ಕ್ರೀಡೆ

ಬಿಸಿಸಿಐ ಆಡಳಿತ ಸಮಿತಿಗೆ ನಾಲ್ವರು ತಾತ್ಕಾಲಿಕ ಸದಸ್ಯರ ನೇಮಕ

Pinterest LinkedIn Tumblr


ನವದೆಹಲಿ: ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಆಡಳಿತ ಸಮಿತಿಗೆ ನಾಲ್ವರು ತಾತ್ಕಾಲಿಕ ಸದಸ್ಯರನ್ನು ನೇಮಿಸಿ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ.

ಮಾಜಿ ಅಟಾರ್ನಿ ಜನರಲ್‌ ವಿನೋದ್‌ ರೈ ನೇತೃತ್ವದ ಸಮಿತಿಯಲ್ಲಿ ಇತಿಹಾಸತಜ್ಞ ರಾಮಚಂದ್ರ ಗುಹಾ, ಮಾಜಿ ಮಹಿಳಾ ಕ್ರಿಕೆಟರ್‌ ಡಯಾನಾ ಎದುಜಿ, ಐಡಿಎಫ್‌ಸಿ ಬ್ಯಾಂಕಿನ ಮುಖ್ಯಸ್ಥ ವಿಕ್ರಮ್‌ ಲಿಮಾಯೆ ಸಮಿತಿಯಲ್ಲಿರುವ ಸದಸ್ಯರಾಗಿದ್ದಾರೆ.

ಕ್ರೀಡಾ ಸಚಿವಾಲಯದ ಸದಸ್ಯರನ್ನು ಬಿಸಿಸಿಐ ಆಡಳಿತ ಸಮಿತಿಗೆ ನೇಮಿಸುವಂತೆ ಅಟಾರ್ನಿ ಜನರಲ್‌ ಅವರ ಸುಪ್ರೀಂ ಕೋರ್ಟಿಗೆ ಮಾಡಿದ್ದ ಮನವಿ ತಿರಸ್ಕಿರಿಸಿದೆ. ಬಿಸಿಸಿಐ ನಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರು ಆಡಳಿತ ವಿಬಾಗದಲ್ಲಿ ಇರಬಾರದು ಎಂಬ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ತನ್ನ ನಿಲುವಿನಂತೆ ಇಂದು ಹೊಸ ತೀರ್ಪು ಹೊರಹಾಕಿದೆ.

ಫೆಬ್ರುವರಿ ಮೊದಲ ವಾರದಲ್ಲಿ ನಡೆಯಲಿರುವ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ) ಸಭೆಯಲ್ಲಿ ಬ್ಯಾಂಕರ್‌ ವಿಕ್ರಮ್‌ ಲಿಮಾಯೆ ಮತ್ತು ಬಿಸಿಸಿಐ ಜಂಟಿ ನಿರ್ದೇಶಕ ಅಮಿತಾಬ್‌ ಚೌಧರಿ ಆರ್ಥಿಕ ಪಾಲುದಾರಿಕೆ ಕುರಿತು ಚರ್ಚಿಸಲಿದ್ದಾರೆ.

ಲೋಧಾ ಸಮಿತಿಯ 16 ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಕಾನೂನು ತಜ್ಞ ಗೋಪಾಲ್‌ ಸುಬ್ರಮಣಿಯನ್‌ ಮತ್ತು ವಕೀಲ ಅನಿಲ್‌ ದಿವಾನ್‌ ಮಧ್ಯಂತರ ಅರ್ಜಿ ಸಲ್ಲಿಸಿ, ಆಡಳಿತ ಮಂಡಳಿಗೆ 9 ಜನರ ಹೆಸರನ್ನು ನೀಡಿದ್ದರು.

ಈ ಕುರಿತು ಜನವರಿ 24 ರಂದು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ್ದ ಸುಪ್ರೀಂ ಕೋರ್ಟ್‌ ಜನವರಿ 30 ರವರೆಗೆ ತೀರ್ಪನ್ನು ಕಾಯ್ದಿರಿಸಿತ್ತು. ಬಿಸಿಸಿಐ ಮತ್ತು ಕೇಂದ್ರ ಸರ್ಕಾರಕ್ಕೆ ಜನವರಿ 27 ರೊಳಗೆ ಮುಚ್ಚಿದ ಲಕೋಟೆಯಲ್ಲಿ ಆಡಳಿತ ಮಂಡಳಿ ಸದಸ್ಯರ ಹೆಸರುಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ಸೂಚಿಸಿತ್ತು.

ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಎ.ಎಂ. ಖನ್ವಿಲ್ಕರ್‌ ಮತ್ತು ಡಿ.ವಾಯ್‌.ಚಂದ್ರಚೂಡ್‌ ನೇತೃತ್ವದ ಪೀಠವು ಬಿಸಿಸಿಐ ಸೂಚಿಸಿದ್ದ ಹೆಸರುಗಳಲ್ಲಿ ಮೂರು ಹೆಸರುಗಳನ್ನು ಅಂತಿಮಗೊಳಿಸಿದೆ. ಆಯ್ಕೆಯಾಗಿರುವ ಸದಸ್ಯರು ಬಿಸಿಸಿಐ ಪ್ರತಿನಿಧಿಗಳಾಗಿ ಮುಂಬರುವ ಐಸಿಸಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Comments are closed.