ಕ್ರೀಡೆ

ವೈಟ್‌ವಾಶ್ ಮುಖಭಂಗ ತಪ್ಪಿಸಿತೇ ಟೀಮ್ ಇಂಡಿಯಾ?

Pinterest LinkedIn Tumblr


ಜೋಹಾನ್ಸ್‌ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ವಾಂಡರರ್ಸ್ ಮೈದಾನದಲ್ಲಿ ಬುಧವಾರದಿಂದ ಆರಂಭವಾಗಲಿದೆ.

ಇದರಂತೆ ಟೆಸ್ಟ್ ರ‍್ಯಾಂಕಿಂಗ್‌ನ ನಂ.1 ತಂಡವಾಗಿರುವ ಭಾರತ ವೈಟ್‌ವಾಶ್ ಮುಖಭಂಗವನ್ನು ತಪ್ಪಿಸುವುದೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಭಾರತ ತಂಡವು ಈಗಾಗಲೇ 0-2ರ ಅಂತರದಲ್ಲಿ ಸರಣಿ ಸೋಲಿಗೆ ಗುರಿಯಾಗಿದೆ. ಕೇಪ್‌ಟೌನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 72 ರನ್ ಅಂತರದ ಸೋಲಿಗೆ ಗುರಿಯಾದ ಭಾರತ ಸೆಂಚುರಿಯನ್‌ನಲ್ಲಿ 135 ರನ್‌ಗಳ ಅಂತರದ ಪರಾಭವಕ್ಕೊಳಗಾಗಿತ್ತು.

ಎರಡೂ ಪಂದ್ಯಗಳಲ್ಲೂ ಎದುರಾಳಿ ತಂಡದ 20 ವಿಕೆಟುಗಳನ್ನು ಪಡೆಯುವಲ್ಲಿ ಯಶಸ್ವಿಯಾದರೂ ಬ್ಯಾಟಿಂಗ್ ವೈಫಲ್ಯವು ಭಾರತಕ್ಕೆ ಹಿನ್ನಡೆಯನ್ನುಂಟು ಮಾಡಿತ್ತು. ಇದರೊಂದಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲುವಿನ ಕನಸು ನೂಚ್ಚು ನೂರಾಗಿದೆ.

ಅಸ್ಥಿರವಾದ ಓಪನಿಂಗ್ ಜತೆಗಾರಿಕೆ ಪ್ರಮುಖ ಹಿನ್ನಡೆಗೆ ಕಾರಣವಾಗಿದೆ. ಮುರಳಿ ವಿಜಯ್ ಜತೆ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಮತ್ತು ದ್ವಿತೀಯ ಪಂದ್ಯದಲ್ಲಿ ಕೆಎಲ್ ರಾಹುಲ್ ಪರೀಕ್ಷಿಸಿದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.

ಚೇತೇಶ್ವರ ಪೂಜಾರ ರನೌಟ್ ಬಲೆಗೆ ಸಿಲುಕಿರುವುದು ನಾಯಕ ವಿರಾಟ್ ಕೊಹ್ಲಿಗೆ ಸೂಕ್ತ ಬೆಂಬಲ ಸಿಗದೇ ಹೋಯಿತು. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಜಾಗಕ್ಕೆ ಆಯ್ಕೆಯಾಗಿರುವ ರೋಹಿತ್ ಶರ್ಮಾ ಅವರಿಂದಲೂ ಹೆಚ್ಚೇನು ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ಮತ್ತೆ ರಹಾನೆಗೆ ಮೊರೆ ಹೋಗಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಏಕೈಕ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜತೆಗೆ ವೇಗಿಗಳು ಮಾತ್ರ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದಾರೆ. ದ್ವಿತೀಯ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಹೊರಗಿರಿಸಲಾಗಿತ್ತಾದರೂ ಮತ್ತೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಸಹ ಗಾಯಗೊಂಡಿರುವುದು ಹಿನ್ನಡೆಗೆ ಕಾರಣವಾಗಿದೆ. ಇವರ ಜಾಗಕ್ಕೆ ಪಾರ್ಥಿವ್ ಪಟೇಲ್ ಆಯ್ಕೆಯಾಗಿದ್ದರೂ ಪ್ರಭಾವಿ ಎನಿಸಿಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ.

ಒಟ್ಟಿನಲ್ಲಿ ಬ್ಯಾಟಿಂಗ್ ಫಾರ್ಮ್ ಜತೆಗೆ ಕಳಪೆ ಫೀಲ್ಡಿಂಗ್ ಭಾರತಕ್ಕೆ ಮುಳುವಾಗಿತ್ತು. ಹಾಗಾಗಿ ವೈಟ್‌ವಾಶ್ ಮುಖಭಂಗವನ್ನು ತಪ್ಪಿಸಿಕೊಳ್ಳಲು ಈ ಎರಡೂ ವಿಭಾಗದಲ್ಲೂ ನಿಖರತೆ ಸಾಧಿಸುವ ಅವಶ್ಯಕತೆಯಿದೆ.

ತಂಡಗಳು ಇಂತಿದೆ:

India: Virat Kohli (c), Shikhar Dhawan, Murali Vijay, KL Rahul, Cheteshwar Pujara, Ajinkya Rahane, Rohit Sharma, Wriddhiman Saha (wk), Hardik Pandya, R Ashwin, Ravindra Jadeja, Bhuvneshwar Kumar, Ishant Sharma, Umesh Yadav, Mohammed Shami, Jasprit Bumrah, Parthiv Patel.

South Africa: Faf du Plessis (c), Deal Elgar, Aiden Markram, Hashim Amla, Temba Bavuma, Theunis de Bruyne, Quinton de Kock (wk), Keshav Maharaj, Morne Morkel, Chris Morris, Vernon Philander, Kagiso Rabada, Andile Phehlukwayo, Lungi Ngidi, Duanne Olivier.

Comments are closed.