ಕ್ರೀಡೆ

ಸಂಪೂರ್ಣ ವೇತನ ಫ್ರಾಂಚೈಸಿಗೆ ಬಿಟ್ಟುಕೊಟ್ಟ ಗಂಭೀರ್

Pinterest LinkedIn Tumblr


ಕೋಲ್ಕೊತಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ನಾಯಕತ್ವವನ್ನು ಬಿಟ್ಟುಕೊಟ್ಟಿರುವ ಗೌತಮ್ ಗಂಭೀರ್, ಇದೀಗ ಪ್ರಸಕ್ತ ಸಾಲಿನಲ್ಲಿ ವೇತನ ಪಡೆಯದಿರಲು ನಿರ್ಧರಿಸಿದ್ದಾರೆ.

ಐಪಿಎಲ್ 2018ನೇ ಸಾಲಿಗಾಗಿ ನಡೆದ ಹರಾಜಿನಲ್ಲಿ ಬರೋಬ್ಬರಿ 2.8 ಕೋಟಿ ರೂ.ಗಳನ್ನು ನೀಡಿ ಗಂಭೀರ್ ಅವರನ್ನು ಡೆಲ್ಲಿ ಫ್ರಾಂಚೈಸಿ ಖರೀದಿಸಿತ್ತು.

ಆದರೆ ತಂಡದ ಕೆಟ್ಟ ಪ್ರದರ್ಶನದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಗಂಭೀರ್, ನಾಯಕತ್ವ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ.

ಐಪಿಎಲ್ 2018ನೇ ಆವೃತ್ತಿ ಜಾರಿಯಲ್ಲಿರುವಂತೆಯೇ ಆಡಿರುವ ಆರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ದಾಖಲಿಸಿರುವ ಡೆಲ್ಲಿ ಕೇವಲ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಂದುವರಿಯುತ್ತಿದೆ.

ಅತ್ತ ಬಲ್ಲ ಮೂಲಗಳ ಪ್ರಕಾರ ಓರ್ವ ಆಟಗಾರನಾಗಿ ಮಾತ್ರ ಮುಂದುವರಿಯಲು ಬಯಸಿರುವ ಗಂಭೀರ್, ವೇತನ ಪಡೆಯದಿರಲು ನಿರ್ಧರಿಸಿದ್ದಾರೆ. ಬಹುಶ: ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಇಂತಹದೊಂದು ದೃಷ್ಟಾಂತ ಕಂಡುಬಂದಿದೆ.

ಅಂತೆಯೇ ಐಪಿಎಲ್‌ನಲ್ಲಿ ತಮ್ಮ ಭವಿಷ್ಯದ ಕುರಿತಂತೆ ನಿರ್ಧಾರವನ್ನು ಈ ಬಾರಿಯ ಐಪಿಎಲ್ ಬಳಿಕ ತೆಗೆದುಕೊಳ್ಳಲಿದ್ದಾರೆ.

36ರ ಹರೆಯದ ಗಂಭೀರ್ ಇದುವರೆಗ ಆಡಿರುವ ಐದು ಇನ್ನಿಂಗ್ಸ್‌ಗಳಲ್ಲಿ 85 ರನ್‌ಗಳನ್ನಷ್ಟೇ ಗಳಿಸಿದ್ದರು. ಈ ಪೈಕಿ ಮೊದಲ ಪಂದ್ಯದಲ್ಲಿ ಅರ್ಧಶತಕವನ್ನು (55) ಬಾರಿಸಿದ್ದರೆ ತದಾ ಬಳಿಕ ಸತತ ವೈಫಲ್ಯವನ್ನು ಅನುಭವಿಸಿದ್ದರು.

Comments are closed.