ಕ್ರೀಡೆ

ಒಂದೇ ಸೆಷನ್’ನಲ್ಲಿ ಇಂಗ್ಲೆಂಡ್ ಆಲೌಟ್; ಬಾಂಗ್ಲಾಕ್ಕೆ ಐತಿಹಾಸಿಕ ಜಯ

Pinterest LinkedIn Tumblr

mehedi-hasanಮೀರ್’ಪುರ್(ಅ. 30): ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ ರೋಚಕ ಗೆಲುವು ಪಡೆದಿದೆ. ಮೂರೇ ದಿನದಲ್ಲಿ ಅಂತ್ಯಗೊಂಡ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 108 ರನ್’ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು 1-1ರಿಂದ ಸಮ ಮಾಡಿಕೊಂಡಿದೆ. ಆದರೆ, ಈ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಜಯಮಾಲೆ ಪಡೆಯುವ ಮುನ್ನ ಅನೇಕ ರೋಚಕ ಕ್ಷಣಗಳಿಗೆ ಸಾಕ್ಷ್ಯವಾಯಿತು. ಗೆಲ್ಲಲು 273 ರನ್ ಗುರಿ ಪಡೆದ ಇಂಗ್ಲೆಂಡ್ ಟೀ ವಿರಾಮದ ವೇಳೆ ವಿಕೆಟ್ ನಷ್ಟವಿಲ್ಲದೇ 100 ರನ್ ಗಳಿಸಿ ಸುಲಭ ಗೆಲುವಿನ ಕುರುಹು ನೀಡಿತ್ತು. ಆದರೆ, ಕೊನೆಯ ಸೆಷನ್’ನಲ್ಲಿ ನಾಟಕೀಯ ಬೆಳವಣಿಗೆಗಳಾದವು. ಮೊದಲ ಎಸೆತದಿಂದಲೇ ಆಂಗ್ಲರ ಪತನ ಆರಂಭವಾಯಿತು. ಕೇವಲ 22 ಓವರ್ ಅಂತರದಲ್ಲಿ ಇಂಗ್ಲೆಂಡ್’ನ ಎಲ್ಲ 10 ವಿಕೆಟ್’ಗಳು ಉರುಳಿಬಿದ್ದವು. ಮೆಹೆದಿ ಹಸನ್ ಮಿರಾಜ್ ಮತ್ತು ಶಾಕಿಬ್ ಅಲ್ ಹಸನ್ ಬೌಲಿಂಗ್’ಗೆ ಆಂಗ್ಲರು ತತ್ತರಿಸಿಹೋದರು. ಇಂಗ್ಲೆಂಡ್’ನ ಎರಡನೇ ಇನ್ನಿಂಗ್ಸ್ ಕೇವಲ 164 ರನ್ನಿಗೆ ಅಂತ್ಯಗೊಂಡಿತು. ಅಲಸ್ಟೇರ್ ಕುಕ್ ಮತ್ತು ಬೆನ್ ಡುಕೆಟ್ ಮೊದಲ ವಿಕೆಟ್’ಗೆ 100 ರನ್ ಸೇರಿಸಿದ್ದೇ ಹೆಚ್ಚಾಯಿತು. ಇವರಿಬ್ಬರನ್ನ ಬಿಟ್ಟರೆ ಬೆನ್ ಸ್ಟೋಕ್ಸ್ ಮಾತ್ರವೇ ಒಂದಷ್ಟು ಪ್ರತಿರೋಧ ಒಡ್ಡಿದ್ದು. ಇನ್ನುಳಿದ 8 ಮಂದಿ ಬ್ಯಾಟುಗಾರರು ಎರಡಂಕಿ ಗಡಿಯನ್ನೂ ದಾಟಲಿಲ್ಲ.
ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹೆದಿ ಹಸನ್ ಮಿರಾಜ್ ಎರಡೂ ಇನ್ನಿಂಗ್ಸಲ್ಲಿ ತಲಾ 6 ವಿಕೆಟ್ ಪಡೆದು ಈ ಐತಿಹಾಸಿಕ ಗೆಲುವಿನ ಸೂತ್ರಧಾರರೆನಿಸಿದರು. ಅವರ ಈ ಸಾಧನೆಗಾಗಿ ಅವರಿಗೆ ಪಂದ್ಯಪುರುಷೋತ್ತಮ ಗೌರವ ಪ್ರಾಪ್ತಿಯಾಯಿತು.
ಈ ಪಂದ್ಯದೊಂದಿಗೆ ಇಂಗ್ಲೆಂಡಿಗರ ಬಾಂಗ್ಲಾ ಪ್ರವಾಸ ಮುಕ್ತಾಯವಾಯಿತು. ಈ ಪ್ರವಾಸದಲ್ಲಿ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಇಂಗ್ಲೆಂಡ್ 2-1 ರಿಂದ ಜಯಿಸಿದೆ. 2 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ 1-1ರಿಂದ ಸರಿಸಮವಾಗಿದೆ.
ಸ್ಕೋರು ವಿವರ:
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 63.5 ಓವರ್ 220 ರನ್ ಆಲೌಟ್
(ತಮೀಮ್ ಇಕ್ಬಾಲ್ 104, ಮೋಮಿನುಲ್ ಹಕ್ 66 ರನ್ – ಮೊಯೀನ್ ಅಲಿ 57/5, ಕ್ರಿಸ್ ವೊಕ್ಸ್ 30/3, ಬೆನ್ ಸ್ಟೋಕ್ಸ್ 13/2)
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 81.3 ಓವರ್ 244 ರನ್ ಆಲೌಟ್
(ಜೋ ರೂಟ್ 56, ಕ್ರಿಸ್ ವೋಕ್ಸ್ 46, ಅದಿಲ್ ರಷೀದ್ ಅಜೇಯ 44 ರನ್ – ಮೆಹೆದಿ ಹಸನ್ 82/2, ತೈಜುಲ್ ಇಸ್ಲಾಮ್ 65/3)
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ 66.5 ಓವರ್ 296 ರನ್ ಆಲೌಟ್
(ಇಮ್ರುಲ್ ಕಾಯೆಸ್ 78, ಮಹಮುದುಲ್ಲಾ 47, ಶಾಕಿಬ್ ಅಲ್ ಹಸನ್ 41, ತಮೀಮ್ ಇಕ್ಬಾಲ್ 40 ರನ್ – ಅದಿಲ್ ರಷೀದ್ 52/4, ಬೆನ್ ಸ್ಟೋಕ್ಸ್ 52/3, ಜಾಫರ್ ಅನ್ಸಾರಿ 76/2)
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 45.3 ಓವರ್ 164 ರನ್ ಆಲೌಟ್
(ಅಲಸ್ಟೇರ್ ಕುಕ್ 59, ಬೆನ್ ಡುಕೆಟ್ 56, ಬೆನ್ ಸ್ಟೋಕ್ಸ್ 25 ರನ್ – ಮೆಹೆದಿ ಹಸನ್ 77/6, ಶಾಕಿಬ್ ಅಲ್ ಹಸನ್ 49/4)

Comments are closed.