ಕ್ರೀಡೆ

ರಾಜಸ್ಥಾನ ವಿರುದ್ಧ ಗೆಲುವಿನ ಕೇಕೆ ಹಾಕಿದ ಕೆಕೆಆರ್ ಕ್ವಾಲಿಫೈಯರ್ ಹಂತಕ್ಕೆ ಸಜ್ಜು !

Pinterest LinkedIn Tumblr

ಕೋಲ್ಕತ್ತ: ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಕೋಲ್ಕತ್ತ ನೈಟ್‌ ರೈಡರ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕ್ವಾಲಿಫೈಯರ್ ಹಂತದ ಹಣಾಹಣಿಗೆ ಸಜ್ಜಾಯಿತು.

ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಲಿಮಿನೇಟರ್‌ ಸ್ಪರ್ಧೆಯಲ್ಲಿ ಕೋಲ್ಕತ್ತ ತಂಡ 25 ರನ್‌ಗಳಿಂದ ಗೆದ್ದಿತು. ಇದೇ 25ರಂದು ಇದೇ ಅಂಗಣದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಈ ತಂಡ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಆಡಲು ಅರ್ಹತೆ ಗಳಿಸಲಿದೆ.

ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತ್ತಾ 20 ಓವರ್ ಗಳಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತ್ತು. ತಂಡದ ಪರವಾಗಿ ದಿನೇಶ್ ಕಾರ್ತಿಕ್ (52), ಆಂಡ್ರೆ ರಸೆಲ್ (49*) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ರಾಜಸ್ಥಾನ ಪರವಾಗಿ ಕೆ. ಗೌತಮ್, ಜೆ. ಅರ್ಚರ್, ಬೆನ್ ಲಾಫ್ಲಿನ್ ತಲಾ 2 ವಿಕೆಟ್ ಪಡೆದರೆ ಎಸ್. ಗೋಪಾಲ್ ಒಂದು ವಿಕೆಟ್ ಕಿತ್ತರು.

ಇನ್ನು ಕೋಲ್ಕತ್ತ ನೀಡಿದ್ದ 170ರನ್ ಗುರಿ ಬೆನ್ನತ್ತಿದ ರಾಜಸ್ಥಾನ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿಕೊಳ್ಳುವಷ್ಟು ಮಾತ್ರವೇ ಯಶಸ್ವಿಯಾಗಿತ್ತು.

ಕಾರ್ತಿಕ್‌, ರಸೆಲ್‌ ಆಟದ ಬಲ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ನೈಟ್ ರೈಡರ್ಸ್‌ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಪತನದ ಹಾದಿ ಹಿಡಿದಿತ್ತು. ಈ ಸಂದರ್ಭದಲ್ಲಿ ಜೊತೆಗೂಡಿದ ನಾಯಕ ದಿನೇಶ್ ಕಾರ್ತಿಕ್ (52; 38 ಎ, 2 ಸಿ, 4 ಬೌಂ) ಮತ್ತು ಏಳನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್‌ (49; 25 ಎ, 5 ಸಿ, 3 ಬೌಂ) ತಂಡಕ್ಕೆ ಬಲ ತುಂಬಿದರು.

51 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕಾರ್ತಿಕ್‌ ಮತ್ತು ಶುಭಮನ್‌ ಗಿಲ್ 55 ರನ್ ಸೇರಿಸಿದರು. ಗಿಲ್ ಔಟಾದ ನಂತರ ರಸೆಲ್ ಕೂಡ ನಾಯಕನಿಗೆ ಉತ್ತಮ ಸಹಕಾರ ನೀಡಿದರು. 18ನೇ ಓವರ್‌ನಲ್ಲಿ ಕಾರ್ತಿಕ್ ಮರಳಿದ ನಂತರವೂ ರಸೆಲ್‌ ಮಿಂಚಿನ ಆಟ ಮುಂದುವರಿಸಿದರು.

ಕನ್ನಡಿಗ ಸ್ಪಿನ್ ಜೋಡಿಯ ಮೋಡಿ: ಕರ್ನಾಟಕದ ಜೋಡಿಯಾದ ಆಫ್‌ಸ್ಪಿನ್ನರ್‌ ಕೃಷ್ಣಪ್ಪ ಗೌತಮ್ ಮತ್ತು ಲೆಗ್ ಸ್ಪಿನ್ನರ್‌ ಶ್ರೇಯಸ್ ಗೋಪಾಲ್‌ ಅವರ ದಾಳಿಗೆ ಕೋಲ್ಕತ್ತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಲುಗಿದರು.

ಆರಂಭಿಕ ಬ್ಯಾಟ್ಸ್‌ಮನ್‌ ಸುನಿಲ್ ನಾರಾಯಣ್‌ ಅವರು ಗೌತಮ್‌ಗೆ ವಿಕೆಟ್ ಒಪ್ಪಿಸಿದರೆ ಅವರ ಜೋಡಿ ಕ್ರಿಸ್ ಲಿನ್‌ ಅವರು ಶ್ರೇಯಸ್‌ ಎಸೆತದಲ್ಲಿ ಔಟಾದರು. ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ಗೌತಮ್‌ ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್ ಔಟ್ ಮಾಡಿದರು.

ರಾಜಸ್ಥಾನದ ಸಂಜು ಸ್ಯಾಮ್ಸನ್ ಸಿಡಿಸಿದ ಅರ್ಧ ಶತಕ ಸಹ ಅವರ ನೆರವಿಗೆ ಬರಲಿಲ್ಲ. ಅಜಿಂಕ್ಯ ರೆಹಾನೆ (46), ರಾಹುಲ್ ತ್ರಿಪಾಠಿ(20) ರನ್ ಗಳಿಸಿ ಔಟಾಗಿದ್ದರು.

ಕೆಕೆಆರ್ ಪರವಾಗಿ ಪಿಯೂಶ್ ಚಾವ್ಲಾ ಎರಡು ವಿಕೆಟ್ ಪಡೆದರೆ ಪ್ರಶಾಂತ್ ಕಿಷ್ಣ, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನು ರಾಜಸ್ಥಾನ ಈ ಸೋಲಿನೊಡನೆ ಪ್ರಸಕ್ತ ಐಪಿಎಲ್ ಸರಣಿಯಿಂದ ಹೊರ ಬಿದ್ದಿದೆ.

ಮಂಗಳವಾರ ನಡೆದಿದ್ದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಫೈನಲ್ಸ್ ಪ್ರವೇಶಿಸಿದ್ದರೆ ಸೋತ ತಂಡ ಹೈದರಾಬಾದ್ ಫೈನಲ್‌ಗೆ ತಲುಪಲು ಎರಡನೇ ಅವಕಾಶ ಪಡೆದಿದೆ.

Comments are closed.