ಮನೋರಂಜನೆ

ಇಂದು ತೆರೆಗೆ ಅಪ್ಪಳಿಸಲಿದೆ ‘ಯಾನ’ ! ಸಿನೆಮಾ ನೋಡುವ ತವಕದಲ್ಲಿ ಜನ

Pinterest LinkedIn Tumblr

ಬೆಂಗಳೂರು : ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಹಿರಿಯ ಸಿನಿಮಾ ನಟರಾದ ಜೈಜಗದೀಶ್‌ ಹಾಗು ಪತ್ನಿ ವಿಜಯಲಕ್ಸ್ಮಿ ಸಿಂಗ್‌ ತಮ್ಮ ಮೂವರು ಮಕ್ಕಳಿಗಾಗಿ ನಿರ್ಮಿಸಿರುವ ‘ಯಾನ’ ಸಿನಿಮಾ ಶುಕ್ರವಾರ(ಜು.12 )ದಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವಿಜಯಲಕ್ಸ್ಮಿ ಸಿಂಗ್‌ ಅವರೇ ನಿರ್ದೇಶಿಸಿರುವ ಈ ಸಿನೆಮಾದಲ್ಲಿ ಅವರ ಪುತ್ರಿಯರಾದ ವೈಭವಿ , ವೈಸಿರಿ, ವೈನಿಧಿ ನಾಯಕಿಯರಾಗಿದ್ದು, ನಾಯಕ ನಟರಾಗಿ ಅಭಿಷೇಕ್‌ ರಾಯ್ಕರ್‌, ಸುಮುಖ, ಚಕ್ರವರ್ತಿ ಅಭಿನಯಿಸಿದ್ದಾರೆ. ಒಂದು ಕಾಲದ ಹಾಟ್‌ ಫೇವರಿಟ್‌ ಜೋಡಿ ಅನಂತ್‌ ನಾಗ್‌ ಮತ್ತು ಸುಹಾಸಿನಿ ಈ ಸಿನೆಮಾದಲ್ಲಿ ಒಂದಾಗಿರುವುದು ಸಿನೆಮಾಕ್ಕೆ ಮತ್ತೊಂದು ಹೆಗ್ಗಳಿಕೆಯಾಗಿದೆ.

ಯಾನ ಸಿನೆಮಾವು ಪ್ರಮೋಷನಲ್ ಸಾಂಗ್, ಟ್ರೈಲರ್, ಲಿರಿಕಲ್ ಸಾಂಗ್’ನಿಂದ ಸ್ಯಾಂಡಲ್ ವುಡ್’ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದು, ಸಿನಿ ಪ್ರೇಮಿಗಳು ಸಿನೆಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ಸಿನೆಮಾವನ್ನು ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿದ್ದಾರೆ.

ಮೂವರು ಹುಡುಗಿಯರ ಬದುಕಿನ ಪಯಣದ ಕಥೆ ಹೇಳಲಿರುವ ಈ ಸಿನಿಮಾವು ಇಂದಿನ ಯುವ ಪೀಳಿಗೆಯ ನವಿರಾದ ಪ್ರೇಮ ಕಥೆಯನ್ನು ಹೇಳುತ್ತೆ.

ಮೂವರು ಹುಡುಗಿಯರ ಬದುಕಿನ ಪಯಣವೇ ಈ ಸಿನಿಮಾ. ಬದುಕಿನಲ್ಲಿ ಬಂದು ಹೋಗಬಹುದಾದ ಘಟನೆಗಳೇ ಯಾನ ಕತೆ. ಜತೆಗೆ ತೆರಳುವ ಗೋವಾ ಪಯಣದ ಕತೆ ಬದುಕಿನ ಕತೆಯನ್ನೂ ಹೇಳುತ್ತದೆ. ಸಿನೆಮಾವನ್ನು ಚಿತ್ರದುರ್ಗ, ದಾವಣಗೆರೆ, ಮೂಡಿಗೆರೆ, ಗೋವಾ, ಉತ್ತರಕರ್ನಾಟಕದ ಯಾನ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಈ ಸಿನಿಮಾದಲ್ಲಿ ಒಟ್ಟು ಏಳು ಹಾಡುಗಳಿವೆ. ಯೋಗರಾಜ್‌ ಭಟ್‌, ಜಯಂತ್‌ ಕಾಯ್ಕಿಣಿ ಕೂಡ ಗೀತೆಗಳನ್ನು ಬರೆದಿದ್ದಾರೆ. ಇನ್ನೂ ವಿಶೇಷ ಎಂದರೆ ನಾಯಕ, ನಾಯಕಿಯರು ಅಷ್ಟೇ ಅಲ್ಲದೆ ತಂತ್ರಜ್ಞರು ಸೇರಿ ಒಟ್ಟು 40 ಮಂದಿ ಹೊಸಬರಿಗೆ ಸಿನಿಮಾದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಚಿತ್ರದಲ್ಲಿ ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರರಾಜ್, ಗಡ್ದಪ್ಪ, ಸುಂದರ್, ವೀಣಾಸುಂದರ್, ಎಂ.ಎನ್.ಲಕ್ಷ್ಮೀದೇವಿ ಮುಂತಾದವರು ನಟಿಸಿದ್ದಾರೆ.

ವಿಜಯಲಕ್ಷ್ಮೀಸಿಂಗ್ ಅವರು ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಜಯಲಕ್ಷ್ಮೀಸಿಂಗ್ ಹಾಗೂ ಸುಹಾಸ್ ಗಂಗಾಧರ್ ಚಿತ್ರಕಥೆ ಬರೆದಿದ್ದಾರೆ.

ಸುನಿ ಹಾಗೂ ಅಭಿಷೇಕ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ಕರ್ಮ್ ಚಾವ್ಲಾ ಅವರ ಛಾಯಾಗ್ರಹಣವಿದೆ.

Comments are closed.