ಕ್ರೀಡೆ

ಐದು ಹೊಸ ಬದಲಾವಣೆಗಳೊಂದಿಗೆ ಈ ಬಾರಿಯ ಐಪಿಎಲ್’ಗೆ ಕ್ಷಣಗಣನೆ ಆರಂಭ !

Pinterest LinkedIn Tumblr

ನವದೆಹಲಿ: ಪ್ರಸಕ್ತ ಸಾಲಿನ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಶನಿವಾರ ಸಂಜೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚುಟುಕು ಕ್ರಿಕೆಟ್ ಟೂರ್ನಿ ವಿದ್ಯುಕ್ತ ಚಾಲನೆ ಪಡೆಯಲಿದೆ.

ಕಳೆದ 10 ಸೀಸನ್ ಗಳ ಸೂಪರ್ ಹಿಟ್ ಆಗಿದ್ದು, ಬಿಸಿಸಿಐ ಖಜಾನೆಗೆ ಕೋಟಿ ಕೋಟಿ ಹಣ ಬಂದು ತಲುಪಿದೆ. ಅಂತೆಯೇ ಪ್ರೇಕ್ಷಕರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದು, ಕ್ರಿಕೆಟಿಗರ ಜೇಬಿಗೆ ಕೋಟಿ ಕೋಟಿ ಹಣ ನೀಡಿದೆ. ಅಂತೆಯೇ ಕಳೆದ ಸೀಸನ್ ಗಳಂತೆಯೇ ಈ ಬಾರಿಯ ಸೀಸನ್ ಕೂಡ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ. ಇನ್ನು ಇತ್ತೀಚೆಗೆ ಬಿಸಿಸಿಐ ತೆಗೆದುಕೊಂಡಿರುವ ಕೆಲ ನಿರ್ಣಯಗಳು ಈ ಬಾರಿಯ ಐಪಿಎಲ್ ಗೆ ಮತ್ತಷ್ಟು ರೋಚಕತೆ ತಂದುಕೊಡುವುದರಲ್ಲಿ ಎರಡು ಮಾತಿಲ್ಲ.

ಪ್ರಸಕ್ತ ಸಾಲಿನ ಐಪಿಎಲ್ ಗಾಗಿ ಬಿಸಿಸಿಐ ಕೈಗೊಂಡಿರುವ ಆ ಐದು ಪ್ರಮುಖ ನಿರ್ಣಯಗಳು ಮತ್ತು ಹೊಸ ನಿಯಮಗಳು ಇಂತಿವೆ.

1.ಐಪಿಎಲ್ ಗೂ ಬಂತು ಡಿಆರ್ ಎಸ್
ಈ ಹಿಂದೆ ಟಿ20 ವಿಶ್ವಕಪ್ ಮೂಲಕ ಚಾಲ್ತಿಗೆ ಬಂದ ಡಿಆರ್ ಎಸ್ ಅಂದರೆ ಡಿಸಿಷನ್ ರಿವ್ಯೂ ಸಿಸ್ಟಮ್ ಇದೀಗ ಐಪಿಎಲ್ ಗೂ ಕಾಲಿಟ್ಟಿದ್ದು, ಡಿಆರ್ ಎಸ್ ಅಳವಡಿಸಿಕೊಳ್ಳಬೇಕು ಎಂಬ ಐಸಿಸಿ ಮನವಿಗೆ ಇದೇ ಮೊದಲ ಬಾರಿಗೆ ಬಿಸಿಸಿಐ ಒಪ್ಪಿಗೆ ನೀಡಿದೆ. ಕಳೆದ ಮೂರು ಸೀಸನ್ ಗಳ ಹಿಂದೆಯೇ ಐಸಿಸಿ ಡಿಆರ್ ಎಸ್ ನ್ನು ಜಾರಿಗೆ ತಂದಿತ್ತಾದರೂ, ಐಪಿಎಲ್ ಗೆ ಅಳವಡಿಸಿಕೊಳ್ಳಲು ಬಿಸಿಸಿಐ ಹಿಂದೇಟು ಹಾಕಿತ್ತು. ಆದರೆ ಪ್ರಸಕ್ತ ವರ್ಷದಿಂದ ಐಪಿಎಲ್ ನಲ್ಲೂ ಡಿಆರ್ ಎಸ್ ಅಳವಡಿಸಲಾಗಿದ್ದು, ಇದು ಪಂದ್ಯದ ರೋಚಕತೆ ಹೆಚ್ಚಿಸಲು ನೆರವಾಗಲಿದೆ.

2.ಟೂರ್ನಿ ಮಧ್ಯೆಯೇ ಆಟಗಾರರ ಬದಲಾವಣೆ
ಐಪಿಎಲ್ ಸೀಸನ್ 11 ಪ್ರಮುಖ ನಿರ್ಣಯಗಳಲ್ಲಿ ಇದು ಪ್ರಮುಖ. ಅದೇನೆಂದರೆ ಟೂರ್ನಿ ಚಾಲ್ತಿಯಲ್ಲಿರುವಂತೆಯೇ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರನ್ನು ಬೇರೊಂದು ತಂಡದ ಆಟಗಾರರೊಂದಿಗೆ ಬದಲಿಸಿಕೊಳ್ಳಬಹುದು. ಇಷ್ಟು ದಿನ ಈ ಪದ್ಧತಿ ಫುಟ್ ಬಾಲ್ ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲೂ ಈ ನಿಯಮ ಅಳವಡಿಸಲಾಗಿದೆ. ಇದರಿಂದ ಪ್ರಾಂಚೈಸಿಗಳಿಗೆ ಅನುಕೂಲವಾಗಲಿದೆ. ಆದರೆ ಇದಕ್ಕೆ ಕೆಲ ಷರತ್ತುಗಳಿದ್ದು, ಅದೇನೆಂದರೆ ಈ ಹಿಂದೆ ಹರಾಜಿನಲ್ಲಿ ಯಾವುದೇ ತಂಡ ಖರೀದಿ ಮಾಡದ ಆಟಗಾರನನ್ನು ಫ್ರಾಂಚೈಸಿಗಳು ಟೂರ್ನಿ ಮಧ್ಯೆ ಖರೀದಿ ಮಾಡಬಹುದು. ಮತ್ತೊಂದು ನಿಯಮವೇನೆಂದರೆ ಟೂರ್ನಿಯಲ್ಲಿ 2 ಪಂದ್ಯಕ್ಕಿಂತ ಹೆಚ್ಚು ಪಂದ್ಯಗಳನ್ನಾಡದೇ ಉಳಿದಿರುವ ಆಟಗಾರರನ್ನೂ ಕೂಡ ಬೇರೆ ತಂಡದ ಫ್ರಾಂಚೈಸಿಗಳು ಖರೀದಿ ಮಾಡಬಹುದು.

3.ನೇರ ಪ್ರಸಾರ ವಾಹಿನಿ ಬದಲಾವಣೆ
ಇನ್ನು ಈ ಹಿಂದೆ ಐಪಿಎಲ್ ಟೂರ್ನಿಯನ್ನು ಸೋನಿ ಟಿವಿ ಪ್ರಸಾರ ಮಾಡುತ್ತಿತ್ತು. ಆದರೆ ಸೋನಿ ಟಿವಿಯ ಒಪ್ಪಂದ ಮುಕ್ತಾಯವಾದ ಹಿನ್ನಲೆಯಲ್ಲಿ ಮತ್ತೆ ಹರಾಜಿನ ಮೂಲಕ ನೇರ ಪ್ರಸಾರದ ಹಕ್ಕನ್ನು ಬಿಸಿಸಿಐ ಮಾರಾಟ ಮಾಡಿದೆ. ಅದರಂತೆ ಸ್ಟಾರ್ ಇಂಡಿಯಾ ಸಂಸ್ಥೆ ಬರೊಬ್ಬರಿ 16,347.50 ಕೋಟಿ ರೂಗಳಿಗೆ ನೇರ ಪ್ರಸಾರದ ಹಕ್ಕನ್ನು ಖರೀದಿ ಮಾಡಿದ್ದು, ಐಪಿಎಲ್ ನೇರ ಪ್ರಸಾರ ಇನ್ನು ಮುಂದಿನ ಐದು ವರ್ಷಗಳ ಕಾಲ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಪ್ರಾದೇಶಿಕ ಭಾಷೆಗಳಲ್ಲಿ ಕ್ರೀಡಾ ವಾಹಿನಿಗಳನ್ನು ಆರಂಭಿಸಿರುವ ಸ್ಟಾರ್ ಸ್ಫೋರ್ಟ್ಸ್ ಪ್ರಾದೇಶಿಕ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಪ್ರಾದೇಶಿಕ ಕ್ರೀಡಾ ವಾಹಿನಿಗಳಲ್ಲೂ ಐಪಿಎಲ್ ನೇರ ಪ್ರಸಾರ ಮಾಡಲು ಚಿಂತನೆ ನಡೆಸಿದೆ. ಈ ಹಿಂದೆ ಪ್ರೋಕಬ್ಬಡ್ಡಿ ಇದೇ ತಂತ್ರಗಾರಿಕೆಯಿಂದ ಯಶಸ್ವಿಯಾಗಿದ್ದನ್ನು ನಾವು ಸ್ಮರಿಸಬಹುದು.

4.ದೂರದರ್ಶನದಲ್ಲೂ ಐಪಿಎಲ್ ಲಭ್ಯ
ಮತ್ತೊಂದು ಪ್ರಮುಖ ನಿರ್ಣಯವೆಂದರೆ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯಗಳು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಹೌದು.. ದೇಶದ ಅತೀ ದೊಡ್ಡ ವಾಹಿನಿ ದೂರದರ್ಶನದಲ್ಲಿ ಐಪಿಎಲ್ ಸೀಸನ್ 11 ಪಂದ್ಯಗಳು ನೇರ ಪ್ರಸಾರವಾಗಲಿದೆ. ಈ ಸಂಬಂಧ ಸ್ಟಾರ್ ಇಂಡಿಯಾ ಮತ್ತು ದೂರದರ್ಶನ ಒಪ್ಪಂದ ಮಾಡಿಕೊಂಡಿದ್ದು, ಬಂದ ಲಾಭದಲ್ಲಿ 50:50 ಹಂಚಿಕೆ ಮಾಡಿಕೊಳ್ವುವ ಕುರಿತು ಒಪ್ಪಂದ ಮಾಡಿಕೊಂಡಿದ್ದಾರೆ. ಆ ಮೂಲಕ ಕೇಬಲ್ ಟಿವಿಗಳು ಲಭ್ಯವಿಲ್ಲದೇ ದೇಶದ ಕುಗ್ರಾಮಗಳಲ್ಲೂ ಐಪಿಎಲ್ ಸೀಸನ್ 11 ಅನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ದೇಶದ ಸುಮಾರು 30 ಮಿಲಿಯನ್ ಜನ ಇಂದಿಗೂ ಮನರಂಜನೆಗಾಗಿ ದೂರದರ್ಶನವನ್ನೇ ನೆಚ್ಚಿಕೊಂಡಿದ್ದಾರೆ. ಈ 30 ಮಿಲಿಯನ್ ಜನರನ್ನು ಗುರಿಯಾಗಿಸಿಕೊಂಡೇ ಸ್ಟಾರ್ ಇಂಡಿಯಾ ಸಂಸ್ಥೆ ದೂರದರ್ಶನದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.

5. ವಿಆರ್ (Virtual Reality) ಫಾರ್ಮಾಟ್ ನಲ್ಲಿ ಐಪಿಎಲ್
ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯಗಳ ನೇರ ಪ್ರಸಾರವನ್ನು ವಿಆರ್ (Virtual Reality) ಫಾರ್ಮಾಟ್ ನಲ್ಲಿ ನೀಡಲು ಸ್ಚಾರ್ ಇಂಡಿಯಾ ಸಂಸ್ಥೆ ನಿರ್ಧರಿಸಿದೆ. ಮೊಬೈಲ್ ಆ್ಯಪ್ ಗಳ ಮೂಲಕ ನೇರ ಪ್ರಸಾರ ವೀಕ್ಷಿಸುವ ಗ್ರಾಹಕರು ಹಾಟ್ ಸ್ಚಾರ್ ಮೂಲಕ ನೇರ ಪ್ರಸಾರ ವೀಕ್ಷಿಸಬಹುದು. ಅಲ್ಲದೆ ಮೊಬೈಲ್ ವಿಆರ್ ಫಾರ್ಮ್ಯಾಟ್ ಮೂಲಕ ವಿಆರ್ ಗ್ಲಾಸ್ ಗಳನ್ನು ಧರಿಸಿ ಪಂದ್ಯ ವೀಕ್ಷಿಸುವ ಮೂಲಕ ನೈಜತೆಯ ಅನುಭವ ಪಡೆಯಬಹುದು. ದೇಶದ ಸುಮಾರು 30 ಕೋಟಿ ಜನರು ಹಾಲಿ ಐಪಿಎಲ್ ಟೂರ್ನಿಯನ್ನು ಮೊಬೈಲ್ ನಲ್ಲಿ ವೀಕ್ಷಿಸಬಹುದು ಎಂದು ಸ್ಚಾರ್ ಇಂಡಿಯಾ ಅಂದಾಜಿಸಿದೆ.

ಒಟ್ಟಾರೆ ಈ ಬಾರಿ ಐಪಿಎಲ್ ಟೂರ್ನಿ ಈ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಲು ಬೇಕಾದ ಎಲ್ಲ ಸಿದ್ಧತೆಗಳನ್ನು ಸ್ಟಾರ್ ಇಂಡಿಯಾ ಸಂಸ್ಥೆ ಮಾಡಿಕೊಂಡಿದೆ.

Comments are closed.