ಕ್ರೀಡೆ

ಮೊದಲು ಭಾರತವನ್ನು ಗೌರವಿಸಿ…ಬಳಿಕ ಕ್ರಿಕೆಟ್ ಆಡುವ ಮಾತು: ಪಾಕ್ ಗೆ ಬಿಸಿಸಿಐ ಖಡಕ್ ವಾರ್ನಿಂಗ್

Pinterest LinkedIn Tumblr

ಕೋಲ್ಕತಾ: ಭಾರತದೊಂದಿಗೆ ಕ್ರಿಕೆಟ್ ಆಡುವ ಮೊದಲು ಭಾರತ ಮತ್ತು ಭಾರತೀಯ ಕ್ರಿಕೆಟಿಗರನ್ನು ಗೌರವಿಸಿ, ಆ ಬಳಿಕವಷ್ಟೇ ಕ್ರಿಕೆಟ್ ವಿಚಾರ ಎಂದು ಪಾಕಿಸ್ತಾನಕ್ಕೆ ಬಿಸಿಸಿಐ ಖಡಕ್ ವಾರ್ನಿಂಗ್ ನೀಡಿದೆ.

ಕೋಲ್ಕತಾದಲ್ಲಿ ನಡೆಯುತ್ತಿರುವ ಐಸಿಸಿ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಬಿಸಿಸಿಐ, ಪಿಸಿಬಿ ಸೇರಿದಂತೆ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು, ಈ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಪ್ರತಿನಿಧಿಯಾಗಿ ಆಗಮಿಸಿರುವ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಭಾರತದೊಂದಿಗೆ ಮತ್ತೆ ದ್ವಿಪಕ್ಷೀಯ ಕ್ರಿಕೆಟ್ ಮುಂದುವರೆಸುವ ಪ್ರಸ್ತಾಪ ಮುಂದಿಟ್ಟರು.

‘ಪಾಕಿಸ್ತಾನ ಮೊದಲಿನಿಂದಲೂ ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಲು ಉತ್ಸುಕತೆ ತೋರುತ್ತಿದೆ. ಪ್ರಸ್ತುತ ಸ್ಥಗಿತವಾಗಿರುವ ದ್ವಿಪಕ್ಷೀಯ ಕ್ರಿಕೆಟ್ ಅನ್ನು ಮತ್ತೆ ಮುಂದುವರೆಸುವ ಮೂಲಕ ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸಬಹುದಾಗಿದೆ. ಇದಕ್ಕಾಗಿ ಯುಎಇ ಸೇರಿದಂತೆ ಭಾರತ ಸೂಚಿಸುವ ಯಾವುದೇ ತಟಸ್ಥ ರಾಷ್ಟ್ರದಲ್ಲಿ ಕ್ರಿಕೆಟ್ ಆಯೋಜಿಸಲು ತಾನು ಸಿದ್ಧ’ ಎಂದು ಹೇಳಿದ್ದಾರೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಸಿಸಿಐ, ದ್ವಿಪಕ್ಷೀ ಯ ಸರಣಿ ಆಯೋಜನೆ ಕುರಿತು ಮಾತನಾಡುವ ಮೊದಲು ಪಿಸಿಬಿ ತನ್ನ ಆಟಗಾರರಿಗೆ ಭಾರತ ಮತ್ತು ಭಾರತೀಯ ಕ್ರಿಕೆಟಿಗರನ್ನು ಗೌರವಿಸುವುದನ್ನು ಕಲಿಸಬೇಕು. ಆ ಬಳಿಕವಷ್ಟೇ ಕ್ರಿಕೆಟ್ ನ ಮಾತು ಎಂದು ಹೇಳಿದೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕ್ರೀಡಾ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐನ ಅಧಿಕಾರಿಯೊಬ್ಬರು, ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧ ಕೇವಲ ಬಿಸಿಸಿಐ ಮತ್ತು ಪಿಸಿಬಿ ನಡುವಿನ ವಿಚಾರವಲ್ಲ. ಇದಕ್ಕೆ ಭಾರತ ಸರ್ಕಾರದ ಅನುಮತಿ ಕೂಡ ಅಗತ್ಯ. ಪ್ರಮುಖವಾಗಿ ಪಾಕಿಸ್ತಾನಿ ಆಟಗಾರರಿಗೆ ಭಾರತ ಮತ್ತು ಭಾರತೀಯ ಕ್ರಿಕೆಟಿಗರೆಂದರೆ ಗೌರವವಿಲ್ಲ. ಕನಿಷ್ಟ ಪಕ್ಷ ಪಿಸಿಬಿ ಕೂಡ ಈ ಬಗ್ಗೆ ತನ್ನ ಆಟಗಾರರಲ್ಲಿ ವಿಚಾರ ಪ್ರಸ್ತಾಪ ಮಾಡಿ ಎಚ್ಚರಿಕೆ ನೀಡಿಲ್ಲ. ಹೀಗಿರುವಾಗ ಯಾವ ಕಾರಣಕ್ಕಾಗಿ ದ್ವಿಪಕ್ಷೀಯ ಕ್ರಿಕೆಟ್ ಆರಂಭಿಸುವ ಕುರಿತು ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ.

ಇನ್ನು ಬಿಸಿಸಿಐನ ಈ ಕಠಿಣ ನಿಲುವಿಗೆ ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ಕಾರಣ ಎಂದು ಹೇಳಲಾಗುತ್ತಿದ್ದು, ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ಗಡಿ ಅಠಾರಿ-ವಾಘಾಗಡಿಗೆ ತೆರಳಿದ್ದ ಅಲಿ ತಮ್ಮ ಆಸನದಿಂದ ಎದ್ದು ಬಂದು ಯೋಧರನ್ನು ಅನುಕರಿಸಿ ತಮಾಷೆ ಮಾಡಿದ್ದರು. ಬಳಿಕ ಸೊಂಟಕ್ಕೆ ಕೈಯಿಟ್ಟು ಮಂಗನಾಟ ಮಾಡಿ, ಮುಷ್ಠಿ ಬಿಗಿದು, ತೊಡೆ ತಟ್ಟಿ ದರ್ಪ ತೋರಿಸಿ ಭಾರತಕ್ಕೆ ಅಪಮಾನ ಮಾಡಿದ್ದರು. ಹಸನ್ ಅಲಿ ಈ ಚೇಷ್ಟೆ ವಿಡಿಯೊ ಸಾಮಾಜಿಕ ತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಅಲಿ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿತ್ತು.

Comments are closed.