ಕ್ರೀಡೆ

ಏಷ್ಯಾ ಕಪ್ 2018: ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ದಾಖಲಿಸಿರುವ ಬಾಂಗ್ಲಾದೇಶ ಫೈನಲ್‌ಗೆ

Pinterest LinkedIn Tumblr

ಅಬುದಾಬಿ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಬುಧವಾರ ನಡೆದ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 37 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಬಾಂಗ್ಲಾದೇಶ ಫೈನಲ್‌ಗೆ ಪ್ರವೇಶಿಸಿದೆ.

ಇದರೊಂದಿಗೆ ಶುಕ್ರವಾರದಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತದ ಸವಾಲನ್ನು ಎದುರಿಸಲಿದೆ.

ಸೆಮಿಫೈನಲ್ ಮಹತ್ವ ಪಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ, ಮುಶ್ಫಿಕರ್ ರಹೀಂ (99) ಹಾಗೂ ಮೊಹಮ್ಮದ್ ಮಿಥುನ್ (60) ಅಮೋಘ ಅರ್ಧಶತಕಗಳ ನೆರವಿನಿಂದ 239 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

ಬಳಿಕ ರನ್ ಬೆನ್ನತ್ತಿದ ಪಾಕ್ ಇಮಾಮ್ ಉಲ್ ಹಕ್ (83) ಹೋರಾಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 37 ರನ್ ಅಂತರದ ಸೋಲಿಗೆ ಶರಣಾಗುವುದರೊಂದಿಗೆ ಕೂಟದಿಂದಲೇ ಹೊರಬಿದ್ದಿದೆ.

ಇದರೊಂದಿಗೆ ಮಗದೊಂದು ಭಾರತ-ಪಾಕ್ ಫೈನಲ್ ನಿರೀಕ್ಷೆ ಮಾಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇನ್ನೊಂದೆಡೆ 2016ರ ಇಸವಿಯ ಆವರ್ತನೆಯಂತೆ ಮತ್ತೆ ಭಾರತ-ಬಾಂಗ್ಲಾ ಫೈನಲ್‌ಗೆ ವೇದಿಕೆ ಸಿದ್ಧಗೊಂಡಿದೆ. ಕಳೆದ ಬಾರಿ ಟ್ವೆಂಟಿ-20 ಪ್ರಕಾರದಲ್ಲಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ಮಣಿಸಿದ ಭಾರತ ಪ್ರಶಸ್ತಿ ಎತ್ತಿ ಹಿಡಿದಿತ್ತು.

240 ಮೊತ್ತ ಬೆನ್ನತ್ತಿದ ಪಾಕಿಸ್ತಾನ 18 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಫಖಾರ್ ಜಮಾನ್ (1), ಬಾಬರ್ ಅಜಾಮ್ (1) ಹಾಗೂ ನಾಯಕ ಸರ್ಫರಾಜ್ ಅಹ್ಮದ್ (10) ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಇಮಾಮ್ ಉಲ್ ಹಕ್ ಹಾಗೂ ಶೋಯಿಬ್ ಮಲಿಕ್ ತಂಡವನ್ನು ಮುನ್ನಡೆಸಿದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಆದರೆ ಈ ಜತೆಯಾಟ ಹೆಚ್ಚು ಹೊತ್ತು ನಿಲ್ಲಲಿಲ್ಲ. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಶೋಯಿಬ್ ಮಲಿಕ್ (30) ಅವರನ್ನು ರುಬೆಲ್ ಹುಸೇನ್ ದಾಳಿಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಬಾಂಗ್ಲಾ ನಾಯಕ ಮಶ್ರಾಫೆ ಮೊರ್ತಾಜಾ ಪಂದ್ಯಕ್ಕೆ ತಿರುವಿ ನೀಡಿದರು.

ಬಳಿಕ ಬಂದ ಶದಬ್ ಖಾನ್ (4) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರೊಂದಿಗೆ 25.1 ಓವರ್‌ಗಳಲ್ಲಿ 94 ರನ್‌ಗಳಿಗೆ ಅರ್ಧ ತಂಡವು ಪೆವಿಲಿಯನ್‌ಗೆ ಸೇರಿತು.

ಅತ್ತ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಮಾಮ್ ಉಲ್ ಹಕ್ ಆಕರ್ಷಕ ಅರ್ಧಶತಕ ಬಾರಿಸಿದರು. ಇವರಿಗೆ ಆಸಿಫ್ ಆಲಿ ಅವರಿಂದ ಉತ್ತಮ ಬೆಂಬಲ ದೊರಕಿತು. ಈ ಮೂಲಕ ಪಾಕ್ ತಿರುಗೇಟು ನೀಡಿತು.

35 ಓವರ್‌ಗಳಲ್ಲಿ ಪಾಕ್ ಸ್ಕೋರ್ 140/5. ಇದರೊಂದಿಗೆ ಅಂತಿಮ 90 ಎಸೆತಗಳಲ್ಲಿ ತಂಡದ ಗೆಲುವಿಗೆ 100 ರನ್‌ಗಳ ಅವಶ್ಯಕತೆಯಿತ್ತು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಆಸಿಫ್ ಆಲಿ (31) ಸ್ಟಂಪಿಂಗ್ ಬಲೆಗೆ ಸಿಲುಕಿದರು. ಆದರೂ ಇಮಾಮ್ ಜೊತೆಗೆ ಆರನೇ ವಿಕೆಟ್‌ಗೆ 71 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

ಅಂತಿಮ 10 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ ಪಾಕ್‌ ಗೆಲುವಿಗೆ 75 ರನ್ ಬೇಕಾಗಿತ್ತು. ಆದರೆ ಏಕಾಂಕಿ ಹೋರಾಟ ನೀಡುತ್ತಿದ್ದ ಇಮಾಮ್ ಕೊನೆಗೂ ತಮ್ಮ ಹೋರಾಟವನ್ನು ಅರ್ಧದಲ್ಲೇ ಕೊನೆಗೊಳಿಸಿ ಪೆವಿಲಿಯನ್‌ಗೆ ಮರಳಿದರು. ಲಿಟನ್ ದಾಸ್ ಅವರ ಮಗದೊಂದು ನಿಖರ ಸ್ಟಂಪಿಂಗ್‌ಗೆ ಬಲಿಯಾದ ಇಮಾಮ್ ಶತಕ ವಂಚಿತರಾದರು. ಅಲ್ಲದೆ 105 ಎಸೆತಗಳ ಫೈಟಿಂಗ್ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 83 ರನ್ ಗಳಿಸಿದರು.

ಇನ್ನುಳಿದಂತೆ ಮೊಹದ್ ನವಾಜ್ (8), ಹಸನ್ ಅಲಿ (8), ಶಾಹೀನ್ ಆಫ್ರಿದಿ (14*) ಹಾಗೂ ಜುನೈದ್ ಖಾನ್ (3*) ರನ್ ಗಳಿಸಲಷ್ಟೇ ಶಕ್ತವಾದರು. ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 202 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಾಂಗ್ಲಾ ಪರ ನಿಖರ ದಾಳಿ ಸಂಘಟಿಸಿದ ಮುಸ್ತಾಫಿಜುರ್ ರೆಹ್ಮಾನ್ ನಾಲ್ಕು ಹಾಗೂ ಮೆಹ್ತಿ ಹಸನ್ ಎರಡು ವಿಕೆಟ್ ಕಿತ್ತು ಮಿಂಚಿದರು.

Comments are closed.