ಕ್ರೀಡೆ

6032.5 ಕೋಟಿ ರೂ.ಗೆ ತಲುಪಿದ ಬಿಸಿಸಿಐ ಮಾಧ್ಯಮ ಹಕ್ಕು

Pinterest LinkedIn Tumblr


ಹೊಸದಿಲ್ಲಿ: ಭಾರತದಲ್ಲಿ 2018ರಿಂದ 2023ರವರೆಗೆ ಐದು ವರ್ಷಗಳ ಅವಧಿಯಲ್ಲಿ ನಡೆಯಲಿರುವ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳ ಜಾಗತಿಕ ಒಟ್ಟು ಮಾಧ್ಯಮ ಹಕ್ಕಿಗೆ ಇ-ಹರಾಜಿನ ಎರಡನೇ ದಿನದಲ್ಲಿ ಐತಿಹಾಸಿಕ ಬಿಡ್ ಸಲ್ಲಿಕೆಯಾಗಿದೆ.

ಮೊದಲ ದಿನದಲ್ಲಿ 4,442 ಕೋಟಿ ರೂಪಾಯಿಗಳಿಗೆ ಕೊನೆಗೊಂಡಿದ್ದ ಬಿಡ್, ಎರಡನೇ ದಿನದಲ್ಲಿ 6032.5 ಕೋಟಿ ರೂಪಾಯಿಗಳಿಗೆ ತಲುಪಿದೆ. ಇದೀಗ ಈ ಮೊತ್ತ 7000 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ.

ರಿಲಯನ್ಸ್ ಜಿಯೋ ಜತೆಗೆ ಸ್ಟಾರ್ ಹಾಗೂ ಸೋನಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಬಿಡ್ ಸಲ್ಲಿಸಿದೆ. 2012ರಲ್ಲಿ ಸ್ಟಾರ್‌ ನೆಟ್‌ವರ್ಕ್‌ ಸಲ್ಲಿಸಿದ್ದ ದಾಖಲೆಯ 3851 ಕೋಟಿ ರೂ.ಗಿಂತ ಈಗಿನ ಮೌಲ್ಯದಲ್ಲಿ ಶೇಕಡಾ 56ರಷ್ಟು ಭರ್ಜರಿ ನೆಗೆತ ಕಂಡುಬಂದಿದೆ.

ಇದೇ ಮೊದಲ ಬಾರಿಗೆ ನಡೆದ ಇ-ಹರಾಜನ್ನು ನಡೆಸಲಾಗುತ್ತಿದೆ. ಇದರಂತೆ ಪ್ರತಿ ಪ್ರಕಾರದ 102 ಅಂತರಾಷ್ಟ್ರೀಯ ಪಂದ್ಯಗಳಿಗೆ 59.16 ಕೋಟಿ ರೂ. ಮೌಲ್ಯ ದಾಖಲಾಗಿದೆ. ಇದು 2012-18ರ ಅವಧಿಯನ್ನು ಹೋಲಿಸಿದಾಗ 43 ಕೋಟಿ ರೂ.ಗಳಷ್ಟು ಹೆಚ್ಚಳಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಇದು ಭಾರತೀಯ ಕ್ರಿಕೆಟ್‌ನ ಶಕ್ತಿಯಾಗಿದೆ. ಯಾವುದೇ ಋಣಾತ್ಮಕತೆ, ಆಡಳಿತಾತ್ಮಕ ಅವ್ಯವಸ್ಥೆ ಮತ್ತು ದೊಡ್ಡ ವಿವಾದಗಳನ್ನು ಎದುರಿಸುವಂತಹ ಸಾಮರ್ಥ್ಯವನ್ನು ಹೊಂದಿದೆ. ಕೇವಲ ಒಂದು ಕ್ರೀಡೆಯಿಂದ ಮಾತ್ರ ಸರಿಯಾದ ಲಾಭವನ್ನು ನೀಡಲಿದೆ ಎಂಬುದನ್ನು ಸಂಭವನೀಯ ಬಿಡ್ಡರ್‌ಗಳು ತಿಳಿದುಕೊಂಡಿದ್ದಾರೆ. ಯಾರೊಬ್ಬರಿಗೂ ತಾವು ಉನ್ನತ ಬಿಡ್‌ ಸಲ್ಲಿಸಿದ್ದೇವೆ ಎಂಬುದು ತಿಳಿದಿಲ್ಲ. ಎಲ್ಲರೂ ರೇಸ್‌ನಲ್ಲಿದ್ದಾರೆ ಎಂದಿದ್ದಾರೆ.

ಗುರುವಾರ ವೇಳೆಗೆ ವಿಜೇತ ಬಿಡ್ಡರ್‌ಗಳ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯನ್ನು ಬಿಸಿಸಿಐ ಹೊಂದಿದೆ.

Comments are closed.