ಮಾದಕತೆಗೆ ಇನ್ನೊಂದು ಹೆಸರೇ ಸನ್ನಿ ಲಿಯೋನ್ ಎಂಬಷ್ಟು ಫೇಮಸ್ ಆಗಿದ್ದಾರೆ ಈ ಬಾಲಿವುಡ್ ನಟಿ. ಅದರಲ್ಲೂ ಅವರಿಗೀಗ ಹಿಂದಿ ಚಿತ್ರರಂಗದ ಸ್ಟಾರ್ ನಟರ ಬೆಂಬಲ ಕೂಡ ಸಿಗುತ್ತಿರುವುದರಿಂದ ಅವರ ವೃತ್ತಿಬದುಕಿಗೆ ಹೊಸ ಮೈಲೇಜ್ ಸಿಕ್ಕಂತಾಗಿದೆ. ಶಾರುಖ್ ಖಾನ್ ನಟನೆಯ ‘ರಯೀಸ್’ ಚಿತ್ರದಲ್ಲಿ ಸನ್ನಿ ಒಂದು ಐಟಂ ಡಾನ್ಸ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿಯೇ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸದ್ಯಕ್ಕೆ ಟ್ರೇಲರ್ನಲ್ಲಿ ಆ ಹಾಡಿನ ಸಣ್ಣ ಝುಲಕ್ ತೋರಿಸಲಾಗಿದೆಯೇ ಹೊರತು, ಪೂರ್ತಿ ಹಾಡನ್ನು ಕಣ್ತುಂಬಿಕೊಳ್ಳುವ ಅವಕಾಶ ಇನ್ನೂ ಸಿಕ್ಕಿಲ್ಲ. ‘ಲೈಲಾ ಮೈ ಲೈಲಾ..’ ಎಂಬ ಆ ಗೀತೆ ಸದ್ಯದಲ್ಲೇ ರಿಲೀಸ್ ಆಗಲಿದೆ. ಈ ಐಟಂ ಸಾಂಗ್ ಬಗ್ಗೆ ನೀವೇನು ಹೇಳುತ್ತೀರಿ ಎಂದು ಕೇಳಿದರೆ, ‘ನನಗೆ ಐಟಂ ಸಾಂಗ್ ಎಂದರೆ ಏನು ಅಂತಲೇ ಅರ್ಥವಾಗುತ್ತಿಲ್ಲ’ ಎಂದು ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ ಸನ್ನಿ.
‘ಇಂಥ ಹಾಡುಗಳಲ್ಲಿ ಯಾವುದೇ ಕೆಟ್ಟ ಅಂಶಗಳು ಇರುವುದಿಲ್ಲ. ‘ರಯೀಸ್’ ಚಿತ್ರದ ಕಥೆ ಮುಂದುವರಿಯಲು ನನ್ನ ಹಾಡು ಸಹಾಯಕವಾಗಿದೆ. ಇಡೀ ಚಿತ್ರದ ಪ್ರಮುಖ ಅಂಶಗಳಲ್ಲಿ ಇದು ಕೂಡ ಒಂದು. ಎಲ್ಲರೂ ಯಾಕೆ ಇದನ್ನು ಐಟಂ ಡಾನ್ಸ್ ಎನ್ನುತ್ತಾರೋ ಗೊತ್ತಾಗುತ್ತಿಲ್ಲ. ಬಾಲಿವುಡ್ನಲ್ಲಿ ಮೊದಲಿನಿಂದಲೂ ಈ ರೀತಿಯ ಹಾಡುಗಳು ತಯಾರಾಗುತ್ತಿವೆ. ಜನ ಕೂಡ ಇಷ್ಟಪಟ್ಟಿದ್ದಾರೆ. ಇವುಗಳಿಗೆ ಐಟಂ ನಂಬರ್ ಎಂದು ಹಣೆಪಟ್ಟಿ ಕಟ್ಟುವುದು ಸರಿಯಲ್ಲ’ ಎಂಬುದು ಸನ್ನಿ ವಾದ. ಅದ್ಧೂರಿ ಬಜೆಟ್ನಲ್ಲಿ ತಯಾರಾಗಿರುವ ‘ರಯೀಸ್’ ಚಿತ್ರ ಗುಣಮಟ್ಟ ಮತ್ತು ಕಲಾವಿದರ ಸಂಭಾವನೆ ವಿಚಾರದಲ್ಲಿ ಸ್ವಲ್ಪವೂ ರಾಜೀ ಮಾಡಿಕೊಂಡಿಲ್ಲವಂತೆ. ಹಾಗಾದರೆ, ಈ ಒಂದು ಹಾಡಿಗಾಗಿ ಸನ್ನಿ ಎಷ್ಟು ಸಂಭಾವನೆ ಪಡೆದಿರಬಹುದು? ಗೊತ್ತಿಲ್ಲ. ಆದರೆ ಆ ಹಾಡಿನಿಂದ ಅವರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಖಾಸಗಿ ಕಾರ್ಯಕ್ರಮಗಳಲ್ಲಿ ಆ ಹಾಡಿಗೆ ಲೈವ್ ಆಗಿ ಹೆಜ್ಜೆ ಹಾಕುವಂತೆ ಪಂಚತಾರ ಹೊಟೇಲ್ಗಳಿಂದ ಸನ್ನಿಗೆ ಆಫರ್ ಬಂದಿದೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಹೊಸ ವರ್ಷದ ಪಾರ್ಟಿಗಳಿಗೆ ಈ ಮಾದಕ ಬೆಡಗಿಯಿಂದ ಡಾನ್ಸ್ ಮಾಡಿಸುವ ಯೋಜನೆಗಳು ತಯಾರಾಗುತ್ತಿವೆ. ಇದಕ್ಕಾಗಿ ಮುಂಬೈನ ಒಂದು ಹೊಟೇಲ್ನವರು ಸನ್ನಿಗೆ 4 ಕೋಟಿ ರೂ. ಆಫರ್ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು. ಹಾಡು ಬಿಡುಗಡೆಯಾಗುವ ಮೊದಲೇ ಈ ಪರಿ ಬೇಡಿಕೆ ಸೃಷ್ಟಿಯಾದರೆ, ಬಿಡುಗಡೆಯ ನಂತರ ಸನ್ನಿಯನ್ನು ಹಿಡಿಯುವವರ್ಯಾರು ಎಂದು ಮಾತನಾಡಿಕೊಳ್ಳುತ್ತಿದೆ ಬಾಲಿವುಡ್.
Comments are closed.