು. ಈ ವೇಳೆ ಕ್ರೀಸ್​ನಲ್ಲಿದ್ದ ಕೇದಾರ್ ಜಾಧವ್ ನರಳುತ್ತಲೇ ಬ್ಯಾಟಿಂಗ್ ಮಾಡಿ ತಂಡದ ಮೊತ್ತ 167 ರನ್ ಆಗಿದ್ದಾಗ ನಿವೃತ್ತಿಯಾದರು. ಸೋಲಿನ ಆತಂಕದಲ್ಲಿದ್ದಾಗ ಜತೆಯಾದ ರವೀಂದ್ರ ಜಡೇಜಾ (23) ಹಾಗೂ ಭುವನೇಶ್ವರ್ (21) 6ನೇ ವಿಕೆಟ್​ಗೆ 45 ರನ್ ಜತೆಯಾಟವಾಡಿ ರೋಚಕ ಗೆಲುವು ಖಚಿತಪಡಿಸಿದರು.

ಸ್ಪಿನ್ ಬೌಲರ್ ಮೆಹ್ದಿ ಹಸನ್ (32ರನ್, 59 ಎಸೆತ, 3 ಬೌಂಡರಿ), ಎಂದಿನ ಆರಂಭಿಕ ಆಟಗಾರ ಲಿಟನ್ ದಾಸ್ ಜತೆ ಮೊದಲ ವಿಕೆಟ್​ಗೆ ಕಣಕ್ಕಿಳಿದರು. ಬಾಂಗ್ಲಾ ಟೀಮ್ ಮ್ಯಾನೇಜ್​ವೆುಂಟ್​ನ ಈ ಅಚ್ಚರಿಯ ನಡೆ ತಂಡಕ್ಕೆ ಲಾಭ ಮಾಡಿಕೊಟ್ಟಿತು. ಅವರಿಬ್ಬರು 125 ಎಸೆತಗಳಲ್ಲಿ 120 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. 2016ರ ಡಿಸೆಂಬರ್ ಬಳಿಕ ಬಾಂಗ್ಲಾ ಪರ ಮೊದಲ ವಿಕೆಟ್​ಗೆ ದಾಖಲಾದ ಶತಕದ ಜತೆಯಾಟ ಇದಾಗಿದೆ.

ಅಗ್ರ ಬೌಲರ್​ಗಳು ಈ ಜೋಡಿಯನ್ನು ಬೇರ್ಪಡಿಸಲು ವಿಫಲರಾದಾಗ, ಕೇದಾರ್ ಜಾಧವ್ 21ನೇ ಓವರ್​ನಲ್ಲಿ ಭಾರತಕ್ಕೆ ಯಶ ದೊರಕಿಸಿಕೊಟ್ಟರು. ಮೊದಲ ವಿಕೆಟ್ ಬೇರ್ಪಟ್ಟ ಬಳಿಕ ಬಾಂಗ್ಲಾ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಜಾಧವ್-ಚಾಹಲ್ ವಿಕೆಟ್ ಬೇಟೆ ಹಾಗೂ ಕೆಲ ರನೌಟ್​ಗಳು ಭಾರತಕ್ಕೆ ನೆರವಾದವು.

ಬಾಂಗ್ಲಾದೇಶ ತಂಡ ಫೈನಲ್​ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಶ್ಪೀಕರ್ ರಹೀಂ (5), ಮಹಮದುಲ್ಲ (4) ಹಾಗೂ ಮೊಹಮದ್ ಮಿಥುನ್ (2) ಅಲ್ಪ ಮೊತ್ತಕ್ಕೆ ಔಟಾದರೆ, ವನ್​ಡೌನ್ ಆಟಗಾರನಾಗಿ ಅಚ್ಚರಿಯ ಬಡ್ತಿ ಪಡೆದಿದ್ದ ಇಮ್ರುಲ್ ಕಯೀಸ್ 12 ಎಸೆತಗಳಲ್ಲಿ 2 ರನ್ ಬಾರಿಸಿದರು. ಇದರಿಂದಾಗಿ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್ ಬಾರಿಸಿದ್ದ ಬಾಂಗ್ಲಾ, 151 ರನ್ ಬಾರಿಸುವ ವೇಳೆಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು.

ಇದರಿಂದ ಶತಕದ ಜತೆಯಾಟದ ನಡುವೆಯೂ 200ರ ಒಳಗೆ ಆಲೌಟ್ ಆಗುವ ಭೀತಿ ಎದುರಿಸಿದ್ದ ಬಾಂಗ್ಲಾಕ್ಕೆ 6ನೇ ವಿಕೆಟ್​ಗೆ ಲಿಟನ್ ಹಾಗೂ ಸೌಮ್ಯ ಸರ್ಕಾರ್ (33) 37 ರನ್ ಸೇರಿಸಿದರು. ತಂಡದ ಮೊತ್ತ 188 ರನ್ ಆಗಿದ್ದಾಗ ಲಿಟನ್ ಔಟಾದರೂ, ಬಾಲಂಗೋಚಿಗಳ ನೆರವು ಪಡೆದುಕೊಂಡ ಸೌಮ್ಯ ಸರ್ಕಾರ್, 9ನೇ ವಿಕೆಟ್ ರೂಪದಲ್ಲಿ ಔಟಾಗುವ ವೇಳೆ ಮೊತ್ತವನ್ನು 220ರ ಗಡಿ ದಾಟಿಸಿದ್ದರು. 20 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 116 ರನ್ ಬಾರಿಸಿದ್ದ ಬಾಂಗ್ಲಾದೇಶ ನಂತರದ 28.3 ಓವರ್​ಗಳಲ್ಲಿ 106 ರನ್​ಗೆ ಹತ್ತೂ ವಿಕೆಟ್​ಗಳನ್ನು ಕಳೆದುಕೊಂಡಿತು.

Comments are closed.