ಕ್ರೀಡೆ

ಏಕದಿನ ಸರಣಿ ಸೋತ ಟೀಂ ಇಂಡಿಯಾ; ಇಂಗ್ಲೆಂಡ್ 8 ವಿಕೆಟ್ ಗಳಿಂದ ಜಯ: ಕೈಕೊಟ್ಟ ಭಾರತೀಯ ಬೌಲರ್’ಗಳು

Pinterest LinkedIn Tumblr

ಲೀಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಜಯ ಗಳಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ.

ಟೀಮ್ ಇಂಡಿಯಾ ಟಾಸ್ ಸೋತರು ಮೊದಲು ಬ್ಯಾಟಿಂಗ್ ಅವಕಾಶ ಪಡೆಯಿತು. ನಿರ್ಣಾಯಕ ಪಂದ್ಯವಾದ್ದರಿಂದ ಉತ್ತಮ ಜೊತೆಯಾಟದ ನಿರೀಕ್ಷೆಯು ತಂಡದಲ್ಲಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಭಾರತ ಚೇತರಿಸಿಕೊಳ್ಳೊದ್ರೊಳಗೆ ಎಡವಟ್ಟು ಮಾಡಿಕೊಂಡಿತು.

2ನೇ ವಿಕೆಟ್’ಗೆ ಶಿಖರ್ ಧವನ್ ಹಾಗೂ ನಾಯಕ ಕೊಹ್ಲಿ ಉತ್ತಮವಾಗೇ ಇನ್ನಿಂಗ್ಸ್ ಕಟ್ಟುತ್ತಿದ್ದರು. ಆದರೆ ಶಿಖರ್ ಧವನ್ 44ರನ್ ಗಳಿಸಿದ್ದಾಗ ಅನಾವಶ್ಯಕ ರನ್ಔಟ್ ಆಗಿದ್ದೇ ತಡ ಟೀಮ್ ಇಂಡಿಯಾ ಆಟಗಾರರ ಪೆವಿಲಿಯನ್ ಪರೇಡ್ ಶುರುವಾಗೇ ಬಿಟ್ಟಿತು. ನಾಯಕ ಕೊಹ್ಲಿ 71 ರನ್ ಹಾಗೂ ಧೋನಿ 42 ರನ್ ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟ್ಸ್ಮನ್ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ಉಳಿಯಲಿಲ್ಲ. ಕೆ.ಎಲ್ ರಾಹುಲ್ ಬದಲು ಚಾನ್ಸ್ ಪಡೆದಿದ್ದ ಕಾರ್ತಿಕ್ ಕೂಡ 21ರನ್’ಗೆ ವಿಕೆಟ್ ಒಪ್ಪಿಸಿದರು. ರೈನಾ 1, ಪಾಂಡ್ಯ 21 , ಶಾರ್ದೂಲ್ ಅಜೇಯ 22 ರನ್ಗಳಿಸಿದ್ದೇ ಹೆಚ್ಚು. ಪರಿಣಾಮ ಭಾರತ 8 ವಿಕೆಟ್ ನಷ್ಟಕ್ಕೆ 256 ರನ್ ಕಲೆಹಾಕಿ ಸಾಧಾರಣ ಮೊತ್ತ ಕಲೆಹಾಕಿತು.

257 ರನ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಸ್ಪೋಟಕ ಆರಂಭ ಪಡೆಯಿತು. ಜಾನಿ ಬೈಸ್ಟ್ರೋವ್ ಬೌಂಡರಿಗಳ ಬೇಟೆಯಾಡಲು ಶುರುಮಾಡಿದರು. ಆದರೆ 30 ರನ್ ಗಳಿಸಿದ್ದಾಗ ಶಾರ್ದೂಲ್ ಠಾಕೂರ್ ಅವರ ಮೊದಲ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಗಾಯಾಳು ಜೇಸನ್ ರಾಯ್ ಬದಲು ಸ್ಥಾನ ಪಡೆದಿದ್ದ ಮತ್ತೊಬ್ಬ ಓಪನರ್ ಜೇಮ್ಸ್ ವಿನ್ಸ್ 27 ರನ್ಗಳಿಸಿದ್ದಾಗ ರನ್ಔಟ್ಗೆ ಬಲಿಯಾದರು.

2 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ಗೆ ಆಧಾರವಾಗಿದ್ದು ಲಾರ್ಡ್ಸ್ ಅಂಗಳದಲ್ಲಿ ಸೆಂಚುರಿ ಸಿಡಿಸಿದ್ದ ಜೋ ರೂಟ್ ಹಾಗೂ ನಾಯಕ ಮಾರ್ಗನ್. ಟೀಮ್ ಇಂಡಿಯಾದ ವ್ರಿಸ್ಟ್ ಸ್ಪಿನ್ನರ್ಗಳನ್ನ ಯಶಸ್ವಿಯಾಗಿ ಎದುರಿಸಿದ ಈ ಜೋಡಿ ಕೊಹ್ಲಿ ಪಡೆಗೆ ಯಾವುದೇ ಅವಕಾಶ ನೀಡಲಿಲ್ಲ. 3ನೇ ವಿಕೆಟ್’ಗೆ ಮುರಿಯದ ಜೊತೆಯಾಟವಾಡಿದ ರೂಟ್-ಮಾರ್ಗನ್ ಶತಕದ ಜೊತೆಯಾಟದ ಮೂಲಕ ಇಂಗ್ಲೆಂಡ್’ಗೆ ಪಂದ್ಯ ಹಾಗೂ ಏಕದಿನ ಸರಣಿಯನ್ನ ಗೆಲ್ಲಿಸಿಕೊಟ್ಟರು. ಈ ಮೂಲಕ 2016ರಿಂದ ಸತತ 9 ದ್ವಿಪಕ್ಷೀಯ ಸರಣಿ ಗೆದ್ದಿದ್ದ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿತ್ತು.

ಸಂಕ್ಷಿಪ್ತ ಸ್ಕೋರ್:

ಭಾರತ: 256-8

(ವಿರಾಟ್ ಕೊಹ್ಲಿ 71, ಧವನ್ 44, ಎಂ. ಎಸ್. ಧೋನಿ 42, ಡೇವಿಡ್ ವಿಲ್ಲೆ 40/3, ಆದಿಲ್ ರಶೀದ್ 49/3)

ಇಂಗ್ಲೆಂಡ್: 260-2(44.3 ಓವರ್)

(ಜೋ ರೂಟ್ 100*, ಇಯಾನ್ ಮಾರ್ಗನ್ 88*, ಶಾರ್ದೂಲ್ ಠಾಕೂರ್ 51/1)

ಪಂದ್ಯ ಶ್ರೇಷ್ಠ: ಆದಿಲ್ ರಶೀದ್

ಸರಣಿ ಶ್ರೇಷ್ಠ: ಜೋ ರೂಟ್

Comments are closed.