ಮನೋರಂಜನೆ

ಊಟಕ್ಕೆ ಕರೆದದ್ದೇ ತಪ್ಪಾ? ಅರ್ಜುನ್ ಸರ್ಜಾ ಪರ ಹಿರಿಯ ನಟ ರಾಜೇಶ್ ಹೇಳಿಕೆ

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್ವುಡ್​ಗೆ ಕಾಲಿಟ್ಟಿರುವ #MeToo ಅಭಿಯಾನ ನಿರೀಕ್ಷೆಮೀರಿ ಜೋರು ಸದ್ದು ಮಾಡುತ್ತಿದೆ. ಗಂಡ ಹೆಂಡತಿ ನಟಿ ಸಂಜನಾ ನಂತರ ಮತ್ತೊಬ್ಬ ನಟಿ ಶೃತಿ ಹರಿಹರನ್ ಮಾಡಿರುವ ಆರೋಪಕ್ಕೆ ಚಂದನವನದಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಶೃತಿ ಹರಿಹರನ್ ಆರೋಪಕ್ಕೆ ಗುರಿಯಾಗಿರುವ ಬಹುಭಾಷಾ ನಟ ಅರ್ಜುನ್ ಸರ್ಜಾ ಪರ ಅವರ ಕುಟುಂಬದವರು ಸೇರಿ ಬಹಳ ಮಂದಿ ಮಾತನಾಡಿದ್ದಾರೆ. ತನ್ನ ಅಳಿಯ ದೇವರಂಥ ಮನುಷ್ಯ ಎಂದು ಅರ್ಜುನ್ ಅತ್ತೆ ನೀಡಿದ ಹೇಳಿಕೆಗೆ ಅವರ ಪತಿ ಹಾಗೂ ಹಿರಿಯ ನಟ ರಾಜೇಶ್ ಧ್ವನಿಗೂಡಿಸಿದ್ದಾರೆ.

“30 ವರ್ಷಗಳ ಹಿಂದೆಯೇ ಅರ್ಜುನ್ ಸಂಭಾವಿತ ವ್ಯಕ್ತಿಯಾಗಿದ್ದರು. ಅವರು ಅತ್ಯುತ್ತಮ ನಡತೆಯವರು ಎಂದು ತಿಳಿದ ನಂತರವೇ ನನ್ನ ಮಗಳನ್ನು ಅವರಿಗೆ ಧಾರೆ ಎರೆದುಕೊಟ್ಟಿದ್ದು,” ಎಂದು ತಮ್ಮ ಅಳಿಯ ಅರ್ಜುನ್ ಸರ್ಜಾ ಅವರನ್ನು ರಾಜೇಶ್ ಗುಣಗಾನ ಮಾಡಿದ್ದಾರೆ.

ಚತುರ್ಭಾಷಾ ತಾರೆಯಾದ ನನ್ನ ಅಳಿಯನ ಮೇಲೆ ನಿನ್ನೆ ಮೊನ್ನೆ ಬಂದ ನಟಿ ಮಾಡುವ ಆಪಾದನೆಯನ್ನು ನಾನು ಒಪ್ಪಿಕೊಳ್ಳೋಕೆ ಆಗಲ್ಲ. ನಾಲ್ಕೈದು ವರ್ಷಗಳಿಂದ ಚಾಲ್ತಿಯಲ್ಲಿರುವ ನಟಿ ಹೇಳೋ ಆಪಾದನೆಗೆ ನಾನು ನನ್ನ ಹೆಂಡತಿ ಕಿವಿಗೊಡುವುದಿಲ್ಲ ಎಂದು ಹಳೆಯ ತಲೆಮಾರಿನ ನಾಯಕನಟರೂ ಆಗಿರುವ ರಾಜೇಶ್ ಸ್ಪಷ್ಟಪಡಿಸಿದ್ದಾರೆ.

ಶೃತಿ ಹರಿಹರನ್ ಮಾಡಿರುವ ಆಪಾದನೆಗಳನ್ನು ಸಾರಾಸಗಟಾಗಿ ಅಲ್ಲಗಳೆದ ರಾಜೇಶ, ಚಿತ್ರರಂಗದಲ್ಲಿ ನಟರಿಗೆ ಮಡಿವಂತಿಕೆ ಎಂಬುದು ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಚಿತ್ರರಂಗದಲ್ಲಿ ಮಡಿವಂತಿಕೆ, ಮೈಲಿಗೆ ಎರಡೂ ಇರುವುದಿಲ್ಲ. ಇಲ್ಲಿ ತನ್ಮಯತೆಯಿಂದ ನಟನೆ ಮಾಡಬೇಕಾಗುತ್ತದೆ. ನಿರ್ದೇಶಕರು ಹೇಳಿದ ಹಾಗೆ ತನ್ಮಯತೆಯಿಂದ ನಟಿಸಬೇಕಾಗುತ್ತದೆ. ಲವ್ ಸೀನ್ ಇದ್ದಾಗ ಅದನ್ನೂ ತನ್ಮಯತೆಯಿಂದಲೇ ಮಾಡಬೇಕಾಗುತ್ತದೆ. ಅದು ಮೈಲಿಗೆ ಎನಿಸುವುದಿಲ್ಲ. ಶೃತಿ ಹರಿಹರನ್ ಮಡಿವಂತಿಕೆಯ ಹೆಣ್ಣಾಗಿದ್ದರೆ ಮನೆಯಲ್ಲೇ ಇರಬೇಕಾಗಿತ್ತು. ಚಿತ್ರರಂಗಕ್ಕೆ ಬರುವ ಅಗತ್ಯ ಇಲ್ಲ,” ಎಂದು ಶ್ರುತಿ ಹರಿಹರನ್ ಅವರನ್ನು ರಾಜೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಅರ್ಜುನ್ ಸರ್ಜಾ ತನ್ನನ್ನು ಹಲವು ಬಾರಿ ಡಿನ್ನರ್​ಗೆ ಕರೆದು ಅಸಭ್ಯವಾಗಿ ನಡೆದುಕೊಂಡರೆಂದು ಶೃತಿ ಹರಿಹರನ್ ಮಾಡಿದ ಆರೋಪವನ್ನು ಅವರು ಚೀಪ್ ಪಬ್ಲಿಸಿಟಿ ಎಂದು ತಳ್ಳಿಹಾಕಿದ್ಧಾರೆ. “ನನ್ನನ್ನು ಡಿನ್ನರ್​ಗೆ ಕರೆದರು ಅನ್ನೋದು ಒಂದು ಆಪಾದನೆಯಾ? ಒಬ್ಬರನ್ನೇ ಡಿನ್ನರ್​ಗೆ ಕರೆದರಾ? ನೀವು ಡಿನ್ನರ್​ಗೆ ಹೋಗಲೇ ಇಲ್ಲವಾ? ಡಿನ್ನರ್​ಗೆ ನೀವು ಹೋಗಿ ಅಲ್ಲಿ ಅರ್ಜುನ್ ಅಸಭ್ಯವಾಗಿ ವರ್ತಿಸಿದರೆ ಆಗ ಅದು ತಪ್ಪಾಗುತ್ತಿತ್ತು. ಇದೆಲ್ಲಾ ಚೀಪ್ ಪಾಪ್ಯುಲಾರಿಟಿಗಾಗಿ ಮಾಡುತ್ತಿರುವ ಗಿಮಿಕ್… ಚಿತ್ರೀಕರಣ ನಡೆಯುವ ಸಂದರ್ಭದಲ್ಲೇ ಶೃತಿ ಯಾಕೆ ಪ್ರತಿಭಟಿಸಲಿಲ್ಲ? ಇವರೇ ಆರೋಪ ಮಾಡುತ್ತಿದ್ದಾರಾ ಅಥವಾ ಅವರ ಹಿಂದೆ ತೆರೆಮರೆಯಲ್ಲಿ ಬೇರಾರೋ ಕುಮ್ಮಕ್ಕು ಕೊಡ್ತಿದ್ದಾರಾ ಗೊತ್ತಿಲ್ಲ ಚಿತ್ರರಂಗದಲ್ಲಿ ಏನು ಬೇಕಾದರೂ ನಡೆಯಬಹುದು. ಇದೆಲ್ಲಾ ಬ್ಲ್ಯಾಕ್​ಮೇಲ್ ಅಷ್ಟೇ. ಮಾಧ್ಯಮದ ಎದುರು ಶೃತಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾನು ಸುಮ್ಮನೆ ಬಿಡುವುದಿಲ್ಲ. ಮಾನನಷ್ಟ ಮೊಕದ್ದಮೆ ಹಾಕುತ್ತೀನಿ,” ಎಂದು ರಾಜೇಶ್ ಎಚ್ಚರಿಕೆ ಕೊಟ್ಟಿದ್ದಾರೆ.

“ದೊಡ್ಡ ಕಲಾವಿದರುಗಳೇ ತೆಪ್ಪಗಿದ್ದಾರೆ. ಮಾನ ಮರ್ಯಾದೆ ಉಳಿಸಿಕೊಂಡಿದ್ದಾರೆ. ಶೃತಿ ಹರಿಹರನ್ ಇನ್ನೂ ಸರಿಯಾಗಿ ಕಣ್ಣು ಬಿಡದ ನಟಿ. ಆಕೆಗೆ ಚಿತ್ರರಂಗದ ಎಬಿಸಿಡಿ ಗೊತ್ತಿಲ್ಲ. ಆಕೆ ಏನು ಹೇಳೋದು..! ಶೃತಿಗೆ ನನ್ನ ಜೊತೆ ಮಾಡನಾಡಲು ಹೇಳಿ… ನಾನು ಮಾತಾಡ್ತೀನಿ. ಮಾಧ್ಯಮಗಳಲ್ಲಿ ನನ್ನ ಮತ್ತು ಅವಳ ನಡುವೆ ಚರ್ಚೆ ಏರ್ಪಡಿಸಿ. ನಾನು ಬರುತ್ತೀನಿ” ಎಂದು ರಾಜೇಶ್ ಹೇಳಿದ್ದಾರೆ.

ಶೃತಿ ಹರಿಹರನ್ ವಿರುದ್ಧ ರಾಜೇಶ್ ಪತ್ನಿ ಪಾರ್ವತಮ್ಮ ಹಾಗೂ ಅರ್ಜುನ್ ಸರ್ಜಾ ಅವರೂ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ. ಇದೀಗ ಬೆಂಗಳೂರಿಗೆ ಬಂದಿರುವ ಅರ್ಜುನ್ ಸರ್ಜಾ ಅವರು ನಾಳೆ ಭಾನುವಾರ ಈ ಕುರಿತು ಅಧಿಕೃತವಾಗಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ.

Comments are closed.