ಕ್ರೀಡೆ

ಮುಗ್ಗರಿಸಿದ ಆರ್‌ಸಿಬಿ; ಹೈದರಾಬಾದ್ ತಂಡಕ್ಕೆ 5 ರನ್ ಗಳ ಜಯ: ಕಮರಿದ ಪ್ಲೇ-ಆಫ್ ಕನಸು

Pinterest LinkedIn Tumblr

ಹೈದರಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಚಾಂಪಿಯನ್‌ಶಿಪ್‌ನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ರನ್‌ಗಳ ಅಂತರದ ಸೋಲಿಗೊಳಗಾಗಿದೆ. ಇದರೊಂದಿಗೆ ಪ್ಲೇ-ಆಫ್ ಕನಸು ಬಹುತೇಕ ಕಮರಿದೆ.

10 ಪಂದ್ಯಗಳಲ್ಲಿ ಎಂಟು ಗೆಲುವಿನೊಂದಿಗೆ 16 ಅಂಕಗಳನ್ನು ಸಂಪಾದಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಆರ್‌ಸಿಬಿ ಅಷ್ಟೇ ಪಂದ್ಯಗಳಲ್ಲಿ ಕೇವಲ 6 ಅಂಕ ಮಾತ್ರ ಸಂಪಾದಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಮುಂದುವರಿದಿದೆ.

ಇದೀಗ ಪ್ಲೇ-ಆಫ್ ತಲುಪಲು ಮುಂದಿನೆಲ್ಲ ಪಂದ್ಯಗಳನ್ನು ಜಯಿಸುವುದರ ಜತೆಗೆ ಅದೃಷ್ಟದ ಸಾಥ್ ನೀಡಬೇಕಿದೆ. ಅಂದರೆ ಇತರ ಪಂದ್ಯಗಳಲ್ಲಿ ತಮ್ಮ ಪರ ಫಲಿತಾಂಶಕ್ಕಾಗಿ ಕಾಯಬೇಕಿದೆ.

ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್ ಗಳಿಗೂ ಮುನ್ನವೇ ಹೈದರಾಬಾದ್ ತಂಡವನ್ನು 146 ರನ್ ಗಳಿಗೆ ಆಲ್ ಔಟ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಬ್ಯಾಟಿಂಗ್ ನಲ್ಲಿಯೂ ಆರಂಭಿಕ ಹಂತದಿಂದಲೂ ಆರ್ ಸಿಬಿ ಗೆಲುವಿನ ವಿಶ್ವಾಸ ಮೂಡಿಸಿತ್ತು. ಆದರೆ ತಂಡದ ನಾಯಕ ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 39 ರನ್ ಗಳಿಸಿ ಔಟ್ ಆಗುತ್ತಿದ್ದಂತೆಯೇ ಆರ್ ಸಿಬಿ ಪಂದ್ಯದ ಮೇಲಿನ ಹಿಡಿತ ಕಳೆದುಕೊಂಡಿತು.

ಆದರೂ ಕೊನೆ ಕ್ಷಣದವರೆಗೂ ಕಾಲಿನ್ ಡೆ ಗ್ರಾಂಡ್ಹೋಮ್ (29 ಎಸೆತಗಳಲ್ಲಿ 33 ರನ್) ಹಾಗೂ ಮನ್ ದೀಪ್ ಸಿಂಗ್( 23 ಎಸೆತಗಳಲ್ಲಿ 21 ರನ್) ಹೈದರಾಬಾದ್ ತಂಡಕ್ಕೆ ಉತ್ತಮ ಪೈಪೋಟಿ ನೀಡಿದರು. ಕೊನೆಯ ಎಸೆತದಲ್ಲಿಯೂ 6 ರನ್ ಗಳಿಸುವ ಮೂಲಕ ಆರ್ ಸಿಬಿಗೆ ಪಂದ್ಯ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಕೊನೆಯ ಎಸೆತದಲ್ಲಿ ಕಾಲಿನ್ ಡೆ ಗ್ರಾಂಡ್ಹೋಮ್ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸುವ ಮೂಲಕ ಆರ್ ಸಿಬಿ ಹೈದರಾಬಾದ್ ತಂಡದ ವಿರುದ್ಧ 5 ರನ್ ಗಳ ಸೋಲು ಕಂಡಿತು.

Comments are closed.