ಕ್ರೀಡೆ

ಶ್ರೀಲಂಕಾ ಎದುರಿನ ಏಕದಿನ ಕ್ರಿಕೆಟ್‌: ಸರಣಿ ಗೆದ್ದ ರೋಹಿತ್ ಬಳಗ

Pinterest LinkedIn Tumblr

ವಿಶಾಖಪಟ್ಟಣ: ಸ್ಪಿನ್ನರ್‌ಗಳ ದಾಳಿಗೆ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಕಂಗೆಟ್ಟರೆ ಶಿಖರ್ ಧವನ್ ಅವರ ಸ್ಫೋಟಕ ಶತಕಕ್ಕೆ ಆ ತಂಡದ ಬೌಲರ್‌ಗಳು ಬೆಚ್ಚಿದರು. ಇದರ ಪರಿಣಾಮ ಭಾರತ ತಂಡ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗೆದ್ದಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2–1ರಲ್ಲಿ ತನ್ನದಾಗಿಸಿಕೊಂಡಿತು.

ಇಲ್ಲಿನ ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೊನೆಯ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಎದುರಾಳಿ ತಂಡವನ್ನು 215 ರನ್‌ಗಳಿಗೆ ಕೆಡವಿದ ಭಾರತ 32.1 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದು ಭಾರತದ ನಿರಂತರ ಎಂಟನೇ ಸರಣಿ ಜಯವಾಗಿದೆ.

ಸವಾಲಿನ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲಿ ಆಘಾತಕ್ಕೆ ಒಳಗಾಯಿತು. ಕಳೆದ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಗಳಿಸಿ ತಂಡವನ್ನು ಗೆಲ್ಲಿಸಿದ್ದ ನಾಯಕ ರೋಹಿತ್ ಶರ್ಮಾ ಕೇವಲ ಏಳು ರನ್‌ಗಳಿಗೆ ಔಟಾದರು. ಆದರೆ ನಂತರ ಜೊತೆಗೂಡಿದ ಶಿಖರ್ ಧವನ್‌ (ಔಟಾಗದೆ 100; 85ಎ, 2 ಸಿ, 13 ಬೌಂ) ಮತ್ತು ಶ್ರೇಯಸ್ ಅಯ್ಯರ್‌ (65; 63 ಎಸೆತ, 1 ಸಿ, 8 ಬೌಂ) 135 ರನ್‌ ಜೊತೆಯಾಟವಾಡಿದರು.

ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 15 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿತು. ಆದರೆ ಉಪುಲ್ ತರಂಗ (95; 82 ಎ, 3 ಸಿ, 12 ಬೌಂ) ಮತ್ತು ಸದೀರ ಸಮರವಿಕ್ರಮ (42, 57 ಎ, 5 ಬೌಂ) ಉತ್ತಮ ಜೊತೆಯಾಟದ ಮೂಲಕ ತಂಡವನ್ನು ರಕ್ಷಿಸಿದರು.

ತರಂಗ ಔಟಾದ ನಂತರ ಮೇಲುಗೈ ಸಾಧಿಸಿದ ಭಾರತದ ಸ್ಪಿನ್ನರ್‌ಗಳು ನಿರಂತರ ವಿಕೆಟ್ ಕಬಳಿಸಿ ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಹೀಗಾಗಿ ಲಂಕಾ 45ನೇ ಓವರ್‌ನಲ್ಲಿ ಆಲೌಟ್ ಆಯಿತು.

ಎರಡನೇ ವಿಕೆಟ್‌ಗೆ 121 ರನ್‌ ಜೊತೆಯಾಟವಾಡಿದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ತಂಡ ಉತ್ತಮ ಮೊತ್ತ ಸೇರಿಸುವ ಭರವಸೆ ಮೂಡಿಸಿದ್ದರು. ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದ ತರಂಗ ಶತಕದಿಂದ ವಂಚಿತರಾದರು. ಅವರನ್ನು ಮಹೇಂದ್ರ ಸಿಂಗ್ ದೋನಿ ಅಮೋಘ ಸ್ಟಂಪಿಂಗ್ ಮೂಲಕ ಔಟ್‌ ಮಾಡಿದರು. ಶತಕ ಗಳಿಸಲು ಆಗದಿದ್ದರೂ ಅವರು ಈ ಋತುವಿನಲ್ಲಿ ಸಾವಿರ ರನ್ ಗಳಿಸಿದ ಸಾಧನೆ ತಮ್ಮದಾಗಿಸಿಕೊಂಡರು.

ತರಂಗ 1,000 ರನ್‌ ಸಾಧನೆ

ಶ್ರೀಲಂಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಉಪುಲ್‌ ತರಂಗ, ಏಕದಿನ ಮಾದರಿಯಲ್ಲಿ ಈ ವರ್ಷ 1,000 ರನ್‌ ಗಳಿಸಿದ ಶ್ರೇಯಕ್ಕೆ ಭಾಜನರಾದರು. 2015ರ ನಂತರ ಈ ಸಾಧನೆ ಮಾಡಿದ ಶ್ರೀಲಂಕಾದ ಮೊದಲ ಬ್ಯಾಟ್ಸ್‌ಮನ್‌ ಎಂಬ ಶ್ರೇಯವನ್ನೂ ತಮ್ಮದಾಗಿಸಿಕೊಂಡರು.

ಭಾರತದ ಎದುರಿನ ಅಂತಿಮ ಏಕದಿನ ಪಂದ್ಯದಲ್ಲಿ 95ರನ್‌ ಕಲೆಹಾಕಿ ಈ ಮೈಲುಗಲ್ಲು ಸ್ಥಾಪಿಸಿದರು. 25 ಪಂದ್ಯಗಳನ್ನು ಆಡಿರುವ ತರಂಗ, ಎರಡು ಶತಕ ಮತ್ತು ಆರು ಅರ್ಧಶತಕಗಳನ್ನು ಸಿಡಿಸಿದ್ದಾರೆ.

Comments are closed.