ಮನೋರಂಜನೆ

ಕೊರೋನಾ ಸಂಕಷ್ಟ: ಜೀವನೋಪಾಯಕ್ಕೆ ಆಟೋ ಓಡಿಸುತ್ತಿರುವ ನಟಿ..!

Pinterest LinkedIn Tumblr


ಸಿನಿಮಾದಲ್ಲಿನ ಕೆಲ ಪಾತ್ರಗಳು ನಿಜ ಜೀವನಕ್ಕೆ ಸ್ಪೂರ್ತಿಯಾಗುವುದುಂಟು. ಅಂತೆಯೇ ಬಣ್ಣದ ಲೋಕದಲ್ಲಿದ್ದರೂ ನಿಜ ಜೀವನದಲ್ಲೂ ಸ್ಪೂರ್ತಿಯಾದ ನಟಿಯೊಬ್ಬರು ಈಗ ಸಖತ್ ಸುದ್ದಿಯಾಗಿದ್ದಾರೆ. ಹೆಸರು ಮಂಜು. ಮಲಂಯಾಳಂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಟಿ.

ನಟನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ ಅಭಿನಯೇತ್ರಿಗೆ ತೊಡಕಾಗಿದ್ದು ಲಾಕ್​ಡೌನ್. ಹೌದು, ಕೊರೋನಾ ಲಾಕ್​ಡೌನ್​ನಿಂದಾಗಿ ಇಡೀ ಚಿತ್ರರಂಗವೇ ಬಂದ್ ಆಗಿತ್ತು. ರಂಗಭೂಮಿ ಮತ್ತು ಸಿನಿರಂಗವನ್ನು ನಂಬಿದ್ದ ನಟಿಗೆ ಜೀವನಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ.

ಒಂದೆಡೆ ರಂಗಭೂಮಿಯಲ್ಲಿ 15 ವರ್ಷದ ಅನುಭವ. ಮತ್ತೊಂದೆಡೆ ಬಡತನ. ಸದ್ಯಕ್ಕಂತು ಕೊರೋನಾ ಮಹಾಮಾರಿ ತೊಲಗುವಂತೆ ಕಾಣುತ್ತಿಲ್ಲ ಎಂದರಿತ ನಟಿ ಜೀವನೋಪಾಯಕ್ಕೆ ಹೊಸ ದಾರಿ ಕಂಡುಕೊಳ್ಳಲೇ ಬೇಕಾಗಿತ್ತು. ಹೀಗಾಗಿ 36 ವರ್ಷದ ಮಂಜು, ಕುಟುಂಬವನ್ನು ಸಾಕಲು, ಇತರರಿಗೆ ನೆರವಾಗಲು ಆಟೋರಿಕ್ಷಾ ಚಾಲನೆ ಮಾಡುತ್ತಿದ್ದಾರೆ. ಹಾಗೆಯೇ ತಾವು ದುಡಿದ ದುಡಿಮೆಯ ಒಂದು ಭಾಗವನ್ನು ಬಡವರ ಸಹಾಯಕ್ಕೆ ವಿನಿಯೋಗಿಸುತ್ತಿದ್ದಾರೆ.

ಪತ್ತನಂತಿಟ್ಟದ ವಲ್ಲಿಕೋಡ್ ಮೂಲದ ಕಲಾವಿದೆ ಮಂಜು ಅದೊಂದು ದಿನ ರಾತ್ರಿ ಮನೆಗೆ ತೆರಳಲು ಯಾವುದೇ ವಾಹನ ಸಿಗದೇ ಕಷ್ಟಪಟ್ಟಿದ್ದರು. ಇದೇ ವೇಳೆ ಪ್ರಸ್ತುತ ಜೀವನಕ್ಕೆ ಏನು ಮಾಡಬೇಕೆಂಬ ಚಿಂತೆಯಲ್ಲಿದ್ದ ನಟಿ ಹೊಸ ಐಡಿಯಾ ಹೊಳೆದಿದೆ.

ತಾನು ಕಷ್ಟಪಟ್ಟಿರುವಂತೆ ಇತರರು ಕೂಡ ವಾಹನಕ್ಕಾಗಿ ಪರದಾಡುತ್ತಿರಬಹುದಲ್ಲವೇ ಎಂದು ಯೋಚಿಸಿದರು. ಅದರಂತೆ ಆಟೋ ಮೂಲಕ ಬದುಕು ಕಂಡುಕೊಳ್ಳುವ ನಿರ್ಧಾರಕ್ಕೆ ಬಂದೆ ಎನ್ನುತ್ತಾರೆ ಮಂಜು. ಕೇರಳ ಪೀಪಲ್ಸ್ ಆರ್ಟ್ಸ್ ಕ್ಲಬ್ ಮತ್ತು ಕೆಪಿಎಸಿ ರಂಗಭೂಮಿ ಸಂಸ್ಥೆಗಳ ಸಹಾಯದಿಂದ ಆಟೋ ಖರೀದಿಸಿರುವ ಮಂಜು ಇದೀಗ ಬಣ್ಣವಿಲ್ಲದೆ ಬದುಕು ಸಾಗಿಸುತ್ತಿದ್ದಾರೆ.

ಒಟ್ಟಿನಲ್ಲಿ ಕೊರೋನಾ ಮಹಾಮಾರಿಯಿಂದ ಚಿತ್ರರಂಗದಲ್ಲಿರುವ ದಿನಗೂಲಿ ಕಾರ್ಮಿಕರು/ ಬಡ ಕಾರ್ಮಿಕರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಇವರುಗಳ ಮಧ್ಯೆ ಹೊಸ ದಾರಿ ಕಂಡುಕೊಂಡಿರುವ ನಟಿ ಮಂಜು, ಎಲ್ಲವೂ ಸರಿಯಾಗಲಿದೆ ಆಗ ಮತ್ತೆ ಬಣ್ಣ ಹಚ್ಚುವೆ ಎಂಬ ಆಶಾಭಾವನೆ ವ್ಯಕ್ತಪಡಿಸುತ್ತಾರೆ.

Comments are closed.