ಮನೋರಂಜನೆ

ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ನಟ ರಜನಿಕಾಂತ್ ಹೇಳಿದ್ದೇನು ಗೊತ್ತೇ..?

Pinterest LinkedIn Tumblr

ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಕಾವೇರಿ ನಿರ್ವಹಣಾ ಮಂಡಳಿ (ಸಿಎಂಬಿ) ರಚನೆ ಒಂದೇ ಒಪ್ಪಿಕೊಳ್ಳಬಹುದಾದ ಪರಿಹಾರ ಎಂದು ಹಿರಿಯ ನಟ ರಜನಿಕಾಂತ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಜನಿಕಾಂತ್, ನ್ಯಾಯವು ನಮ್ಮ ಪರವಾಗಿ ಇರಲಿದೆ ಎಂಬುದನ್ನು ಪ್ರಾಮಾಣಿಕವಾಗಿ ನಂಬುತ್ತೇನೆ’ ಎಂದಿದ್ದಾರೆ.

ನದಿ ವಿವಾದ ಕುರಿತು ಫೆ.16ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಆರು ವಾರಗಳಲ್ಲಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿತ್ತು. ನೀರು ಹಂಚಿಕೆ ಸಂಬಂಧ ಮಂಡಳಿ ಜತೆಗೆ, ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆ ಮಾಡುವಂತೆ ತಮಿಳುನಾಡು, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಕೋರ್ಟ್‌ ನೀಡಿದ್ದ ಗಡುವು ಮಾರ್ಚ್‌ 29ಕ್ಕೆ ಮುಗಿದಿದ್ದು, ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ತಮಿಳುನಾಡು ಸರ್ಕಾರ, ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಈ ಮಧ್ಯೆ ಕೇಂದ್ರವು ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವರೊಂದಿಗೆ ಸಿ.ಎಂ ಮಾತುಕತೆ: ಮಂಡಳಿ ರಚನೆ ಸಂಬಂಧ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಹಿರಿಯ ಸಚಿವರೊಂದಿಗೆ ಗುರುವಾರ ಮಾತುಕತೆ ನಡೆಸಿದರು.

ಚರ್ಚೆ ವೇಳೆ ಉಪಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಇದ್ದರು. ಆರು ವಾರಗಳಲ್ಲಿ ಮಂಡಳಿ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ನೀಡಿದ್ದ ಗಡುವು ಶುಕ್ರವಾರಕ್ಕೆ ಮುಗಿದಿದೆ. ಈ ವಿಷಯದ ಕುರಿತು ಹಿರಿಯ ಸಚಿವರೊಂದಿಗೆ ಪಳನಿಸ್ವಾಮಿ ಚರ್ಚೆ ನಡೆಸಿದರು.

Comments are closed.