ಕ್ರೀಡೆ

‘ಎಂಎಸ್ ಧೋನಿ’ ಚಿತ್ರದ ಕೆಲವು ಸುಳ್ಳುಗಳು

Pinterest LinkedIn Tumblr

ms dhoni biopicಮುಂಬೈ(ಅ.06): ಚಿತ್ರ ತೆರೆಕಂಡ ಐದಾರು ದಿನದಲ್ಲೇ 80 ಕೋಟಿಯ ಆಸುಪಾಸು ಗಳಿಕೆ ಕಂಡಿರುವ ‘ಎಂಎಸ್ ಧೋನಿ’ ಶತಕದ ಬಾಗಿಲಲ್ಲಿದೆ. ಮಧ್ಯಮವರ್ಗದ ಹುಡುಗನೊಬ್ಬನ ಬದುಕಿನ ಹೋರಾಟದೊಂದಿಗೆ, ಕ್ರೀಡೆಯ ಸ್ಟಾರ್ ಸ್ಪರ್ಶವನ್ನೂ ಒಟ್ಟಿಗೆ ತೋರಿಸಿರುವ ಧೋನಿಯ ಬಯೋಪಿಕ್ ಪರಿಪೂರ್ಣವಾಗಿ ಮೂಡಿಬಂದಿಲ್ಲ ಎನ್ನಲಾಗ್ತಿದೆ. ಪ್ರೇಕ್ಷಕರನ್ನು ರಂಜಿಸಲು ಹೋಗಿ, ಇಲ್ಲೊಂದಿಷ್ಟು ದೋಷಗಳು ಸೃಷ್ಟಿಯಾಗಿವೆ. ಅಷ್ಟಕ್ಕೂ ‘ಎಂಎಸ್ ಧೋನಿ’ ಹೇಳಿದ ಆ ಐದು ಸುಳ್ಳುಗಳು ಯಾವುವು?
1. ಧೋನಿಯ ಬದುಕಿನಲ್ಲಿ ಮೊದಲ ಪ್ರೇಯಸಿ ಪ್ರಿಯಾಂಕಾ ಝಾ ಬಂದಿದ್ದು 2002ರಲ್ಲಿ. ಆದರೆ, ಬಯೋಪಿಕ್‌ನಲ್ಲಿ 2005ರಲ್ಲಿ ಎಂದು ತೋರಿಸಲಾಗಿದೆ. ಪಾಕಿಸ್ತಾನದ ವಿರುದ್ಧ 3 ರನ್ ಗಳಿಸಿ ಔಟಾದ ಧೋನಿ, ವಿಶಾಖಪಟ್ಟಣಂಗೆ ಇನ್ನೊಂದು ಪಂದ್ಯ ಆಡಲು ವಿಮಾನ ಹತ್ತಿದಾಗ ಪ್ರಿಯಾಂಕಾ ಭೇಟಿ ಆಗುತ್ತಾಳೆ. ಧೋನಿ ಬದುಕಿನಲ್ಲಿ ಈ ಘಟನೆ ನಡೆದಿದ್ದು 2002ರಲ್ಲಿ!
2. 2007ರಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಲಾವಾ ಮೊಬೈಲ್ ಕಂಪನಿ ಸ್ಥಾಪನೆಯೇ ಆಗಿರಲಿಲ್ಲ. ಈ ಕಂಪನಿ ಹುಟ್ಟಿಕೊಂಡಿದ್ದೇ 2009ರಲ್ಲಿ. ಧೋನಿ ಇದಕ್ಕೆ ರಾಯಭಾರಿ ಆಗಿದ್ದು 2016ರ ಏಪ್ರಿಲ್‌ನಲ್ಲಿ. ಆದರೆ, ಸಿನಿಮಾದಲ್ಲಿ 2007ರಲ್ಲೇ ಲಾವಾದ ಬ್ಯಾಕ್‌ಡ್ರಾಪ್‌ನಲ್ಲಿ ಧೋನಿ ಮಾತನಾಡುತ್ತಿರುವಂತೆ ತೋರಿಸಲಾಗಿದೆ!
3. ಧೋನಿ ಹಲವು ಜಾಹೀರಾತು ಉತ್ಪನ್ನಗಳಿಗೆ ಪ್ರಚಾರ ಕೊಟ್ಟಿದ್ದಾರೆ. ಬೂಸ್ಟ್, ಹೀರೋ, ಮಹೀಂದ್ರಾ ಕಂಪನಿಗಳಿಗೆ ಪ್ರಚಾರ ನೀಡಿ ಒಳ್ಳೆಯ ಲಾಭವನ್ನೇ ತಂದುಕೊಟ್ಟಿದ್ದಾರೆ. ಆದರೆ, ಅವರೆಂದೂ ‘ನೀವು ಗಾರ್ನಿಯರ್ ಮೆನ್ಸ್ ಕ್ರೀಮ್ ಹಚ್ಕೊಳ್ಳಿ’ ಎಂದಿಲ್ಲ. ಫಿನೋಲೆಕ್ಸ್ ಪೈಪ್‌ಗೂ ಪ್ರಚಾರ ಕೊಟ್ಟಿಲ್ಲ. ಬಯೋಪಿಕ್‌ನಲ್ಲಿ ಇವೆರಡನ್ನೇ ಹೈಲೈಟ್ ಮಾಡಲಾಗಿದೆ.
4. ಬಯೋಪಿಕ್‌ನಲ್ಲಿ ಧೋನಿಯ ಅಪ್ಪ, ಅಮ್ಮ ಜೊತೆಗೆ ಅಕ್ಕನ ಪಾತ್ರವನ್ನು ತೋರಿಸಲಾಗಿದೆ. ಆದರೆ, ಧೋನಿಗೆ ಒಬ್ಬ ಅಣ್ಣ ಇದ್ದಾನೆಂಬುದನ್ನೇ ಎಲ್ಲೂ ಹೇಳಿಲ್ಲ. ಅಣ್ಣ ನರೇಂದ್ರ ಸಿಂಗ್ ಧೋನಿಯ ಬಗ್ಗೆ ಎಲ್ಲೂ ಪ್ರಸ್ತಾಪವನ್ನೇ ಮಾಡಿಲ್ಲ. ಇದು ಯಾಕೆ ಎಂದು ನಿರ್ದೇಶಕ ನೀರಜ್ ಪಾಂಡೆಯನ್ನು ಕೇಳಿದರೆ, ಅವರು ಬೊಟ್ಟು ಮಾಡುವುದು ಧೋನಿಯ ಕಡೆಗಂತೆ. ಕಾರಣ ಗೊತ್ತಿಲ್ಲ.
5. ಸಾಕ್ಷಿಯನ್ನು ಧೋನಿ ಭೇಟಿ ಆಗುವುದು ಕೋಲ್ಕತ್ತಾದ ಹೋಟೆಲ್ಲಿನಲ್ಲಿ. ಹೋಟೆಲ್ ಮ್ಯಾನೇಂಜ್‌ಮೆಂಟ್ ಕೋರ್ಸ್‌ನ ಇಂಟರ್ನಿಯಾಗಿ ಬಂದಿದ್ದ ಸಾಕ್ಷಿ ಅಲ್ಲಿ ರಿಸೆಪ್ಷನಿಸ್ಟ್ ಆಗಿರುತ್ತಾರೆ. ಬಯೋಪಿಕ್‌ನಲ್ಲಿ ಇದನ್ನು ತೋರಿಸಿಯೂ, ಇವರಿಬ್ಬರು ಬಾಲ್ಯ ಸ್ನೇಹಿತರು ಎಂದು ತೋರಿಸಲಾಗಿದೆ. ನಿಜಕ್ಕೂ ಮಾಧ್ಯಮಗಳೂ ಹಾಗೆ ವರದಿ ಮಾಡಿಯೇ ಇಲ್ಲ!

Comments are closed.