ದುಬೈ: ಯನೈಟೆಡ್ ಅರಬ್ ಎಮಿರೆಟ್ಸ್ ಅಜ್ಮನ್ ಆಲ್ ಸ್ಟಾರ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.
ಜನವರಿ 24 ರಂದು ಶಾರ್ಜಾ ವಾರಿಯರ್ಸ್ ಮತ್ತು ದುಬೈ ಸ್ಟಾರ್ಸ್ ನಡುವೆ ಟಿ 20 ಕ್ರಿಕೆಟ್ ಪಂದ್ಯ ನಡೆದಿತ್ತು. 136 ರನ್ ಗಳ ಗುರಿಯನ್ನು ಪಡೆದ ಶಾರ್ಜಾ ವಾರಿಯರ್ಸ್ 46 ರನ್ ಗಳಿಗೆ ಆಲೌಟ್ ಆಗಿತ್ತು.
ಕಡಿಮೆ ರನ್ ಗಳಿಗೆ ತಂಡ ಆಲೌಟ್ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಆದರೆ ಈ ಪಂದ್ಯದಲ್ಲಿ 5 ಮಂದಿ ರನೌಟ್ ಆಗಿದ್ದರೆ, ಮೂರು ಮಂದಿ ಸ್ಟಂಪ್ ಔಟ್ ಆಗಿದ್ದರು. ಕ್ರಿಕೆಟ್ ಗೊತ್ತಿಲ್ಲದವರಂತೆ ಓಡಿ ಸಿಲ್ಲಿ ಸಿಲ್ಲಿಯಾಗಿ ರನೌಟ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಯುಎಇ ಕ್ರಿಕೆಟ್ ಬೋರ್ಡ್ ಈ ಟೂರ್ನಿಯನ್ನೇ ಸ್ಥಗಿತಗೊಳಿಸಿದೆ. ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ ಈಗ ಈ ಪಂದ್ಯದಲ್ಲಿ ಭಾಗವಹಿಸಿದ್ದ ಆಟಗಾರರನ್ನು ತನಿಖೆ ನಡೆಸಲು ಮುಂದಾಗಿದೆ.
ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ ಈ ರೀತಿಯಾಗಿ ಟೂರ್ನಿಯೊಂದರಲ್ಲಿ ಆಟಗಾರರು ಔಟಾದ ಉದಾಹರಣೆಯೇ ಇಲ್ಲ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ.