ಕ್ರೀಡೆ

ಭಾರತದ ಎದುರು ಸೋತರೂ ಸಂಭ್ರಮಿಸಿದ ಇಂಗ್ಲೆಂಡ್ ಆಟಗಾರರು ! ಕಾರಣವೂ ಇದೆ….

Pinterest LinkedIn Tumblr

ಮ್ಯಾಂಚೆಸ್ಟರ್: ಸಹಜವಾಗಿಯೇ ಕ್ರೀಡೆಯಲ್ಲಿ ಪಂದ್ಯವೊಂದನ್ನು ಸೋತಾಗ ನಿರಾಸೆ ಮಡುಗಟ್ಟುತ್ತದೆ. ಆದರೆ ಪ್ರವಾಸಿ ಭಾರತ ವಿರುದ್ಧ ಸಾಗುತ್ತಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಸೋತರೂ ಇಂಗ್ಲೆಂಡ್ ಆಟಗಾರರಿಗೆ ಬೇಸರವಾಗಲಿಲ್ಲ.

ಕಾರಣ ಏನು ಗೊತ್ತೇ? ಹೌದು, ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ರಷ್ಯಾದಲ್ಲಿ ಸಾಗುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್ 2018 ಟೂರ್ನಮೆಂಟ್‌ನಲ್ಲಿ ಇಂಗ್ಲೆಂಡ್ ತಂಡವು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ಮಂಗಳವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕೊಲಂಬಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳ ಅಂತರದ ರೋಚಕ ಗೆಲುವು ದಾಖಲಿಸಿರುವ ಇಂಗ್ಲೆಂಡ್ ಅಂತಿಮ ಎಂಟರ ಘಟ್ಟವನ್ನು ಪ್ರವೇಶಿಸಿತು.

ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಬಳಿಕ ಫುಟ್ಬಾಲ್ ವೀಕ್ಷಣೆಯಲ್ಲಿ ತಲ್ಲೀನರಾದ ಆಂಗ್ಲ ಆಟಗಾರರು, ಅತ್ತ ರಷ್ಯಾದಲ್ಲಿ ಇಂಗ್ಲೆಂಡ್ ಗೆಲುವು ದಾಖಲಿಸುತ್ತಿರುವಂತೆಯೇ ಕ್ರಿಕೆಟ್ ಸೋಲಿನ ಕಹಿ ನೆನಪನ್ನು ಮರೆತು ಸಂಭ್ರಮಾಚರಣೆ ಮಾಡಿಕೊಂಡರು.

ಅಂದ ಹಾಗೆ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಭಾರತ, ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. 24 ರನ್‌ಗಳಿಗೆ ಐದು ವಿಕೆಟುಗಳನ್ನು ಕಬಳಿಸಿದ ಕುಲ್‌ದೀಪ್ ಯಾದವ್ ಹಾಗೂ ಅಜೇಯ ಶತಕ ಬಾರಿಸಿದ ಕೆಎಲ್ ರಾಹುಲ್ (101*) ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

Comments are closed.