
ಹೊಸದಿಲ್ಲಿ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡುಬಂದಿಲ್ಲ.
ಈ ನಡುವೆ ಅಮಿತ್ ಪಂಗಲ್ ಬಾಕ್ಸಿಂಗ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ ಏಕಮಾತ್ರ ಭಾರತೀಯ ಎನಿಸಿಕೊಂಡಿದ್ದಾರೆ.
ಕ್ರೀಡಾಕೂಟದ 13ನೇ ದಿನವಾದ ಶುಕ್ರವಾರ ನಡೆದ ಪುರುಷರ 49 ಕೆ.ಜಿ ಸೆಮಿಫೈನಲ್ ಪಂದ್ಯದಲ್ಲಿ ಪಿಲಿಫೈನ್ಸ್‌ನ ಕಾರ್ಲೊ ಪ್ಯಾಲಮ್ ಅವರನ್ನು 3-2ರ ಅಂತರದಲ್ಲಿ ಮಣಿಸಿದ ಅಮಿತ್ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.
ಈ ಮೊದಲು ಗಾಯದಿಂದಾಗಿ ಸೆಮಿಫೈನಲ್‌ನಲ್ಲಿ ಆಡಲು ಅನರ್ಹಗೊಂಡಿರುವ ವಿಕಾಸ್ ಕೃಷ್ಣನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಭಾರತೀಯ ಸೇನೆಯ ಅಂಗವಾಗಿರುವ ಅಮಿತ್, ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಪ್ರಸ್ತುತ ಅಮಿತ್ ಚಿನ್ನ ಗೆಲ್ಲಲಿ ಎಂಬುದು ದೇಶದ ಕ್ರೀಡಾಭಿಮಾನಿಗಳ ಆಶಯವಾಗಿದೆ.
Comments are closed.