ಕ್ರೀಡೆ

ಮೊದಲ ಏಕದಿನ ಪಂದ್ಯ: ಭಾರತದ ವಿರುದ್ಧ ನ್ಯೂಜಿಲೆಂಡ್‌ ಗೆಲುವು

Pinterest LinkedIn Tumblr

ಮುಂಬೈ: ರಾಸ್ ಟೇಲರ್‌ ಹಾಗೂ ಟಾಮ್ ಲಾಥಮ್ ಅಮೋಘ ಜೊತೆಯಾಟದ ನೆರವಿನಿಂದ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲುವು ತನ್ನದಾಗಿಸಿಕೊಂಡಿತು.

ಅಮೋಘ ಜೊತೆಯಾಟ ಆಡಿ ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಲೆ ಬರೆದ ಅನುಭವಿ ಆಟಗಾರ ರಾಸ್ ಟೇಲರ್ (95; 100 ಎ, 8 ಬೌಂ) ಮತ್ತು ಟಾಮ್ ಲಥಾಮ್‌ (ಔಟಾಗದೆ 103; 102 ಎ, 2 ಸಿ, 8 ಬೌಂ) ಭಾರತದ ಆಸೆಗೆ ತಣ್ಣೀರೆರಚಿದರು. ಇವರಿಬ್ಬರ ಅಬ್ಬರದ ಫಲವಾಗಿ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಆರು ವಿಕೆಟ್‌ಗಳ ಜಯಭೇರಿ ಮೊಳಗಿಸಿತು.

281 ರನ್‌ಗಳ ಜಯದ ಗುರಿ ಬೆನ್ನತ್ತಿದ ಪ್ರವಾಸಿ ತಂಡ ಆರಂಭದಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿತ್ತು. 80 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಬಳಿಸಿದ ಭಾರತದ ಬೌಲರ್‌ಗಳು ಸಂಭ್ರಮಪಟ್ಟರು. ಆದರೆ ಈ ಸಂದರ್ಭದಲ್ಲಿ ಜೊತೆಗೂಡಿದ ಟೇಲರ್ ಮತ್ತು ಲಥಾಮ್‌ ನಾಲ್ಕನೇ ವಿಕೆಟ್‌ಗೆ 200 ರನ್‌ಗಳನ್ನು ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲ್ಲಲು ಒಂದು ರನ್ ಬೇಕಾಗಿದ್ದಾಗ ಟೇಲರ್ ಔಟಾದರು. ಲಥಾಮ್‌ ಅಜೇಯರಾಗಿ ಉಳಿದರು.

ಇವರಿಬ್ಬರು 168 ರನ್‌ ಸೇರಿಸುತ್ತಿದ್ದಂತೆ ದಾಖಲೆ ನಿರ್ಮಾಣವಾಯಿತು. ಈ ಕ್ರೀಡಾಂಗಣದಲ್ಲಿ ಯಾವುದೇ ವಿಕೆಟ್‌ಗೆ ಅತಿ ಹೆಚ್ಚು ರನ್‌ ಸೇರಿಸಿದ ಆಟಗಾರರು ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.

ಕೊಹ್ಲಿ ಶತಕದಾಟ

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಶಿಖರ್ ಧವನ್‌, ರೋಹಿತ್ ಶರ್ಮಾ ಮತ್ತು ಕೇದಾರ್ ಜಾದವ್ ಬೇಗನೇ ಔಟಾಗಿ ನಿರಾಸೆ ಮೂಡಿಸಿದರು. ನಂತರ ವಿರಾಟ್ ಕೊಹ್ಲಿ ಜೊತೆಗೂಡಿದ ದಿನೇಶ್ ಕಾರ್ತಿಕ್ ಮತ್ತು ಮಹೇಂದ್ರ ಸಿಂಗ್ ದೋನಿ ತಂಡಕ್ಕೆ ಸ್ವಲ್ಪ ಹೊತ್ತು ಆಸರೆಯಾದರು. ಇವರಿಬ್ಬರು ಪೆವಿಲಿಯನ್ ಸೇರಿದ ನಂತರ ನಾಯಕ ‘ವಿರಾಟ್’ ಇನಿಂಗ್ಸ್‌ ಕಟ್ಟಿದರು. ಹೀಗಾಗಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು.

125 ಎಸೆತಗಳಲ್ಲಿ 121 ರನ್ ಗಳಿಸಿದ ಅವರು ಭಾನುವಾರದ ರಜೆ ಕಳೆಯಲು ಸೇರಿದ್ದ ಕ್ರಿಕೆಟ್ ಪ್ರಿಯರಿಗೆ ಭರಪೂರ ಮನರಂಜನೆ ನೀಡಿದರು. ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ ಗಳಿಸಿದ ಅವರು 31ನೇ ಶತಕ ಸಿಡಿಸಿ ಸಂಭ್ರಮಿಸಿದರು.

ತಂಡ 16 ರನ್ ಗಳಿಸಿದ್ದಾಗ ಮೊದಲ ಆಘಾತ ಅನುಭವಿಸಿತು. ಎಡಗೈ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ ಅವರು ಟ್ರೆಂಟ್ ಬೌಲ್ಟ್ ಎಸೆತದಲ್ಲಿ ವಿಕೆಟ್ ಕೀಪರ್‌ ಟಾಮ್‌ ಲಥಾಮ್‌ಗೆ ಕ್ಯಾಚ್ ನೀಡಿ ಮರಳಿದರು. ಆರನೇ ಓವರ್‌ನಲ್ಲಿ ಬೌಲ್ಟ್ ಮತ್ತೊಂದು ಆಘಾತ ನೀಡಿದರು. 20 ರನ್ ಗಳಿಸಿದ್ದ ರೋಹಿತ್ ಶರ್ಮಾ ತವರು ನೆಲದಲ್ಲಿ ಮಿಂಚಲು ವಿಫಲರಾದರು.

ಬೌಲ್ಟ್ ಅವರ ಒಳನುಗ್ಗಿದ ಎಸೆತವನ್ನು ಡ್ರೈವ್ ಮಾಡಲು ಶ್ರಮಿಸಿದ ರೋಹಿತ್ ಅವರ ಆಫ್‌ ಸ್ಟಂಪ್‌ಗೆ ಚೆಂಡು ಬಡಿದಾಗ ಭಾರತ ಪಾಳಯದಲ್ಲಿ ನಿರಾಸೆ ಮನೆ ಮಾಡಿತು. 29ಕ್ಕೆ ಎರಡು ವಿಕೆಟ್ ಉರುಳಿದಾಗ ಪ್ರೇಕ್ಷಕರು ಕೂಡ ನಿಶ್ಶಬ್ದರಾದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆಗೂಡಿದ ಕೇದಾರ್ ಜಾಧವ್‌ ಮೂರನೇ ವಿಕೆಟ್‌ಗೆ 42 ರನ್ ಸೇರಿಸಿದರು. ಆದರೆ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್‌ ಅವರ ಎಸೆತದಲ್ಲಿ ಕೇದಾರ್‌ ಸುಲಭವಾಗಿ ಕ್ಯಾಚ್‌ ಅಂಡ್ ಬೌಲ್ಡ್ ಆದಾಗ ತಂಡ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತು.

ನಂತರ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್‌ 73 ರನ್‌ಗಳನ್ನು ಸೇರಿಸಿ ತಂಡದ ಮೊತ್ತವನ್ನು 150ರ ಸನಿಹ ತಲುಪಿಸಿದರು. ಟಿಮ್‌ ಸೌಥಿ ಅವರ ಎಸೆತವನ್ನು ಹುಕ್‌ ಮಾಡಲು ಶ್ರಮಿಸಿದ ಕಾರ್ತಿಕ್ ಬೌಂಡರಿ ಗೆರೆ ಬಳಿ ಇದ್ದ ಕಾಲಿನ್ ಮನ್ರೊ ಅವರಿಗೆ ಕ್ಯಾಚ್ ನೀಡಿದರು. ಮಹೇಂದ್ರ ಸಿಂಗ್ ದೋನಿ ಅವರನ್ನು ಕೂಡ ಔಟ್‌ ಮಾಡಿದ ಬೌಲ್ಟ್ ಮೂರನೇ ವಿಕೆಟ್ ಕಬಳಿಸಿದ ಸಂಭ್ರಮದಲ್ಲಿ ತೇಲಿದರು.

ಹಾರ್ದಿಕ್ ಪಾಂಡ್ಯ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದರು. ಆದರೆ ಬೌಲ್ಟ್ ಎಸೆತದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಪಡೆದ ಅತ್ಯುತ್ತಮ ಕ್ಯಾಚ್‌ಗೆ ಬಲಿಯಾದರು. 15 ಎಸೆತಗಳಲ್ಲಿ ತಲಾ ಎರಡು ಸಿಕ್ಸರ್ ಮತ್ತು ಬೌಂಡರಿ ಗಳಿಸಿದ ಭುವನೇಶ್ವರ್‌ ಕುಮಾರ್‌ 26 ರನ್ ಗಳಿಸಿ
ಮಿಂಚಿದರು.

ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಕೊಹ್ಲಿ ಔಟಾದರೆ ಕೊನೆಯ ಎಸೆತದಲ್ಲಿ ಭುವನೇಶ್ವರ್‌ ಕುಮಾರ್‌ ಔಟಾದರು. ಇವರಿಬ್ಬರ ವಿಕೆಟ್‌ ಸೇರಿದಂತೆ ಒಟ್ಟು ಮೂರು ವಿಕೆಟ್‌ಗಳು ಟಿಮ್ ಸೌಥಿ ಪಾಲಾದವು.

Comments are closed.