ಕ್ರೀಡೆ

ದ್ರಾವಿಡ್ = ಲಾರಾ = ಕೋಹ್ಲಿ = 5 ದ್ವಿಶತಕ

Pinterest LinkedIn Tumblr


ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ನಾಯಕ ವಿರಾಟ್ ಕೋಹ್ಲಿ ಅಮೋಘ ದ್ವಿಶತಕ ಸಾಧನೆ ಮಾಡಿದ್ದರು. 267 ಎಸೆತಗಳನ್ನು ಎದುರಿಸಿದ ಕೋಹ್ಲಿ 17 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 213 ರನ್ ಗಳಿಸಿದ್ದರು.

ಇದು ಟೆಸ್ಟ್ ವೃತ್ತಿ ಜೀವನದಲ್ಲಿ ಕೋಹ್ಲಿ ಬ್ಯಾಟ್‌ನಿಂದ ದಾಖಲಾದ ಐದನೇ ದ್ವಿಶತಕವಾಗಿದೆ. ಇವೆಲ್ಲವೂ ನಾಯಕನಾದ ಬಳಿಕ ದಾಖಲಾಗಿರುವುದು ಅಷ್ಟೇ ಗಮನಾರ್ಹವೆನಿಸುತ್ತದೆ.

ಇದರೊಂದಿಗೆ ಭಾರತೀಯರ ಪೈಕಿ ಅತಿ ಹೆಚ್ಚು ದ್ವಿಶತಕ ದಾಖಲಿಸಿದವರ ಪೈಕಿ ಕೋಹ್ಲಿ ಈಗ ದ್ವಿತೀಯ ಸ್ಥಾನದಲ್ಲಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಅವರ ಹೆಸರಲ್ಲಿದ್ದ ಐದು ಡಬಲ್ ಸೆಂಚುರಿ ದಾಖಲೆಯನ್ನು ಸರಿದೂಗಿಸಿದ್ದಾರೆ.

ಕೋಹ್ಲಿಗೂ ಮುಂದಿರುವ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ತಲಾ ಆರು ದ್ವಿಶತಕಗಳನ್ನು ಬಾರಿಸಿದ್ದರು. ಈ ದಾಖಲೆ ತಲುಪಲು ಕೋಹ್ಲಿಗಿನ್ನು ಒಂದು ದ್ವಿಶತಕ ಮಾತ್ರ ಅಗತ್ಯವಿದೆ.

 

ಹಾಗೆಯೇ ನಾಯಕನಾಗಿ ಅತಿ ಹೆಚ್ಚು ದ್ವಿಶತಕ (5) ಬಾರಿಸಿರುವ ವೆಸ್ಟ್‌ಇಂಡೀಸ್‌ನ ಮಾಜಿ ಕಪ್ತಾ ಬ್ರ್ಯಾನ್ ಲಾರಾ ದಾಖಲೆಯನ್ನು ಕೋಹ್ಲಿ ಸರಿದೂಗಿಸಿದ್ದಾರೆ.

King Kohli scores his 5th double ton in Test cricket #INDvSL pic.twitter.com/k21iKvOZvg
— BCCI (@BCCI) November 26, 2017

ಕೋಹ್ಲಿ ತಮ್ಮ 62ನೇ ಟೆಸ್ಟ್ ಪಂದ್ಯದ 104ನೇ ಇನ್ನಿಂಗ್ಸ್‌ನಲ್ಲಿ 5ನೇ ದ್ವಿಶತಕ ಸಾಧನೆ ಮಾಡಿದ್ದರು. ಹಾಗೆಯೇ 19 ಶತಕ ಹಾಗೂ 14 ಅರ್ಧಶತಕಗಳು ಅವರ ಹೆಸರಲ್ಲಿದೆ.

ಅಂದ ಹಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಡಾನ್ ಬ್ರಾಡ್ಮನ್ ಗರಿಷ್ಠ 12 ದ್ವಿಶತಕಗಳನ್ನು ಬಾರಿಸಿದ್ದಾರೆ. ಆದರೆ ಸಮಕಾಲೀನ ಕ್ರಿಕೆಟಿಗರ ಪೈಕಿ ಕೋಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

Comments are closed.